More

    ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್

    ಮಂಗಳೂರು: ದ.ಕ.ಜಿಲ್ಲೆಯಲ್ಲಿ ಈವರೆಗೆ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಕಳೆದೊಂದು ತಿಂಗಳಿಂದಲೇ ಎಲ್ಲ ರೀತಿಯ ಮುನ್ನೆಚ್ಚ ರಿಕಾ ಕ್ರಮ ವಹಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ 20 ಬೆಡ್ ಪ್ರತ್ಯೇಕ ಐಸೋಲೇಷನ್ ವಾರ್ಡ್ ಮತ್ತು ಎರಡು ಐಸಿಯು ವಾರ್ಡ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಹೇಳಿದರು.
    ಕರೊನಾ ವೈರಸ್ ಆತಂಕ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಶುಕ್ರವಾರ ಆಯೋಜಿಸಲಾದ ಪತ್ರಿಕಾ ಸಂವಾದದಲ್ಲಿ ಮಾತನಾಡಿದರು.
    ವೆನ್ಲಾಕ್ ಆಸ್ಪತ್ರೆ 10 ಬೆಡ್‌ಗಳ ಐಸೋಲೇಷನ್ ವಾರ್ಡ್ ಇದ್ದು, ಪಕ್ಕದಲ್ಲಿ ನಿರ್ಮಾಣವಾಗಿರುವ ಆಯುಷ್ ಹೊಸ ಕಟ್ಟಡದಲ್ಲಿ 10 ಬೆಡ್‌ಗಳನ್ನು ಮೀಸಲಿಡಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಇತರ ಕಟ್ಟಡಗಳಲ್ಲೂ ಚಿಕಿತ್ಸಾ ಕೇಂದ್ರ ಆರಂಭಿಸುವ ಚಿಂತನೆಯಿದೆ. ಅದಕ್ಕಾಗಿ ಕೆಲವು ಕಟ್ಟಡಗಳನ್ನು ಗುರುತಿಸಲಾಗಿದೆ. ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾದರೆ ಆತನಿಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನದಂತೆ 28 ದಿನಗಳ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಚಿಕಿತ್ಸಾ ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಗಂಟಲಿನ ದ್ರವದ ಸ್ಯಾಂಪಲ್ ತೆಗೆದು ನೆಗೆಟಿವ್ ಬಂದರೆ ಮಾತ್ರ ಬಿಡುಗಡೆಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
    ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಖಾದರ್ ಷಾ ಉಪಸ್ಥಿತರಿದ್ದರು.
    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

    ಲ್ಯಾಬ್ ಆರಂಭಿಸಲು ಪ್ರಯತ್ನ: ಜಿಲ್ಲೆಯಲ್ಲಿ ಪತ್ತೆಯಾಗುವ ಶಂಕಿತರ ಗಂಟಲಿನ ದ್ರವವನ್ನು ಪ್ರಸ್ತುತ ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಂಗಳೂರಿನಲ್ಲಿ ಕರೊನಾ ಪತ್ತೆ ಲ್ಯಾಬ್ ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಐಸಿಎಂಆರ್ ಗೈಡ್‌ಲೈನ್ ಪ್ರಕಾರ ಲ್ಯಾಬ್ ನಿರ್ಮಾಣವಾಗಬೇಕಿದ್ದು, ಐಸಿಎಂಆರ್ ತಂಡ ಜಿಲ್ಲೆಗೆ ಭೇಟಿ ಈ ಕುರಿತು ಪರಿಶೀಲನೆ ನಡೆಸಬೇಕಿದೆ. ಶೀಘ್ರ ಲ್ಯಾಬ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.

    ಕ್ವಾರಂಟೈನ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ
    ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ತಮ್ಮ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದು, ಮಾ.22ವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ಇರುವುದರಿಂದ ಸಂಖ್ಯೆ ಎರಡು ಸಾವಿರದ ಗಡಿ ದಾಟಬಹುದು. ಈ ವೇಳೆ ಕರೊನಾ ಲಕ್ಷಣಗಳೇನಾದರೂ ಕಂಡು ಬಂದಲ್ಲಿ ದೂರವಾಣಿ-104 ಅಥವಾ 1077ಕ್ಕೆ ಕರೆ ಮಾಡಬಹುದು. ಇದರಲ್ಲಿ ಮನೆಯವರಿಗೂ ಹೆಚ್ಚು ಅಪಾಯ ಇರುವುದರಿಂದ ಕುಟುಂಬದವರು ಜಾಗರೂಕತೆ ವಹಿಸುವ ಅವಶ್ಯಕತೆಯಿದೆ. ಆರೋಗ್ಯ ಇಲಾಖೆಯಿಂದ ಪ್ರತಿನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತಿದೆ. ಇದು ಕೆಲವರಿಗೆ ಕಿರಿಕಿರಿ ಅನಿಸಿದರೂ ಸಹಕರಿಸುವುದು ಅವಶ್ಯ ಎಂದು ಸಿಂಧೂ ಹೇಳಿದರು.

    ಸಾರ್ವಜನಿಕರು ಅಂತರ ಕಾಯ್ದಕೊಳ್ಳುವುದು ಅಗತ್ಯ. ವಯಸ್ಸಾದವರಲ್ಲಿ ಮರಣ ಪ್ರಮಾಣ ಹೆಚ್ಚಿರುವುದರಿಂದ ಹಿರಿಯರು ಮನೆ ಬಿಟ್ಟು ಹೊರಗೆ ಬಾರದಿರುವುದು ಉತ್ತಮ. ಜತೆಗೆ ಮಕ್ಕಳನ್ನೂ ಮನೆಯಲ್ಲಿರುವಂತೆ ನೋಡಿಕೊಳ್ಳಬೇಕು. ಅವಶ್ಯವಿಲ್ಲದ ಪ್ರವಾಸಗಳನ್ನು ರದ್ದುಗೊಳಿಸುವುದು ಉತ್ತಮ. ಕಚೇರಿಗಳಿಗೆ ಹೋಗುವವರು ಹುಷಾರಿಲ್ಲದಿದ್ದರೆ ರಜಾ ತೆಗೆದುಕೊಳ್ಳಬೇಕು. ಮುಂದಿನ ಹಂತಕ್ಕೆ ಹೋಗದಂತೆ ತಡೆಯುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಕೀಯ ಅಧಿಕಾರಿ, ಪಿಡಿಒ-ವಿಎ, ಶಾಲೆ-ಕಾಲೇಜು ಪ್ರಾಂಶುಪಾಲಕರು, ಆಶಾ ಕಾರ್ಯಕರ್ತರು ತಂಡ ರಚಿಸಲಾಗಿದೆ. ಜನರೂ ತಮ್ಮಲ್ಲಿರುವ ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿಕೊಳ್ಳಬಹುದು ಎಂದರು.

    ಮಾಂಸವನ್ನು 20 ನಿಮಿಷ ಬೇಯಿಸಿ ತಿನ್ನಿ
    ಆಡು, ಕುರಿ, ಕೋಳಿ ಸೇರಿಂತೆ ಮಾಂಸಾಹಾರ ಸೇವಿಸಲು ಸದ್ಯ ಯಾವುದೇ ಸಮಸ್ಯೆಯಿಲ್ಲ. ಆದರೆ ಕನಿಷ್ಠ 20 ನಿಮಿಷ ಸುಮಾರು 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬೇಯಿಸಿ ತಿನ್ನಬೇಕು. ಇದರಿಂದ ವೈರಸ್‌ಗಳು ಬದುಕಿ ಉಳಿಯುವುದಿಲ್ಲ. ಆದರೆ ಅರೆಬೆಂದ ಮಾಂಸವನ್ನು ಸೇವಿಸುವುದು ಅಪಾಯ ಎಂದು ಡಿಎಚ್‌ಒ ಡಾ.ರಾಜೇಶ್ ತಿಳಿಸಿದರು.

    ಕರೊನಾ ಸೋಂಕಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಪಾಸಿಟಿವ್ ಪ್ರಕರಣ ಪತ್ತೆಯಾದರೆ ಸೋಂಕಿನ ಲಕ್ಷಣಗಳಾದ ಶೀತ, ಕೆಮ್ಮು, ಜ್ವರ ಇತ್ಯಾದಿ ಸೋಂಕು ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ.
    ಡಾ.ರಾಜೇಶ್
    ಡಿಎಚ್‌ಒ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts