More

    ಅವಳಿ ಜಿಲ್ಲೆಗಳಿಗೆ ಜಂಟಿ ಅಗ್ರಸ್ಥಾನ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದ.ಕ, ಉಡುಪಿ ರಾಜ್ಯಕ್ಕೆ ಪ್ರಥಮ

    ಮಂಗಳೂರು/ಉಡುಪಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕರಾವಳಿಯ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಮತ್ತೊಮ್ಮೆ ಪ್ರಾಬಲ್ಯ ಸಾಬೀತುಪಡಿಸಿವೆ. ಸಮಾನ ಶೇಕಡಾವಾರು (ಶೇ.90.71) ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನದ ಗೌರವ ಹಂಚಿಕೊಂಡು ಹೊಸ ದಾಖಲೆ ಬರೆದಿವೆ.

    ಕಳೆದ ಬಾರಿ ದ್ವಿತೀಯ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಈ ಬಾರಿ ಪ್ರಥಮ ಸ್ಥಾನಕ್ಕೇರಿದೆ. ಆದರೆ ಶೇಕಡಾವಾರು ಪ್ರಮಾಣದಲ್ಲಿ ಕಳೆದ ವರ್ಷ(ಶೇ. 90.91)ಕ್ಕಿಂತ ಈ ಬಾರಿ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿ ಪರೀಕ್ಷೆಗೆ ಹಾಜರಾದ 30,835 ವಿದ್ಯಾರ್ಥಿಗಳ ಪೈಕಿ 27,970 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ 3623 ವಿದ್ಯಾರ್ಥಿಗಳಲ್ಲಿ 2599 (ಶೇ.71.74), ವಾಣಿಜ್ಯ ವಿಭಾಗದ 14,134 ವಿದ್ಯಾರ್ಥಿಗಳಲ್ಲಿ 12,870(ಶೇ.91.6) ಹಾಗೂ ವಿಜ್ಞಾನ ವಿಭಾಗದ 13,078ರಲ್ಲಿ 12,501 (ಶೇ.95.59) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದಲ್ಲಿ ಶೇ.89.33, ಗ್ರಾಮೀಣ ಪ್ರದೇಶದಲ್ಲಿ 79.85 ಫಲಿತಾಂಶ ದಾಖಲಾಗಿದೆ.

    ಅಗ್ರ 10 ಸ್ಥಾನ: ಜಿಲ್ಲೆಯ 20 ವಿದ್ಯಾರ್ಥಿಗಳು ಅಗ್ರ 10 ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರು ವಿಕಾಸ್ ಪಪೂ ಕಾಲೇಜಿನ ಅಪೂರ್ವ ಎಂ(594) ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದಿದ್ದಾರೆ. ಶಾರದಾ ಪಪೂ ಕಾಲೇಜಿನ ಪೃಥ್ವಿ ಎನ್.ಹೆಬ್ಬಾರ್(593), ಆಳ್ವಾಸ್ ಪಪೂ ಕಾಲೇಜಿನ ಹರ್ಷ ಜೆ.ಆಚಾರ್ಯ(593) 5ನೇ ಸ್ಥಾನ, ಮೂಡುಬಿದರೆ ಜೈನ್ ಪಪೂ ಕಾಲೇಜಿನ ಎಂ. ಅಭಿಷೇಕ್ ರಾವ್(592) 6ನೇ ಸ್ಥಾನ, ಸಂತ ಅಲೋಶಿಯಸ್ ಪಪೂ ಕಾಲೇಜಿನ ಅಮಿತ್ ಆಂಟೋನಿ ಸಲ್ಡಾನ ಮತ್ತು ಪ್ರೀಮಾ ಮರಿಯಾ ಫರ್ನಾಂಡಿಸ್, ಸುರತ್ಕಲ್ ಗೋವಿಂದ ದಾಸ ಪಪೂ ಕಾಲೇಜಿನ ಸ್ಮತಿ ದೇವದಾಸ್ ಕರ್ಕೇರ, ಮೂಡುಬಿದಿರೆ ಆಳ್ವಾಸ್ ಪಪೂ ಕಾಲೇಜಿನ ಈಶ್ವರ್ ವಿಜಯಸ್ವಾಮಿ ಎಲಿಗಾರ್, ಶ್ರೇಯಾ ಕೆ.ಬಿ. ಮತ್ತು ವಾಡ್ಗವೆ ಅಮೋಲ್, ವಿಕಾಸ್ ಪಪೂ ಕಾಲೇಜಿನ ಕೆ.ರಕ್ಷಾ ಭಕ್ತ ಮತ್ತು ಪ್ರಿಯಾಂಕಾ ಎಚ್.(ತಲಾ 591) 7ನೇ ಸ್ಥಾನ, ಸಂತ ಅಲೋಶಿಯಸ್ ಪಪೂ ಕಾಲೇಜಿನ ಶ್ರಾವ್ಯಾ, ಪುತ್ತೂರು ಸೇಂಟ್ ಫಿಲೋಮಿನಾ ಪಪೂ ಕಾಲೇಜಿನ ರಿತೇಶ್ ರೈ ಎಂ.(ತಲಾ 590) 8ನೇ ಸ್ಥಾನ ಪಡೆದಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಅಳಿಕೆ ಸತ್ಯಸಾಯಿ ಲೋಕಸೇವಾ ಪಪೂ ಕಾಲೇಜಿನ ರಾಘವೇಂದ್ರ ಅಪ್ಪಣ್ಣ ಬಡಿಗೇರ್ ಮತ್ತು ಶ್ರೀಶಕೃಷ್ಣ, ಪುತ್ತೂರು ಸಂತ ಫಿಲೋಮಿನ ಪಪೂ ಕಾಲೇಜಿನ ಸುಧನ್ವ ಶ್ಯಾಂ ಎಸ್.(ತಲಾ 591) 6ನೇ ಸ್ಥಾನ, ಪುತ್ತೂರು ವಿವೇಕಾನಂದ ಪಪೂ ಕಾಲೇಜಿನ ಅಂಕಿತಾ ಜಿ., ಮಂಗಳೂರು ಎಕ್ಸಲೆಂಟ್ ಪಪೂ ಕಾಲೇಜಿನ ಪ್ರಗತಿ ಕೆ.ಎಸ್.(ತಲಾ 590) 7ನೇ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಉರ್ವ ಲೇಡಿಹಿಲ್ ವಿಕ್ಟೋರಿಯಾ ಸಂಯುಕ್ತ ಪಪೂ ಕಾಲೇಜಿನ ರಿಶೆಲ್ ಬ್ರೆಟ್ನಿ ಫರ್ನಾಂಡಿಸ್(587) 7ನೇ ಸ್ಥಾನ ಪಡೆದಿದ್ದಾರೆ.

    ಹುಡುಗಿಯರೇ ಮೇಲುಗೈ: ಪ್ರತಿವರ್ಷದಂತೆ ಫಲಿತಾಂಶದಲ್ಲಿ ಈ ಬಾರಿಯೂ ದ.ಕ. ಜಿಲ್ಲೆಯಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 17189 ಮಂದಿ ವಿದ್ಯಾರ್ಥಿನಿಯರ ಪೈಕಿ 15561 ಮಂದಿ ಉತ್ತೀರ್ಣರಾಗಿದ್ದಾರೆ. 17098 ಮಂದಿ ಹುಡುಗರು ಹಾಜರಾಗಿದ್ದು, 13933 ಮಂದಿ ಉತ್ತೀರ್ಣರಾಗಿದ್ದಾರೆ.
    ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣರಾದ ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರು, ಪ್ರಾಂಶುಪಾಲರು, ಕಾಲೇಜು ಸಮಿತಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅಭಿನಂದಿಸಿದ್ದಾರೆ.

    ಜಿಲ್ಲೆ ಮೊದಲ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಕೋವಿಡ್‌ನಂತಹ ಪ್ರತಿಕೂಲ ಸನ್ನಿವೇಶದಲ್ಲೂ ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳು, ಹೆತ್ತವರು, ಅಧ್ಯಾಪಕ ಹಾಗೂ ಪ್ರಾಚಾರ್ಯ ವೃಂದದ ಸಾಮೂಹಿಕ ಪ್ರಯತ್ನವನ್ನು ಅಭಿನಂದಿಸಲೇಬೇಕು.
    – ಮೊಹಮ್ಮದ್ ಇಮ್ತಿಯಾಜ್, ಡಿಡಿಪಿಯು, ದ.ಕ.


    ಉಡುಪಿಯಲ್ಲಿ 12,961 ವಿದ್ಯಾರ್ಥಿಗಳು ಉತ್ತೀರ್ಣ
    ಪಿಯುಸಿ ಫಲಿತಾಂಶದಲ್ಲಿ ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆ ಈ ಬಾರಿಯೂ ಫಲಿತಾಂಶ (ಶೇ.90.71) ಪುನರಾವರ್ತಿಸಿದೆ. ಜಿಲ್ಲೆಯಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ ಶೇಕಡಾವಾರು ಪ್ರಮಾಣದಲ್ಲಿ ಶೇ.2ರಷ್ಟು (ಕಳೆದ ವರ್ಷ 92.2) ಕಡಿಮೆಯಾಗಿದೆ.
    ಪರೀಕ್ಷೆಗೆ ಹಾಜರಾಗಿದ್ದ 15073 ವಿದ್ಯಾರ್ಥಿಗಳಲ್ಲಿ 12961 ಮಂದಿ ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ 1781 ವಿದ್ಯಾರ್ಥಿಗಳಲ್ಲಿ 1078 ಮಂದಿ, ವಾಣಿಜ್ಯ ವಿಭಾಗದಲ್ಲಿ 8223 ವಿದ್ಯಾರ್ಥಿಗಳಲ್ಲಿ 7108 ಮಂದಿ, ವಿಜ್ಞಾನ ವಿಭಾಗದಲ್ಲಿ 5069 ವಿದ್ಯಾರ್ಥಿಗಳಲ್ಲಿ 4775 ಮಂದಿ ಉತ್ತೀರ್ಣರಾಗಿದ್ದಾರೆ.

    ರಾಜ್ಯಕ್ಕೆ ಪ್ರಥಮ: ಜಿಲ್ಲೆಯ 6 ವಿದ್ಯಾರ್ಥಿನಿಯರು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯೋದಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಅಭಿಜ್ಞಾ ರಾವ್ 596 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿನಿ ಗ್ರೀಷ್ಮಾ 4ನೇ ರ‌್ಯಾಂಕ್ ಹಾಗೂ ಪದ್ಮಿಕಾ ಕೆ. ಶೆಟ್ಟಿ 5ನೇ ರ‌್ಯಾಂಕ್ ಗಳಿಸಿದ್ದಾರೆ. ಎಂಜಿಎಂ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೇಧಾ ಭಟ್ 4ನೇ ರ‌್ಯಾಂಕ್ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕಾರ್ಕಳ ಕುಕ್ಕುಂದೂರು ಜ್ಞಾನಸುಧಾ ಕಾಲೇಜು ವಿದ್ಯಾರ್ಥಿನಿ ಬಿ. ರಿತಿಕಾ ಕಾಮತ್ ಕಾಮತ್ ಹಾಗೂ ಕುಂದಾಪುರ ವೆಂಕಟರಮಣ ಕಾಲೇಜು ವಿದ್ಯಾರ್ಥಿನಿ ಸ್ವಾತಿ ಪೈ 4ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.

    ಏರಿಳಿತ ದಾಖಲೆ: 2006, 2010, 2011, 2013ನೇ ಸಾಲಿನಲ್ಲಿ ಪ್ರಥಮ, 2005, 2007, 2008, 2009, 2012, 2014, 2015, 2016ರಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಜಿಲ್ಲೆ 2017ರಲ್ಲಿ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. 2014ರಲ್ಲಿ ಶೇ.92.32 ಹಾಗೂ 2019ರಲ್ಲಿ ಮತ್ತೆ ಶೇ.92.02 ಫಲಿತಾಂಶ ಬಂದಿದ್ದು, ಉಳಿದಂತೆ 2016ರಲ್ಲಿ ಶೇ.90.35 ಫಲಿತಾಂಶ, 2017ರಲ್ಲಿ ಶೇ.90.01, 2018ನೇ ಸಾಲಿನಲ್ಲಿ ಶೇ. 90.67ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
    8 ಕಾಲೇಜು ಶೇ.100 ಫಲಿತಾಂಶ: ಉಡುಪಿ ಜಿಲ್ಲೆಯ 3 ಸರ್ಕಾರಿ ಕಾಲೇಜು ಸೇರಿದಂತೆ ಒಟ್ಟು 8 ಪಿ.ಯು ಕಾಲೇಜುಗಳು ಶೇ.100 ಫಲಿತಾಂಶ ದಾಖಲಿಸಿವೆ. ಶಿರ್ಲಾಲು ಸರ್ಕಾರಿ ಪಪೂ ಕಾಲೇಜು, ಮಿಯ್ಯರು ಮುರಾರ್ಜಿ ದೇಸಾಯಿ ಪಪೂ ಕಾಲೇಜು, ಆರೂರು ಮೊರಾರ್ಜಿ ದೇಸಾಯಿ ಪಪೂ ಕಾಲೇಜು, ಕಾರ್ಕಳ ಕ್ರೈಸ್ತಕಿಂಗ್ ಪದವಿಪೂರ್ವ ಕಾಲೇಜು, ಮುಳೂರು ಆಲ್ ಇಹ್ಸಾನ್ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ ನಿರ್ಮಲಾ ಪಪೂ ಕಾಲೇಜು, ಉಡುಪಿ ಮಹೇಶ್ ಕಾಲೇಜು, ಉಡುಪಿ ವಿದ್ಯೋದಯ ಕಾಲೇಜು.

    ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪಾತ್ರವೇ ಮಹತ್ವದ್ದಾಗಿದೆ. ಇದರಿಂದ ಈ ಬಾರಿಯೂ ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೂರು ಸರ್ಕಾರಿ ಕಾಲೇಜುಗಳೂ ಶೇ.100 ಫಲಿತಾಂಶ ಪಡೆದಿರುವುದು ಹೆಮ್ಮೆಯ ವಿಚಾರ.
    -ಭಗವಂತ ಕಟ್ಟೆಮನಿ, ಡಿಡಿಪಿಯು ಉಡುಪಿ

    ಹಿಂದಿನ ವರ್ಷಗಳ ಫಲಿತಾಂಶ:
    ಉಡುಪಿ                       ದ.ಕ.
    ಇಸವಿ     ಸ್ಥಾನ    ಶೇ.     ಸ್ಥಾನ    ಶೇ.
    2014     2    85.57     1    86.04
    2015     2    92.32     1    93.09
    2016     2    90.35     1    90.48
    2017     1    90.01     2    89.92
    2018     2    90.67     1    91.49
    2019     1    92.20     2    90.91
    2020     1    90.71     1    90.71

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts