More

    ಮಂಗಳೂರು-ಕಾರ್ಕಳ ಹೆದ್ದಾರಿ ಯೋಜನೆಗೆ ತಡೆಯಾಜ್ಞೆ ಬಿಸಿ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ವಿಸ್ತರಣೆ ಯೋಜನೆಯ ಪರಿಹಾರ ಪ್ರಕ್ರಿಯೆಯಲ್ಲಿ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ನ್ಯಾಯಾಲಯದ ಮೆಟ್ಟಿಲೇರುತ್ತಿರುವವರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದ್ದು, ಯೋಜನೆ ಮತ್ತಷ್ಟು ವಿಳಂಬವಾಗುವ ಭೀತಿ ಎದುರಾಗಿದೆ.

    ಭೂಸ್ವಾಧೀನ ಪ್ರಕ್ರಿಯೆಗೆ ನಾಲ್ಕು ಗ್ರಾಮಗಳ ನಾಗರಿಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಅದರ ಬೆನ್ನಿಗೆ ಇದೀಗ ಮತ್ತೆ ಮೂರು ಗ್ರಾಮಗಳ ಕೃಷಿಕರು ಇದೇ ಮಾರ್ಗ ಅನುಸರಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತ ಭೂಮಾಲೀಕರ ವೇದಿಕೆಯು ಇಡೀ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಮೊಕದ್ದಮೆ ಹೂಡಲು ಸಿದ್ಧತೆ ನಡೆಸುತ್ತಿದೆ.

    ಪ್ರಸ್ತುತ ಸಾಣೂರು, ತೆಂಕ ಎಡಪದವು, ಪುತ್ತಿಗೆ, ಪಡುಮಾರ್ನಾಡು ಗ್ರಾಮಗಳ ಕೃಷಿ ಸಂತ್ರಸ್ತರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಕೃಷಿ ಭೂಮಿಗೆ ತೀರಾ ಕಡಿಮೆ ಪರಿಹಾರ ಧನ ನಿಗದಿಪಡಿಸಿರುವುದನ್ನು ವಿರೋಧಿಸಿ ಅವರು ಪ್ರತ್ಯೇಕವಾಗಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ.

    ಇದೇ ವಾರ ಬಡಗಮಿಜಾರು, ತೆಂಕಮಿಜಾರು, ಬಡಗ ಎಡಪದವು ಭಾಗದ ಭೂಮಾಲೀಕರು ಹೈಕೋರ್ಟ್ ಮೆಟ್ಟಿಲೇರಿ ಕಡಿಮೆ ಪರಿಹಾರ ನೀಡುತ್ತಿರುವುದರ ವಿರುದ್ಧ ಅರ್ಜಿ ಸಲ್ಲಿಸಲಿದ್ದಾರೆ.
    ಚತುಷ್ಪಥ ರಸ್ತೆ ಯೋಜನೆಯಲ್ಲಿ 600ಕ್ಕೂ ಹೆಚ್ಚು ಕುಟುಂಬಗಳು ಭೂಮಿ, ಅಂಗಡಿ, ಕಟ್ಟಡ, ತೋಟ, ಕೃಷಿ ಜಮೀನುಗಳನ್ನು ಕಳೆದುಕೊಳ್ಳುತ್ತಿವೆ. ಪರಿವರ್ತಿತ ಭೂಮಿಗೆ ಬಂಪರ್ ಅವಾರ್ಡ್ ಘೋಷಣೆ ಆಗಿದೆ. ಆದರೆ, ಕೃಷಿ ಭೂಮಿಗೆ ಪರಿವರ್ತಿತ ಭೂಮಿಗಿಂತ 10 ಪಟ್ಟು ಕಡಿಮೆ ಪರಿಹಾರ ಸಿಗುತ್ತಿದೆ ಎನ್ನುತ್ತಾರೆ ಕೃಷಿ ಸಂತ್ರಸ್ತರು.

    2016ರಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಗೆ 3ಎ ಅಧಿಸೂಚನೆ ಹೊರಡಿಸಲಾಗಿತ್ತು. ಅದಾದ ನಂತರ ಉದ್ದೇಶಿತ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವಕಾಶ ನೀಡಿರಲಿಲ್ಲ. ತುಂಡು ಭೂಮಿ ಇದ್ದವರು ಪರಿವರ್ತನೆ ಮಾಡಿಕೊಂಡಿದ್ದಾರೆ. ಆದರೆ, ಕೃಷಿ ಭೂಮಿ ಹೊಂದಿರುವವರು ಯಾರೂ ಪರಿವರ್ತನೆ ಮಾಡಿಕೊಂಡಿಲ್ಲ. ಅಂಥವರಿಗೆ ಕಡಿಮೆ ಅವಾರ್ಡ್ ಆಗಿದೆ. ಹೆದ್ದಾರಿ ಪ್ರಾಧಿಕಾರವು ತೆಂಕಮಿಜಾರು ಗ್ರಾಮದಲ್ಲಿ ಪರಿವರ್ತಿತ ಭೂಮಿಗೆ ಸೆಂಟ್ಸ್‌ಗೆ 2.68 ಲಕ್ಷ ರೂ ಪರಿಹಾರ ನೀಡುತ್ತಿದೆ. ಕೃಷಿ ಭೂಮಿಗೆ ಪ್ರತಿ ಸೆಂಟ್ಸ್‌ಗೆ 27 ಸಾವಿರ ರೂ. ಮಾತ್ರ ನೀಡುತ್ತಿರುವುದರ ವಿರುದ್ಧ ಈಗ ತಡೆಯಾಜ್ಞೆ ತರಲಾಗಿದೆ.

    ತಡೆಯಾಜ್ಞೆ ಬಂದು ಎರಡು ತಿಂಗಳಾಗಿದೆ, ಅದಕ್ಕೆ ಹೆದ್ದಾರಿ ಪ್ರಾಧಿಕಾರದವರು ಉತ್ತರ ಕೊಟ್ಟಿಲ್ಲ. ಕೃಷಿಯೇತರ ಜಾಗಕ್ಕೆ ಒಳ್ಳೆಯ ದರದಲ್ಲಿ ಪರಿಹಾರ ನೀಡಿರುವುದರಿಂದ ಸಂಬಂಧಿಸಿದ ಭೂಮಾಲೀಕರು ಅದನ್ನು ಆಕ್ಷೇಪವಿಲ್ಲದೆ ಪಡೆದುಕೊಳ್ಳುತ್ತಿದ್ದಾರೆ.

     ಹೋರಾಟ ಸಮಿತಿಯಿಂದಲೂ ಕೇಸ್: ಭೂಮಾಲೀಕರ ಹೋರಾಟ ಸಮಿತಿಯಿಂದ ಹಿಂದೆಯೇ ಹೈಕೋರ್ಟ್ ಮೆಟ್ಟಿಲೇರುವ ಬಗ್ಗೆ ಯೋಚನೆ ಇದ್ದರೂ ಸಮಿತಿ ನೋಂದಣಿಯಾಗದ ಕಾರಣ ಮೊಕದ್ದಮೆ ಹೂಡಿರಲಿಲ್ಲ. ಈಗ ನಮ್ಮ ಸಮಿತಿ ನೋಂದಣಿ ಆಗಿದೆ, ಒಟ್ಟು ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿ ಆಗಿಲ್ಲ, ಪ್ರಸ್ತಾಪಿತ ಅಲೈನ್‌ಮೆಂಟ್ ಸರಿಯಿಲ್ಲ ಹಾಗೂ ಪರಿಹಾರ ಪ್ರಕಟಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಸ್ತಕ್ಷೇಪ ಮಾಡುವುದನ್ನು ವಿರೋಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಸಮಿತಿಯ ಕಾರ್ಯದರ್ಶಿ ಪ್ರಕಾಶ್ಚಂದ್ರ ‘ವಿಜಯವಾಣಿ’ಗೆ ತಿಳಿಸಿದರು.

    ಏನಿದು ಯೋಜನೆ?: ಮಂಗಳೂರು – ಕಾರ್ಕಳ ಹೆದ್ದಾರಿಯಲ್ಲಿ ಪ್ರಸ್ತುತ ಕುಲಶೇಖರದಿಂದ ಮೂಡುಬಿದಿರೆ ಸಮೀಪದ ಸಾಣೂರು ವರೆಗಿನ 45 ಕಿ.ಮೀ. ಹೆದ್ದಾರಿ ಭಾಗದ ಚತುಷ್ಪಥ ಕಾಮಗಾರಿ ಗುತ್ತಿಗೆಯನ್ನು ದಿಲೀಪ್ ಬಿಲ್ಡ್‌ಕಾನ್ ಪಡೆದುಕೊಂಡಿದೆ. ಈಗಾಗಲೇ ಗುತ್ತಿಗೆ ವಹಿಸಿಕೊಡಲಾಗಿದೆ, ಆದರೆ ಒಪ್ಪಂದ ಇನ್ನಷ್ಟೇ ಆಗಬೇಕಿದ್ದು, ಅಕ್ಟೋಬರ್ ವೇಳೆಗೆ ಕಾಮಗಾರಿ ಶುರುವಾಗುವ ನಿರೀಕ್ಷೆ ಇದೆ. 2 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಬೇಕಿದೆ. ಸದ್ಯ ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ. ಗುರುಪುರ ಮತ್ತು ಮೂಡುಬಿದಿರೆಯಲ್ಲಿ ಬೈಪಾಸ್, ಕೈಕಂಬ ಮತ್ತು ಮೂಡುಬಿದಿರೆ ಬಳಿ ಎರಡು ಮೇಲ್ಸೇತುವೆ, 10 ಕೆಳಸೇತುವೆಗಳ ನಿರ್ಮಾಣವು ಯೋಜನೆಯಲ್ಲಿದೆ.

    ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೇಂದ್ರ ಮೌಲ್ಯಮಾಪನ ಸಮಿತಿ(ಸಿವಿಸಿ) ನಿಯಮದಂತೆ ಪರಿಹಾರ ನೀಡುತ್ತಿದೆ. ಇದರಲ್ಲಿ ತಾರತಮ್ಯ ನಡೆಯುತ್ತಿಲ್ಲ. 1950ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೀತಿಯಂತೆ ಸ್ವಾಧೀನ ಕಾರ್ಯ ನಡೆದಿದೆ.
    -ಶಿಶುಮೋಹನ್, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts