More

    ದೇಗುಲದಲ್ಲಿ ಮೂವರ ಬರ್ಬರ ಹತ್ಯೆ


    ಮಂಡ್ಯ: ನಗರದ ಹೊರವಲಯದ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಕಳವು ಮಾಡಲು ಬಂದ ದುಷ್ಕರ್ಮಿಗಳು ಇಬ್ಬರು ಅರ್ಚಕರು ಹಾಗೂ ಒಬ್ಬ ಸೆಕ್ಯೂರಿಟಿ ಗಾರ್ಡ್ ಅನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಗುತ್ತಲು ಬಡಾವಣೆ ತೇರಿನ ಬೀದಿಯ ಸಹಾಯಕ ಅರ್ಚಕರಾದ ಪ್ರಕಾಶ(55), ಗಣೇಶ(55) ಮತ್ತು ಸೆಕ್ಯೂರಿಟಿ ಗಾರ್ಡ್ ಆನಂದ(42) ಕೊಲೆಗೀಡಾದವರು.
    ಪ್ರಕಾಶ ಮತ್ತು ಗಣೇಶ ಸಹಾಯಕ ಅರ್ಚಕರಾಗಿ, ಜತೆಗೆ ರಾತ್ರಿ ಸೆಕ್ಯೂರಿಟಿ ಗಾರ್ಡ್‌ಗಳಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಇವರೊಟ್ಟಿಗೆ ಆನಂದ ಕೂಡ ಸುಮಾರು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಈತ ದೇವಸ್ಥಾನದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು.
    ಎಂದಿನಂತೆ ಈ ಮೂವರು ಕೆಲಸ ಮುಗಿಸಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದರು. ಮಧ್ಯರಾತ್ರಿ ವೇಳೆಗೆ ಆಗಮಿಸಿರುವ ಕಳ್ಳರ ತಂಡ, ಮಾರಕಾಸ್ತ್ರಗಳಿಂದ ಮೂವರ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ದುಷ್ಟರ ಏಟಿಗೆ ಮೂವರ ತಲೆಯೂ ಜಜ್ಜಿ ಹೋಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
    ನಂತರ ಕಳ್ಳರು ದೇವಸ್ಥಾನದ ಬಾಗಿಲು ಮುರಿದು ಮೂರು ಹುಂಡಿಗಳನ್ನು ಸುಮಾರು ದೂರಕ್ಕೆ ಹೊತ್ತೊಯ್ದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
    ಸ್ಥಳಕ್ಕೆ ಜಿಲ್ಲಾ ಎಸ್ಪಿ ಕೆ.ಪರಶುರಾಮ, ಎಎಸ್ಪಿ ಧನಂಜಯ ಇತರರು ಶ್ವಾನದಳ, ಬೆರಳಚ್ಚು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಐಜಿಪಿ ವಿಪುಲ್‌ಕುಮಾರ್ ಕೂಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು.
    ಬೆಚ್ಚಿ ಬಿದ್ದ ಮಂಡ್ಯ: ಶುಕ್ರವಾರ ಬೆಳಗ್ಗೆ ಕೊಲೆಯ ಮಾಹಿತಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಜತೆಗೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೃತ್ಯದಿಂದ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ.
    ಏನಿದು ಕ್ರೂರ ಕೃತ್ಯ?
    ಪುರಾಣ ಪ್ರಸಿದ್ಧ ಅರ್ಕೇಶ್ವರ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರ ದಂಡೇ ಇದೆ. ಅದರಲ್ಲಿಯೂ ಕಾರ್ತಿಕ ಮಾಸದಲ್ಲಿ ದೇವಸ್ಥಾನಕ್ಕೆ ಸಹಸ್ರಾರೂ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಇದರಿಂದಾಗಿ ದೇವಸ್ಥಾನ ಹುಂಡಿಗೆ ತಿಂಗಳಿಗೆ ಲಕ್ಷಾಂತರ ರೂ. ಹರಿದು ಬರುತ್ತಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತಿತ್ತು. ಈ ವೇಳೆ 8 ರಿಂದ 10 ಲಕ್ಷ ರೂ.ವರೆಗೆ ಹಣವಿರುತ್ತಿತ್ತು ಎಂದು ಹೇಳಲಾಗುತ್ತದೆ.
    ಕಳೆದ ಕಾರ್ತಿಕ ಮಾಸದ ನಂತರ ಒಮ್ಮೆ ಹುಂಡಿ ತೆರೆಯಲಾಗಿತ್ತು. ಸುಮಾರು ಎಂಟು ತಿಂಗಳಿಂದ ಹುಂಡಿ ತೆರೆದಿರಲಿಲ್ಲ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಚಕರು ಹುಂಡಿ ತೆಗೆದು ಹಣ ಪಡೆದುಕೊಳ್ಳುವಂತೆ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ನಡುವೆ ಹೆಚ್ಚಿನ ಹಣ ಸಂಗ್ರಹವಾಗಿರುವ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡಿತ್ತು. ಈ ಮಾಹಿತಿ ಪಡೆದಿರುವ ತಂಡವೊಂದು ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ಕೃತ್ಯವೆಸಗಿದೆ ಎಂದು ಶಂಕಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts