More

    ಅಪಾಯಕಾರಿ ವೇಗದಲ್ಲಿ ಕರೊನಾ, ದ.ಕ. 8 ವೈದ್ಯರ ಸಹಿತ 44 ಮಂದಿಗೆ ಪಾಸಿಟಿವ್

    ಮಂಗಳೂರು/ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಅಪಾಯಕಾರಿಯಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಇದುವರೆಗೆ ಹೊರರಾಜ್ಯ, ವಿದೇಶಗಳಿಂದ ಬಂದವರಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದರೆ, ಇತ್ತೀಚಿನ ಕೆಲದಿನಗಳಿಂದ ಸ್ಥಳೀಯವಾಗಿ ಸಂಪರ್ಕದಿಂದ ಹರಡುತ್ತಿರುವುದು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಮಂಗಳವಾರ ಒಂದೇ ದಿನ ಎಂಟು ವೈದ್ಯರು ಮತ್ತು ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಇವರೂ ಸೇರಿ ಜಿಲ್ಲೆಯಲ್ಲಿ 44 ಮಂದಿಗೆ ಸೋಂಕು ದೃಢವಾಗಿದೆ. ಇದರಲ್ಲಿ ಇಬ್ಬರು ಸೌದಿ ಅರೇಬಿಯಾದಿಂದ, ಒಬ್ಬರು ಹೊರ ರಾಜ್ಯದಿಂದ, ಇನ್ನಿಬ್ಬರು ಹೊರ ಜಿಲ್ಲೆಯಿಂದ ಬಂದವರು. 9 ಪ್ರಕರಣಗಳು ಐಎಲ್‌ಐ(ಇನ್‌ಪ್ಲುಯೆಂಜಾ ಮಾದರಿ ಕಾಯಿಲೆ), 3 ತೀವ್ರ ಉಸಿರಾಟ ತೊಂದರೆ, 21 ಮಂದಿ ಪ್ರಾಥಮಿಕ ಸಂಪರ್ಕದಿಂದ ತಗಲಿರುವ ಸೋಂಕು ಆಗಿದ್ದರೆ, ಐವರ ಸಂಪರ್ಕವನ್ನು ಶೋಧಿಸಲಾಗುತ್ತಿದೆ.

    ಚಿಕಿತ್ಸೆ ಪೂರ್ಣಗೊಂಡಿರುವ 17 ಮಂದಿಯನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 639ಕ್ಕೆ ಏರಿಕೆಯಾಗಿದ್ದು 292 ಸಕ್ರಿಯ ಪ್ರಕರಣಗಳಿವೆ. 443 ಮಂದಿ ಬಿಡುಗಡೆಯಾಗಿದ್ದಾರೆ.

    ರ‌್ಯಾಂಡಮ್ ಟೆಸ್ಟ್ ಒಂದು ಪಾಸಿಟಿವ್: ಕಳೆದ ಕೆಲದಿನಗಳಿಂದ ಮಂಗಳೂರು ಹಾಗೂ ಉಳ್ಳಾಲ ಪರಿಸರದಲ್ಲಿ ರ‌್ಯಾಂಡಮ್ ಟೆಸ್ಟ್ ಮೂಲಕ ಸರ್ವೇಲೆನ್ಸ್ ನಡೆಸಲಾಗುತ್ತಿದೆ. ಅದರಲ್ಲಿ ಒಂದು ಪಾಸಿಟಿವ್ ಕೇಸ್ ಸಿಕ್ಕಿದ್ದು, ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

    ಎಲ್ಲೆಲ್ಲಿ ಸೋಂಕು ಪತ್ತೆ?:
    ಮಂಗಳೂರಿನ ಕೊಡಿಯಾಲ್‌ಬೈಲ್‌ನ ರೆಸ್ಟೋರೆಂಟ್‌ವೊಂದರ ಮಾಲೀಕರಿಗೆ ಪಾಸಿಟಿವ್ ಬಂದಿದ್ದು, ರೆಸ್ಟೋರೆಂಟ್ ಸೀಲ್‌ಡೌನ್ ಮಾಡಲಾಗಿದೆ.
    ಕಾಲು ನೋವಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಬಜ್ಪೆ ಠಾಣೆ ವ್ಯಾಪ್ತಿಯ ಕುಪ್ಪೆಪದವು ಆಚಾರಿಜೋರದ 58 ವರ್ಷದ ಮಹಿಳೆಗೆ ಪಾಸಿಟಿವ್ ಪತ್ತೆಯಾಗಿದೆ. ಮಹಿಳೆ ಶನಿವಾರ ಮಂಗಳೂರಿನ ಆಸ್ಪತ್ರೆಗೆ ಹೋಗಿದ್ದು, ಇದೇ ವೇಳೆ ಗಂಟಲ ದ್ರವದ ಮಾದರಿ ಪಡೆಯಲಾಗಿತ್ತು. ಹಿಂದೆ ಚಿಕಿತ್ಸೆಗಾಗಿ ಕಾರ್ಕಳದ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದು, ಉಳಿದಂತೆ ಮನೆಯಲ್ಲೇ ಇದ್ದರು.
    ಗೂಡ್ಸ್ ಲಾರಿ ಚಾಲಕನಾಗಿರುವ ಪುತ್ತೂರು ನಗರಸಭಾ ವ್ಯಾಪ್ತಿಯ ಚಿಕ್ಕಪುತ್ತೂರಿನ 30 ವರ್ಷದ ಯುವಕ, ಮೈಸೂರಿನಲ್ಲಿ ಉದ್ಯೋಗಿಯಾಗಿದ್ದು ಎರಡು ತಿಂಗಳ ಹಿಂದೆ ಮರಳಿದ್ದ ಕಬಕ ಗ್ರಾಮದ ಮುರ ನಿವಾಸಿ 26 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
    ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ನರ್ಸ್ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ. ಅವರು ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸಿ ಪ್ರತಿದಿನ ಮನೆಗೆ ಬರುತ್ತಿದ್ದರು.

    ವೈದ್ಯರೇ ಸುಲಭ ತುತ್ತು: ವೈದ್ಯರಿಗೆ ಕರೊನಾ ಕಾಟ ಮುಂದುವರಿದಿದ್ದು, ಸೋಂಕಿತ ರೋಗಿಗಳು ಬರುತ್ತಿರುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಮಂಗಳವಾರ ಸೋಂಕು ದೃಢಗೊಂಡ 8 ವೈದ್ಯರ ಪೈಕಿ ದ.ಕ. ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಮುಖ್ಯವೈದ್ಯ ಹಾಗೂ ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದ್ದಾರೆ. ಇದರೊಂದಿಗೆ ಕಳೆದ ಒಂದು ವಾರದಲ್ಲಿ 20ರಷ್ಟು ವೈದ್ಯರಿಗೆ ಸೋಂಕು ತಗಲಿದಂತಾಗಿದೆ. 50ಕ್ಕೂ ಹೆಚ್ಚು ಮಂದಿ ನಿಗಾವಣೆಯಲ್ಲಿದ್ದಾರೆ. ಖಾಸಗಿ ಆಸ್ಪತ್ರೆಯೊಂದರ ಇಎನ್‌ಟಿ ವಿಭಾಗವಿಡೀ ನಿಗಾವಣೆಯಲ್ಲಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಜು.6ರವರೆಗೆ ದಾಖಲಾತಿ ಸ್ಥಗಿತಗೊಳಿಸಲಾಗಿದೆ.

    ಉಳ್ಳಾಲ ಠಾಣೆ ಬಿಡದ ಕರೊನಾ
    ಉಳ್ಳಾಲ: ಇಲ್ಲಿನ ಪೊಲೀಸ್ ಠಾಣೆಯ ಒಬ್ಬ ಕಾನ್ಸ್‌ಟೆಬಲ್ ಹಾಗೂ ಒಬ್ಬ ಗೃಹರಕ್ಷಕ ದಳ ಸಿಬ್ಬಂದಿ ಮಂಗಳವಾರ ಪಾಸಿಟಿವ್ ಆಗಿದ್ದಾರೆ. ಎಸ್‌ಐ, ಎಎಸ್‌ಐ ಸಹಿತ ಹತ್ತು ಮಂದಿಯಲ್ಲಿ ಹಿಂದೆಯೇ ಸೋಂಕು ಪತ್ತೆಯಾಗಿತ್ತು. ಇದರೊಂದಿಗೆ ಠಾಣೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

    ಹರೇಕಳದಲ್ಲೂ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಐಕು ಎಂಬಲ್ಲಿ ದಂಪತಿಗೆ ಬಾಧಿಸಿದ್ದು, ಅಲ್ಲಿನ ನಾಲ್ಕು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ದೇರಿಕಟ್ಟೆಯ 67 ವರ್ಷದ ವ್ಯಕ್ತಿ ಚಿಕಿತ್ಸೆಗಾಗಿ ಕುತ್ತಾರ್‌ನ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದು, ಅವರಿಗೆ ಅಲ್ಲೇ ಸೋಂಕು ತಗುಲಿರಬಹುದೆಂದು ಅಂದಾಜಿಸಲಾಗಿದೆ. ಈ ಪ್ರದೇಶದ ಮೂರು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

    ಕಾಸರಗೋಡಿನ 8 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ ಎಂಟು ಮಂದಿಗೆ ಮುಂಗಳವಾರ ಹೊಸದಾಗಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts