More

    ನಗರದಲ್ಲಿ ಐದು ಪ್ರತಿಭಟನೆ Auto Draft

    ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಮಂಗಳವಾರ ಐದು ಪ್ರತ್ಯೇಕ ಪ್ರತಿಭಟನೆ ನಡೆದವು.


    ಉದ್ಯೋಗ ಭದ್ರತೆ ನೀಡಬೇಕು ಮತ್ತು ಮೃತಪಟ್ಟಿರುವ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಡಿಸಿ ಕಚೇರಿ ಎದುರು ಧರಣಿ ನಡೆಸಿದರು.


    ರಾಜ್ಯದ 412 ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 14,564 ಅತಿಥಿ ಉಪನ್ಯಾಸಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಹಲವು ತಿಂಗಳಿಂದ ವೇತನವಿಲ್ಲದೆ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮ ಸೇವೆಯನ್ನು ಅಗತ್ಯವೆಂದು ಪರಿಗಣಿಸಿ 12 ತಿಂಗಳ ವೇತನ ನೀಡುವ ಮೂಲಕ ಉದ್ಯೋಗ ಭದ್ರತೆ ಘೋಷಿಸಬೇಕು. ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವವರೆಗೂ ಹೊಸ ಬೋಧಕರ ನೇಮಕಾತಿ ಮಾಡಬಾರದು ಎಂದು ಆಗ್ರಹಿಸಿದರು.


    ಜೀವನ ನಿರ್ವಹಣೆ ಮಾಡಲಾಗದೆ ಜಿಲ್ಲೆಯಲ್ಲಿ ಇಬ್ಬರು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದು ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಚಿವರು ಪ್ರತಿಕ್ರಿಯಿಸಿರುವುದು ಸರಿಯಲ್ಲ, ಕೂಡಲೇ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.


    ಪ್ರತಿಭಟನೆಯಲ್ಲಿ ಬಿ.ಎಸ್.ನಾಗರಾಜು, ಸಿದ್ದರಾಜು, ಕುಮಾರ್, ಶ್ರೀನಿವಾಸ್, ಸುರೇಶ್ ಇದ್ದರು.


    ರೇಷ್ಮೆ ಬೆಳೆಗಾರರನ್ನು ರಕ್ಷಿಸಿ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ರೇಷ್ಮೆ ಬೆಳೆಗಾರರ ಒಕ್ಕೂಟದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.


    ಬಸವರಾಜು ಆಯೋಗದ ಸಮಿತಿ ವರದಿಯಂತೆ ರೇಷ್ಮೆ ಗೂಡಿಗೆ ಸರಿಯಾದ ದರ ಕೊಡಬೇಕು. ಪ್ರತಿ ಕೆ.ಜಿ.ಮಿಶ್ರ ತಳಿಗೆ 50 ರೂ., ದ್ವಿ ತಳಿ ಗೂಡಿಗೆ 60 ರೂ.ನಂತೆ ತಕ್ಷಣ ಪ್ರೋತ್ಸಾಹಧನ ನೀಡಬೇಕು. ಒಂದು ಎಕರೆ ರೇಷ್ಮೆ ಬೆಳೆಗೆ 50 ಸಾವಿರ ರೂ.ನಂತೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರೇಷ್ಮೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೂಡಲೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದರು.


    ರೇಷ್ಮೆ ಬೆಳೆಗಾರರಿಗೆ ಪ್ರತ್ಯೇಕ ಆರೋಗ್ಯ ವಿಮೆ ಘೋಷಿಸಬೇಕು. ಕೊಳ್ಳೆಗಾಲದಂತೆ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ತೂಕ ಮಾಡುವ ವ್ಯವಸ್ಥೆ ಅಳವಡಿಸಬೇಕು. ಜಿಲ್ಲೆಯಲ್ಲಿ 35 ತಾಂತ್ರಿಕ ಮತ್ತು ವಿಸ್ತೀರ್ಣ ರೇಷ್ಮೆ ಕೇಂದ್ರಗಳಿದ್ದು, ಇಲ್ಲಿಗೆ ಸಿಬ್ಬಂದಿ ನಿಯೋಜಿಸಿ ರೈತರಿಗೆ ಅಗತ್ಯ ಮಾಹಿತಿ ಕೊಡಿಸಬೇಕು. ಚಾಕಿ ಸಾಕಣೆದಾರರಿಗೆ ನಿಗದಿತ ದರ ಮಾಡಲು ಸರ್ಕಾರ ಕನಿಷ್ಠ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಕೆ.ಬಿ.ಶಿವಕುಮಾರ, ಜೋಗಿಗೌಡ, ಕೆ.ಸಿ.ಬೋರೇಗೌಡ, ಮಹದೇವು ಇತರರಿದ್ದರು.


    ಸಿಪಿಐಎಂ ಪ್ರತಿಭಟನೆ: ಜನರಿಗೆ ಉದ್ಯೋಗ, ಆಹಾರ ಮತ್ತು ಆರೋಗ್ಯ ಸುರಕ್ಷತೆಗೆ ಒದಗಿಸುವಂತೆ ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರು ಡಿಸಿ ಕಚೇರಿ ಎದುರು ಧರಣಿ ನಡೆಸಿದರು.


    ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಹೊಟ್ಟೆಪಾಡಿಗಾಗಿ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲ್ಲದ ಎಲ್ಲ ಕುಟುಂಬಗಳಿಗೆ ತಿಂಗಳಿಗೆ 7,500 ರೂ.ನಂತೆ ನಗದು ವರ್ಗಾವಣೆ ಮಾಡಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ.ಯಂತೆ ಆರು ತಿಂಗಳು ಉಚಿತ ಆಹಾರ ಧಾನ್ಯ ನೀಡಬೇಕು. ನರೇಗಾ ಯೋಜನೆಯಡಿ 200 ದಿನ ಉದ್ಯೋಗ ನೀಡಬೇಕು. ಸಾರ್ವಜನಿಕ ವಲಯದ ಖಾಸಗೀಕರಣ ಮಾಡುವ ಕಾನೂನು ರದ್ದುಗೊಳಿಸಬೇಕು. ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಬಾರದು ಎಂದು ಆಗ್ರಹಿಸಿದರು.


    ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಪುಟ್ಟಮಾದು, ಸಿ.ಕುಮಾರಿ, ನಾರಾಯಣ, ಚಂದ್ರಶೇಖರಮೂರ್ತಿ ಇದ್ದರು.
    ದೃಢೀಕರಣ ಪತ್ರ ಕೊಡಿಸಿ: ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಉದ್ಯೋಗ ದೃಢೀಕರಣ ಪತ್ರ ನೀಡುವಂತೆ ಒತ್ತಾಯಿಸಿ ಸವಿತಾ ಸಮಾಜದಿಂದ ಜಿಪಂ ಕಚೇರಿ ಎದುರು ಪ್ರತಿಭಟನೆ ಮಾಡಿ ಸಿಇಒ ಕೆ.ಯಾಲಕ್ಕಿಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.


    ಲಾಕ್‌ಡೌನ್ ಹಿನ್ನೆಲೆಯಲ್ಲಿ ಸವಿತಾ ಸಮಾಜದವರಿಗೆ ಅನುಕೂಲವಾಗಲೆಂದು ಸರ್ಕಾರ ತಲಾ ಐದು ಸಾವಿರ ರೂ. ಸಹಾಯಧನ ಘೋಷಿಸಿದೆ. ಅಂತೆಯೇ, ಈ ಹಣವನ್ನು ಪಡೆಯಲು ಉದ್ಯೋಗ ದೃಢೀಕರಣ ಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ, ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಮಾಹಿತಿ ಇಲ್ಲವೆಂದು ಹೇಳುತ್ತಿದ್ದಾರೆ. ಆದ್ದರಿಂದ, ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರು.


    ಪ್ರತಿಭಟನೆಯಲ್ಲಿ ಡಿ.ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಸವಿತಾ ಸಮಾಜದ ಮುಖಂಡ ಎಸ್.ನಾಗರಾಜ್ ಇದ್ದರು.
    ರಕ್ಷಣೆ ನೀಡಲು ಆಗ್ರಹ: ಕೆ.ಆರ್.ಪೇಟೆ ತಾಲೂಕು ಚುಜ್ಜಲಕ್ಯಾತನಹಳ್ಳಿ ಗ್ರಾಮದ ಪೃಥ್ವಿ ಮತ್ತವರ ಕುಟುಂಬದವರಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.


    ಗ್ರಾಮದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳಿದ್ದು, ಎಲ್ಲ ಸಮುದಾಯವರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ಪೃಥ್ವಿ ಎಂಬಾತ ಪತ್ರಕರ್ತನೆಂದು ಹೇಳಿಕೊಂಡು ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾನೆ. ದೇವಸ್ಥಾನ ಸ್ಥಾಪಿಸಿ ಎಲ್ಲರೂ ಬಂದು ಪೂಜೆ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ತ್ರಿಶೂಲದಿಂದ ಚುಚ್ಚಿ ಸಾಯಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದಾನೆ. ಅಲ್ಲದೆ, ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಅರ್ಚಕರಿಗೆ ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಸುಳ್ಳು ವರದಿ ಮಾಡಿ ಕೇಸು ದಾಖಲಿಸುತ್ತೇವೆಂದು ಬೆದರಿಕೆ ಹಾಕುತ್ತಿದ್ದಾನೆ. ಆದ್ದರಿಂದ, ರಕ್ಷಣೆ ನೀಡುವಂತೆ ಮನವಿ ಮಾಡಿದರು.


    ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶಿವರಾಮೇಗೌಡ, ಸಣ್ಣ ನಂಜೇಗೌಡ, ದೇವರಾಜು, ಹರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts