More

    ಜನರ ಕಷ್ಟಕ್ಕೆ ಪಂಚ ಗ್ಯಾರಂಟಿ ಸ್ಪಂದನೆ

    ಪಾಂಡವಪುರ: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ಮತಕ್ಕಾಗಿ ಅಥವಾ ಗಿಮಿಕ್‌ಗಾಗಿ ಅಲ್ಲ. ಜನರ ನಿಜವಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಕೊಟ್ಟಿದ್ದೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.


    ತಾಲೂಕಿನ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿಜೇತ ರಾಸುಗಳ ಮಾಲೀಕರಿಗೆ ಶನಿವಾರ ಚಿನ್ನದ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.


    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಡದಿದ್ದರೆ ಬರಗಾಲದ ಸಂದರ್ಭದಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರ ಎಲ್ಲ ಯೋಜನೆಗಳಿಂದ ಒಂದು ಕುಟುಂಬಕ್ಕೆ ಐದರಿಂದ ಆರು ಸಾವಿರ ಸಿಗುತ್ತಿದೆ. ಕೃಷಿ ಇಲಾಖೆಯಿಂದಲೂ ಈವರೆಗೆ 2.5 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಜತೆಗೆ ರಾಜ್ಯದ ಅಭಿವೃದ್ಧಿ ಕಡೆಗೂ ಸರ್ಕಾರ ಹೆಚ್ಚಿನ ಒತ್ತು ನೀಡಿದೆ ಎಂದು ತಿಳಿಸಿದರು.


    ಈ ಸರ್ಕಾರ ಜನಪರವಾಗಿದ್ದು, ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಕೇಂದ್ರದ ನಾಯಕರು ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಎನ್‌ಡಿಆರ್‌ಎಫ್‌ನಿಂದ ನಮಗೆ ನ್ಯಾಯವಾಗಿ ಸಲ್ಲಬೇಕಾದ ಹಣ ಬಿಡುಗಡೆ ಮಾಡಿಲ್ಲ. ನರೇಗಾ ಯೋಜನೆಯ ಹಣವನ್ನು ಕಳೆದ ನಾಲ್ಕು ತಿಂಗಳಿನಿಂದ ನೀಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ರೈತರು ಮತ್ತು ಕನ್ನಡಿಗರು ಕೇಂದ್ರದ ನಿಲುವಿನ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.


    ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಿಸ್ತಿನ ರಾಜಕಾರಣ ಮಾಡುತ್ತಿದ್ದಾರೆ. ಇದು ಕೆಲವರಿಗೆ ಇಷ್ಟವಾಗುತ್ತದೆ. ಮತ್ತೆ ಕೆಲವರಿಗೆ ಕಷ್ಟವಾಗಬಹುದು. ಕ್ಷೇತ್ರದ ಜನರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಏನೇ ಕೆಲಸ ಇದ್ದರೂ ಜಿಲ್ಲಾಡಳಿತ, ಸಚಿವರು ಹೀಗೆ ಎಲ್ಲರ ಗಮನಕ್ಕೆ ತಂದು ಸಾರ್ವಜನಿಕರ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ಕೆಲಸದಲ್ಲಿ ಒಂದೆರಡು ತಪ್ಪುಗಳು ಆಗಿರಬಹುದು. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಒಳ್ಳೆಯ ಕೆಲಸ ಮಾಡುತ್ತಾರೆ. ಬೇಬಿ ಬೆಟ್ಟದ ಜಾತ್ರೆ ಇಡೀ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಬಹಳ ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಇಲ್ಲಿಗೆ ಉತ್ತಮ ರಾಸುಗಳು ಬರುತ್ತಿದೆ ಎಂದರು.


    ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು(ವೆಂಕಟರಮಣೇಗೌಡ) ಮಾತನಾಡಿ, ನಾನು ರೈತರ ಪರವಾಗಿ ಕೆಲಸ ಮಾಡುತ್ತೇನೆ. ಯಾವಾಗಲೂ ರೈತರ ಪರವಾಗಿ ಇರುತ್ತೇನೆ ಎಂದರು.


    ರಾಸು ಸಾಕುವ ರೈತರಾದ ಹಾರೋಹಳ್ಳಿ ನಾರಾಯಣಪ್ಪ, ಕಲ್ಲಹಳ್ಳಿ ಪಟೇಲರು, ವಿಜಿಪುರ ನಾರಾಯಣಪ್ಪ, ಕಂಟ್ರೆ ಕಾಳಪ್ಪ, ತಿಂಗಳು ಶೀನಪ್ಪ, ಅರಳಕುಪ್ಪೆ ದೇವರಾಜು, ಬೆಟ್ಟಹಳ್ಳಿ ದೇವರಾಜು ಮತ್ತು ಚಪ್ಪರ ಕಟ್ಟುವ ಕಾಯಕ ಮಾಡುವ ಪಾಂಡವಪುರ ನಾಗಣ್ಣ, ಸೋಮಣ್ಣ, ಲಾಳ ಕಟ್ಟುವ ಖಾದರ್, ಎತ್ತುಗಳ ಕಂಬು ಹೊರೆಯುವ ಡಿಂಕಾಶೆಟ್ಟಹಳ್ಳಿ ಜ್ಞಾನ, ಕೆಂಪಯ್ಯನಹುಂಡಿ ದೇವರಾಜು, ಕಗ್ಗೆರೆ ಮಹದೇವು, ಅಲ್ಲದೆ ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಿದ ಪೌರಕಾರ್ಮಿಕರು, ಸೆಸ್ಕ್ ಸಿಬ್ಬಂದಿ, ಪಶು ಮತ್ತು ವೈದ್ಯಕೀಯ ಇಲಾಖೆ, ಅರಣ್ಯ, ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಗ್ರಾಪಂ ಪಿಡಿಒ ಮತ್ತು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಹಲವು ಇಲಾಖೆಗಳ ಸಿಬ್ಬಂದಿ, ಅಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.


    ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ರವಿಕುಮಾರ್ ಗಣಿಗ, ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು, ಮುಖಂಡರಾದ ಎಚ್.ತ್ಯಾಗರಾಜು, ಬಿ.ರೇವಣ್ಣ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಎಸ್.ದಯಾನಂದ, ತಹಸೀಲ್ದಾರ್ ಜಿ.ಎ.ಸ್.ಶ್ರೇಯಸ್, ತಾಪಂ ಇಒ ಲೋಕೇಶ್‌ಮೂರ್ತಿ, ಇನ್ಸ್‌ಪೆಕ್ಟರ್ ಕುಮಾರ್, ಸಿಡಿಪಿಒ ಪೂರ್ಣಿಮಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts