More

    ರಸ್ತೆ ಪ್ರಯಾಣ ಸಂಕಷ್ಟ

    ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ರೊಸಾರಿಯೋಗೆ ಹೋಗುವ ರಸ್ತೆ ಹದಗೆಟ್ಟಿದ್ದು ಈ ಬಗ್ಗೆ ಓದುಗರೊಬ್ಬರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದ್ದರು. ಸಂತ ಆ್ಯನ್ಸ್ ಶಿಕ್ಷಣ ಸಂಸ್ಥೆವರೆಗಿನ ಈ ಡಾಂಬರು ರಸ್ತೆ ಸಂಪೂರ್ಣ ಹಾಳಾಗಿರುವ ಬಗ್ಗೆ ವಿಜಯವಾಣಿ ವರದಿಗಾರ ಭರತ್ ಶೆಟ್ಟಿಗಾರ್ ವಿಸ್ತೃತ ವರದಿ ಮಾಡಿದ್ದಾರೆ.

    ಮಂಗಳೂರು: ದಕ್ಷಿಣ ಕನ್ನಡ ಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ರೋಸಾರಿಯೋ ಚರ್ಚ್ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿದೆ.
    ಸ್ಟೇಟ್‌ಬ್ಯಾಂಕ್ ಬಳಿಯ ಹ್ಯಾಮಿಲ್ಟನ್ ಬಳಿಯಿಂದ ರೊಸಾರಿಯೋ ಚರ್ಚ್ ಕಡೆಗೆ ಹೋಗುವ ರಸ್ತೆ ಸುಮಾರು 500 ಮೀಟರ್‌ನಷ್ಟು ಡಾಂಬರು ಇದ್ದು, ಮುಂದಕ್ಕೆ ಕಾಂಕ್ರೀಟ್ ರಸ್ತೆ ಇದೆ. ಸಂತ ಆ್ಯನ್ಸ್ ಶಿಕ್ಷಣ ಸಂಸ್ಥೆವರೆಗಿನ ಈ ಡಾಂಬರು ರಸ್ತೆ ಸಂಪೂರ್ಣ ಹಾಳಾಗಿದ್ದು, ಫುಟ್‌ಪಾತ್‌ನಲ್ಲೂ ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬಂತಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಕೆಲವೇ ಮೀಟರ್‌ಗಳಷ್ಟು ದೂರವಿದ್ದರೂ, ರಸ್ತೆ ಸರಿಪಡಿಸಲಾಗಿಲ್ಲ. ಶೇ.90ರಷ್ಟು ಕಾಂಕ್ರೀಟ್ ಮಾಡಿ, ಸ್ವಲ್ಪ ಭಾಗ ಹಾಗೇ ಬಿಟ್ಟಿರುವುದು ಏಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆ.

    ವಿದ್ಯಾರ್ಥಿಗಳು ಸಂಚರಿಸುವ ರಸ್ತೆ: ಈ ರಸ್ತೆಯಲ್ಲಿ ನಗರದ ಎರಡು ಪ್ರಮುಖ ಶಿಕ್ಷಣ ಸಂಸ್ಥೆಗಳಾದ ರೋಸಾರಿಯೋ ಹಾಗೂ ಸಂತ ಆ್ಯನ್ಸ್ ಸಂಸ್ಥೆಗಳಿವೆ. ರೊಸಾರಿಯೋ ಚರ್ಚ್, ಜಿಲ್ಲಾ ಪೊಲೀಸ್ ಇಲಾಖೆ ಮೈದಾನ, ಜತೆಗೆ ಮಂಗಳೂರಿನ ಪ್ರಧಾನ ಅಂಚೆ ಕಚೇರಿ, ಟೆಲಿಕಾಂ ಕಚೇರಿಯೂ ಇದ್ದು, ಮಂಗಳೂರು ಮೀನುಗಾರಿಕಾ ಬಂದರಿಗೂ ಇದೇ ಹಾದಿಯಲ್ಲಿ ಸಾಗಬಹುದು. ಘನ ವಾಹನ ಸಹಿತ ನಿರಂತರ ವಾಹನ ಸಂಚಾರವಿರುತ್ತದೆ. ಎರಡು ಶಿಕ್ಷಣ ಸಂಸ್ಥೆಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದೇ ಹಾದಿಯಲ್ಲಿ ಶಾಲೆ, ಕಾಲೇಜು, ಬಸ್ ನಿಲ್ದಾಣಕ್ಕೆ ನಡೆದುಕೊಂಡು ತೆರಳುತ್ತಾರೆ.

    ಫುಟ್‌ಪಾತ್‌ನಲ್ಲೇ ಬೃಹತ್ ಕೇಬಲ್: ಬೃಹತ್ ಗಾತ್ರದ ವಿದ್ಯುತ್ ಕೇಬಲ್‌ಗಳನ್ನು ಫುಟ್‌ಪಾತ್‌ನಲ್ಲಿ ಹರಡಲಾಗಿದೆ. ಇದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ಜತೆಗೆ ಅಪಾಯಕಾರಿಯಾಗಿಯೂ ಪರಿಣಮಿಸಿದೆ. ವಿದ್ಯುತ್ ಕಂಬಗಳಿಗೆ ಹೊಂದಿಕೊಂಡಂತೆ 4-5 ಕಡೆ ಈ ರೀತಿ ವಿದ್ಯುತ್ ಕೇಬಲ್‌ಗಳನ್ನು ಹರಡಲಾಗಿದೆ. ಜತೆಗೆ ಮಣ್ಣು, ಜಲ್ಲಿ ರಾಶಿಗಳನ್ನು ಫುಟ್‌ಪಾತ್‌ನಲ್ಲೇ ಹರಡಲಾಗಿದೆ. ಕೆಲವೆಡೆ ಫುಟ್‌ಪಾತ್‌ಗೆ ಅಳವಡಿಸಲಾಗಿ ಸ್ಲಾೃಬ್‌ಗಳೂ ಎದ್ದು ಹೋಗಿದೆ. ಇದರಿಂದ ಫುಟ್‌ಪಾತ್ ಬದಲು ರಸ್ತೆಯಲ್ಲಿ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಪೋರ್ಟ್ ವಾರ್ಡ್ ಅಭಿವೃದ್ಧಿಗೆ ಅಡ್ಡಿ: ಈ ರಸ್ತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೋರ್ಟ್ ವಾರ್ಡ್ ವ್ಯಾಪ್ತಿಗೆ ಬರುತ್ತದೆ. ಪೋರ್ಟ್ ವಾರ್ಡ್ ಅಭಿವೃದ್ಧಿಗೆ ಹಲವು ಅಡ್ಡಿಗಳಿವೆ. ಬಂದರು, ರೈಲ್ವೆ ಹಳಿಗಳು ವಾರ್ಡ್ ವ್ಯಾಪ್ತಿಯಲ್ಲಿ ಹಾದು ಹೋಗುವುದರಿಂದ ಯಾವುದೇ ಕೆಲಸ ಮಾಡಬೇಕಾದರೂ ರೈಲ್ವೆ ಇಲಾಖೆ, ಬಂದರು ಇಲಾಖೆ, ಮೀನುಗಾರಿಕಾ ಇಲಾಖೆಯ ಅನುಮತಿ ಪಡೆಯಬೇಕು. ಇತರ ವಾರ್ಡ್‌ಗಳಂತೆ ಸುಲಭದಲ್ಲಿ ಕೆಲಸ ಮಾಡಿಸಲು ಆಗುವುದಿಲ್ಲ. ಪಾಲಿಕೆಯಲ್ಲಿ ಕೌನ್ಸಿಲ್ ಆರಂಭವಾದರೆ ಹೆಚ್ಚಿನ ಕೆಲಸಗಳನು ಮಾಡಲು ಅನುಕೂಲವಾಗುತ್ತದೆ ಎನ್ನುತ್ತಾರೆ ಕಾರ್ಪೊರೇಟರ್ ಅಬ್ದುಲ್ ಲತೀಫ್.

    ರಸ್ತೆ ಅಭಿವೃದ್ಧಿಗೆ ಈಗಾಗಲೇ ನಿರ್ಧರಿಸಲಾಗಿದ್ದು, ಮರಗಳಿರುವುದರಿಂದ ಅರಣ್ಯಇಲಾಖೆ ಅನುಮತಿ ಸಿಗಲು ಬಾಕಿಯಿದೆ. ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಆವರಣ ಗೋಡೆಯೂ ರಸ್ತೆ ಬದಿಯಲ್ಲಿದೆ. ಅದನ್ನೂ ತೆರವುಗೊಳಿಸಬೇಕಿದೆ. ಒಳಚರಂಡಿ ಲೈನ್ ಕೂಡಾ ಅಲ್ಲಿ ಇಲ್ಲ. ಪ್ರಸ್ತುತ ಸ್ಮಾರ್ಟ್ ಸಿಟಿಯಲ್ಲಿ ಡ್ರೈನೇಜ್ ಲೈನ್ ಅಳವಡಿಸಿ, ಬಳಿಕ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಈಗಾಗಲೇ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.
    ಅಬ್ದುಲ್ ಲತೀಫ್, ಕಾರ್ಪೊರೇಟರ್ ಪೋರ್ಟ್ ವಾರ್ಡ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts