More

    ಫಾರ್ಮಸಿಸ್ಟ್‌ಗಳಿಂದ ಹಂತ ಹಂತದ ಹೋರಾಟ

    ಮಂಡ್ಯ: ವೇತನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಸರ್ಕಾರಿ ಫಾರ್ಮಸಿಸ್ಟ್ ಸಂಘದ ಸದಸ್ಯರು ಗುರುವಾರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಡಿಸಿ ಕಚೇರಿಗೆ ತೆರಳಿದ ಸದಸ್ಯರು 19 ಬೇಡಿಕೆಗಳ ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ಅವರಿಗೆ ಹಸ್ತಾಂತರಿಸಿದರು.
    ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಗಿರೀಶ್, ರಾಜ್ಯದಲ್ಲಿ ಫಾರ್ಮಸಿಸ್ಟ್ ಹುದ್ದೆಗಳು ಖಾಲಿಯಿದ್ದರೂ 2010ರಿಂದ ಈವರೆಗೂ ನೇಮಕಾತಿ ಮಾಡಿಲ್ಲ. ಮುಂಬಡ್ತಿ ಇಲ್ಲದೆ ನಿವೃತ್ತಿವರೆಗೂ ಫಾರ್ಮಸಿಸ್ಟ್‌ಗಳಾಗಿಯೇ ದುಡಿಯಬೇಕಿದೆ. ನಿವೃತ್ತಿ ನಂತರ ಇತರ ನೌಕರರಿಗೆ ಸಿಗುವಷ್ಟು ಸೌಲಭ್ಯ ಫಾರ್ಮಸಿಸ್ಟ್‌ಗಳಿಗೆ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆ, ಔಷಧ ಉಗ್ರಾಣಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೇವೆ ಮಾಡಿದ್ದೇವೆ. ಆದರೂ ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

    ಶೀಘ್ರವೇ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಪ್ರತಿಭಟಿಸಲಾಗುತ್ತಿದೆ. ಜ.12ರವರೆಗೆ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕೆಲಸ ನಿರ್ವಹಿಸುತ್ತೇವೆ. ಜ.30ರಂದು ಬೆಂಗಳೂರಿನಲ್ಲಿ ರ‌್ಯಾಲಿ ನಡೆಸಲಾಗುವುದು. ಫೆ.10ರಿಂದ 17ರವರೆಗೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಾಗುವುದು. ಮಾ.10 ರಿಂದ 17ರವರೆಗೆ ರಾಜ್ಯಾದ್ಯಂತ ಎಲ್ಲ ಹಂತದ ಆಸ್ಪತ್ರೆಗಳ ಹೊರರೋಗಿಗಳ ಸೇವಾ ವಿಭಾಗಗಳಲ್ಲಿ ಫಾರ್ಮಸಿಸ್ಟ್ ಸೇವೆ ಸ್ಥಗಿತಗೊಳಿಸಲಾಗುವುದು. ಏ.10ರಿಂದ ಬೇಡಿಕೆ ಈಡೇರುವವರೆಗೆ ಕರ್ತವ್ಯಕ್ಕೆ ಹಾಜರಾಗದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಗೋಪಾಲ್, ಕೋಶಾಧ್ಯಕ್ಷ ಜಗದೀಶ್, ಉಮೇಶ್, ವಿಜಯಕುಮಾರ್, ರೇಣುಕಾಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts