More

    ಸದನದಲ್ಲಿ ಕೋಲಾಹಲ ಎಬ್ಬಿಸಿದ ಮಂಡ್ಯ ಚಾಲಕನ ಆತ್ಮಹತ್ಯೆ ಯತ್ನ ಕೇಸ್​: ಸರ್ಕಾರಕ್ಕೆ ಎಚ್​ಡಿಕೆ, ಬೊಮ್ಮಾಯಿ ಚಾಟಿ

    ಮಂಡ್ಯ/ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಪ್ರಮುಖ ನಾಯಕರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ಇಂದು ವಿಧಾನಸಭೆಯ ಕಲಾಪದಲ್ಲೂ ಈ ಪ್ರಕರಣ ಕೋಲಾಹಲ ಎಬ್ಬಿಸಿತು.

    ಮಾಜಿ ಸಿಎಂ ಬೊಮ್ಮಾಯಿ ಪ್ರಸ್ತಾಪ

    ಆತ್ಮಹತ್ಯೆಗೆ ಯತ್ನ ವಿಚಾರವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದಿನ ಕಲಾಪದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು. ಚಾಲಕರ ವರ್ಗಾವಣೆ‌ಯನ್ನು ವಿಭಾಗೀಯ ಅಧಿಕಾರಿ ಮಾಡಿದ್ದಾರೆ. ಇದನ್ನು ಆತ್ಮಹತ್ಯೆ‌ ಯತ್ನಿಸಿದ ನೌಕರ ಪ್ರಶ್ನೆ ಮಾಡಿದಾಗ ಸಚಿವರು ಶಿಫಾರಸು ಮಾಡಿದ್ದಾರೆ ಎಂದು ಆತನಿಗೆ ಹೇಳಿದ್ದಾರೆ. ಇದರಿಂದ ಮನನೊಂದು ಸಚಿವರ ಹೆಸರು ‌ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಷ್ಟೆಲ್ಲ ಆದರೂ ಎಫ್​ಐಆರ್ ಆಗಿಲ್ಲ ಮತ್ತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಹೆಸರನ್ನು ಎಫ್​ಐಆರ್‌ನಲ್ಲಿ ಸೇರಿಸಬೇಕು ಮತ್ತು ಸಚಿವ‌ ಚಲುವರಾಯಸ್ವಾಮಿ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಹಿಂದಿನ ಅವಧಿಯಲ್ಲಾದ ‌ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ‌ಪ್ರಕರಣ‌ವನ್ನೂ ಬೊಮ್ಮಾಯಿ ಉಲ್ಲೇಖಿಸಿದರು.

    ಎಚ್​ಡಿಕೆ ಮಧ್ಯಪ್ರವೇಶ

    ಮಾಜಿ ಸಿಎಂ ಬೊಮ್ಮಾಯಿ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಬೊಮ್ಮಾಯಿ ಅವರು ಹೇಳಿರುವ ಈ ವಿಷಯ ಅತ್ಯಂತ ಗಂಭೀರವಾದ ವಿಷಯ. ಸರ್ಕಾರ ರಚನೆ ಆಗಿ ಇನ್ನೂ 50 ದಿನಗಳು ಆಗಿಲ್ಲ. ಸರ್ಕಾರ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದನ್ನು ಸರಿಪಡಿಸಿಕೊಳ್ಳಬೇಕು. ಇದು ರಾಜಕೀಯ ಆತ್ಮಹತ್ಯೆಯೇ? ಇದರಲ್ಲಿ ರಾಜಕೀಯ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜವಬ್ದಾರಿಯುತ ಸ್ಥಾನದಲ್ಲಿ ಇರುವವರಿಂದ ರಾಜಕೀಯ ವರ್ಗಾವಣೆ ನಡೆಸಲಾಗಿದೆ. ರಾಜಕೀಯ ಮಾಡಬೇಕಾದರೆ ರಾಜಕೀಯ ಮಾಡೋಣ, ಆದರೆ ಪಂಚಾಯಿತಿ ಸ್ಥಾನಗಳನ್ನು ದುರುಪಯೋಗ ಪಡಿಸಿಕೊಂಡು ಈ ರೀತಿ ಟಾರ್ಗೆಟ್ ಮಾಡಿದ್ರೆ ಏನು ಸಾಧನೆ ಮಾಡ್ತೀರಿ ಎಂದು ಪ್ರಶ್ನೆ ಮಾಡಿದ ಎಚ್​ಡಿಕೆ, ಎಫ್ಐಆರ್ ಬಗ್ಗೆ ಕೇಳಿದ್ರೆ ಇನ್ನೂ ಸತ್ತಿಲ್ಲ ಸರ್ ಅದಕ್ಕಾಗಿ ಎಫ್ಐಆರ್ ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಗರಂ ಆದರು. ಅಲ್ಲದೆ, ಈಶ್ವರಪ್ಪ ಅವರ ಹೆಸರು ವಾಟ್ಸ್​ಆ್ಯಪ್​​ನಲ್ಲಿ ಬಂತು ಅಂತ ಈ ಹಿಂದೆ ರಾಜೀನಾಮೆ ಪಡೆದಿಲ್ವಾ? ಎಂದು ಹೇಳುವ ಮೂಲಕ ಹಿಂದಿನ ಈಶ್ವರಪ್ಪ ರಾಜೀನಾಮೆ ವಿಷಯವನ್ನು ಎಚ್​ಡಿಕೆ ಪ್ರಸ್ತಾಪ ಮಾಡಿದರು.

    ಚಲುವರಾಯಸ್ವಾಮಿ ಬಾಯಿ ಮುಚ್ಚಿಸಿದರು

    ಎಚ್​ಡಿಕೆ ಮಾತನಾಡುವಾಗ ಮಧ್ಯಪ್ರವೇಶಿಸಿದ ಕಾಂಗ್ರೆಸ್​ ಶಾಸಕ ರಮೇಶ್​ ಬಂಡಿಸಿದ್ದೇಗೌಡ, ಇವನು ಬಸ್ ಡ್ರೈವರ್ ಕಮ್ ಕಂಡಕ್ಟರ್. ಯಾವ ಕಾರಣಕ್ಕೆ ಅವರು ವರ್ಗಾವಣೆ ಮಾಡಿದರು ಅಂತ ಹೇಳಿ ಸರ್ ಎಂದರು. ಇದಕ್ಕೆ ಆಕ್ರೋಶಗೊಂಡ ಎಚ್​ಡಿಕೆ, ನೀವು ಹೋಮ್ ಮಿನಿಸ್ಟರ್ ಏನ್ರೀ? ಕೂತ್ಕೊಳ್ರಿ ಆಯ್ತು ಎಂದು ಗುಡುಗಿದರು. ಚಲುವರಾಯಸ್ವಾಮಿ ಪರ ರಮೇಶ್ ಬಂಡಿಸಿದ್ದೇಗೌಡ ಹಾಗೂ ನರೇಂದ್ರ ಸ್ವಾಮಿ ಬ್ಯಾಟ್​ ಬೀಸಿ, ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿ ಎಚ್​ಡಿಕೆ ಅನುಚಿತವಾಗಿ ವರ್ತನೆ ಮಾಡಿದ ಅಂತ ತಾನೇ ಅವನ ವರ್ಗಾವಣೆಗೆ ನೀವು ಕಾರಣ ಕೊಟ್ಟಿರೋದು. ಸಚಿವರು ಹೇಳಿದ್ರು ಅದಕ್ಕಾಗಿ ವರ್ಗಾವಣೆ ಮಾಡಿದೆ ಅಂತ ಕೆಎಸ್ಆರ್​ಟಿಸಿ ಎಂಡಿ ಹೇಳಿದ್ದಾರೆ ಎಂದರು. ಈ ವೇಳೆ ಆರೋಪಕ್ಕೆ ಉತ್ತರ ಕೊಡಲು ಸಚಿವ ಚಲುವರಾಯಸ್ವಾಮಿ ಮುಂದಾದರು. ನಾನು ಮಾತನಾಡುತ್ತಿದ್ದೇನೆ, ನೀವು ಆಮೇಲೆ ಮಾತಾಡ್ರಿ ಎಂದು ಚಲುವರಾಯಸ್ವಾಮಿ ಬಾಯಿ ಮುಚ್ಚಿಸಿದರು.

    ಸಾಕ್ಷಿ ಮರೆಮಾಚುವ ಕೆಲಸ 

    ಬಳಿಕ ಎಚ್​ಡಿಕೆ ಸದನಕ್ಕೆ ಚಾಲಕನ ಡೆತ್​​ನೋಟ್​ನಲ್ಲಿನ ಅಂಶಗಳನ್ನು ಓದಿ ಹೇಳಿದರು. ಈ ಘಟನೆಗಳಿಗೆ ಇದ್ದ ಸಾಕ್ಷಿ ಮರೆಮಾಚುವ ಕೆಲಸ ನಿನ್ನೆಯಿಂದಲೇ ಮಾಡ್ತಿದ್ದಾರೆ. ನಮ್ಮ ಅಧಿಕಾರಿಗಳಿಗೆ ಕೇಳಿದ್ರೆ ಇನ್ನೂ ಸತ್ತಿಲ್ಲ ಸರ್ ಇನ್ನೂ ಎಫ್​ಐಆರ್ ಹಾಕಿಲ್ಲ ಅಂತಾರೆ. ಜಗದೀಶ್, ಹೆಂಡತಿ ಗ್ರಾಮ ಪಂಚಾಯತಿ ಸದಸ್ಯೆ. ಅಲ್ಲಿ 12 ಜನರು ಪಕ್ಷದ ಜೊತೆಗಿದ್ದಾರೆ. ಇವಾಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬರ್ತಿದೆ. ಅದಕ್ಕಾಗಿ ನಮ್ಮ ಜೊತೆ ಕೆಲಸ ಮಾಡು ಇಲ್ಲ ಅಂದರೆ ವರ್ಗಾವಣೆ ಮಾಡಿಸ್ತೀನಿ ಅಂತಾ ಬೆದರಿಕೆ ಹಾಕಿದ್ದಾರೆ. ಅವನು ಒಪ್ಪದೆ ಇದ್ದಾಗ ಅವನನ್ನು ವರ್ಗಾವಣೆ ಮಾಡಿಸಿದ್ದಾರೆ. ಇದು ಜಿಲ್ಲಾ ಮಟ್ಟದಲ್ಲಿ ವರ್ಗಾವಣೆ ಆಗಿದೆ ಎಂದರು.

    ಬೊಮ್ಮಾಯಿ ಆಗ್ರಹ

    ಬಳಿಕ ಸಿಎಂ ಬೊಮ್ಮಾಯಿ ಮಾತನಾಡಿ ಸಚಿವರ ವರ್ತನೆ ನೋಡಿದ್ರೆ, ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಕಾಣ್ತಿದೆ ಎಂದರು. ನೀವು ಏನು ಮಾಡಿದ್ರು ಸತ್ಯ ಹೊರಗೆ ಬರುತ್ತದೆ. ಜಾರ್ಜ್ ಅವರ ಹಳೆಯ ಕಥೆ ತೆಗೆದು ವಿಷಯ ಡೈವರ್ಟ್ ಮಾಡುವ ಕೆಲಸ ಮಾಡಿದರು ಎಂದು ಸರ್ಕಾರದ ಸಚಿವರ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ ಹೊರಹಾಕಿದರು. ಅಲ್ಲದೆ, ಇದರ ಹಿಂದೆ ಏನೋ ರಾಜಕಾರಣ ಇದೆ. ಇದರ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.

    ಮಂಡ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರಿಯಾದ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಸದನದ ಬಾವಿಗಿಳಿದು‌ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಸಿಎಂ ಸಿದ್ದು, ಚಲುವರಾಯಸ್ವಾಮಿ ಅವರನ್ನು ವಿಧಾನಸಭೆಯ ತಮ್ಮ ಸ್ಥಾನದ ಬಳಿ ಕರೆಸಿಕೊಂಡರು. ಈ ವೇಳೆ ಘಟನೆ ಹಾಗೂ ತಮ್ಮ ಮೇಲೆ ಬಂದ ಆರೋಪದ‌ ಬಗ್ಗೆ ಚಲುವರಾಯಸ್ವಾಮಿ ಸ್ಪಷ್ಟೀಕರಣ ನೀಡಿದರು.

    ಚಾಲಕನ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೆಲುವರಾಯ ಸ್ವಾಮಿ, ಕುಮಾರಸ್ವಾಮಿಗೆ ಅಧಿಕಾರ ಇಲ್ಲ, ಅದಕ್ಕೆ ಏನೇನೊ ಮಾತನಾಡುತ್ತಿದ್ದಾರೆ. ಚಾಲಕನ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಆತನನ್ನ ಬೇರೆ ಯಾವುದೋ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿರಲಿಲ್ಲ. ನಾಗಮಂಗಲದಿಂದ ಮಂಡ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಕೇವಲ 30 ಕಿ.ಮೀ ದೂರ ವರ್ಗಾವಣೆ ಮಾಡಿರೋದು. ಆತನ ಜೀವಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಅದಕ್ಕೆ ಕುಮಾರಸ್ವಾಮಿ ನೇರ ಹೊಣೆ. ಆತ ವಿಷ ಕುಡಿದಾಗ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ರು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಸಂಬಂಧಿಕರು ಮುಂದಾಗಿದ್ರು. ಆದ್ರೆ ಕುಮಾರಸ್ವಾಮಿ ಬೇಡ ಅಂತ ಹೇಳಿದ್ದಾರೆ. ಆಸ್ಪತ್ರೆಗೆ ಹೋಗುತ್ತಿದ್ದವರನ್ನು ಮಾಜಿ ಶಾಸಕ ಮತ್ತು ಅವನ ಪತ್ನಿ ತಡೆದಿದ್ದಾರೆ. ಬೆಳಿಗ್ಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಇದು ಅಪರಾಧ ಅಲ್ಲವೇ, ಆತನಿಗೆ ಚಿಕಿತ್ಸೆ ತಡವಾಗಿದೆ. ಅದಕ್ಕೆ ಕುಮಾರಸ್ವಾಮಿ ಕಾರಣ ಎಂದು ಆರೋಪ ಮಾಡಿದರು.

    ಕುಟುಂಬಸ್ಥರಿಗೆ ನೋವಾಗೋದಿಲ್ವೆ? 

    ಜವಬ್ದಾರಿ ಸ್ಥಾನದಲ್ಲಿರುವ ಸಚಿವರು ರಾಜೀನಾಮೆ ನೀಡಬೇಕು ಮತ್ತು ಘಟನೆ ಬಗ್ಗೆ ‌ಸೂಕ್ತ ತನಿಖೆ ನಡೆಯಬೇಕು ಎಂದು ಎಚ್​ಡಿಕೆ ಒತ್ತಾಯಿಸಿದ‌ರು. ಇದಕ್ಕೆ ಉತ್ತರ ನೀಡಿದ ಚಲುವರಾಯಸ್ವಾಮಿ, ವರ್ಗಾವಣೆ ಮಾಡುವಂತೆ ನಮ್ಮ ಕಚೇರಿಯಿಂದ ‌ನನ್ನ ಯಾವುದೇ ಶಿಫಾರಸು ಪತ್ರ‌ ನೀಡಿಲ್ಲ. ನನ್ನ ಕಚೇರಿಯಿಂದ ಫೋನ್ ಕೂಡ ಮಾಡಿಲ್ಲ. ಪದೇಪದೆ ಡೆತ್​ನೋಟ್ ‌ಡೆತ್‌ನೋಟ್‌ ಅಂತಾರೆ. ಓರ್ವ ಮಾಜಿ ಸಿಎಂ ಆದವರು ಈ ರೀತಿ ಹೇಳಿದ್ರೆ ‌ಹೇಗೆ? ಆತ್ಮಹತ್ಯೆಗೆ ಯತ್ನಿಸಿರುವ ಆತನ‌ ಕುಟುಂಬಸ್ಥರಿಗೆ ನೋವಾಗೋದಿಲ್ವೆ?

    ಘಟನೆಯ ಹಿನ್ನೆಲೆ ಏನು?

    ನಿನ್ನೆ ಮಂಡ್ಯ ಜಿಲ್ಲೆಯ ನಾಗಮಂಗಲದ KSRTC ಬಸ್ ಡಿಪೋನಲ್ಲಿ ಡ್ರೈವರ್ ಕಮ್ ಕಂಡೆಕ್ಟರ್ ಎಚ್.ಆರ್.ಜಗದೀಶ್ ಅವರು ವಿಷ ಕುಡಿದುಆತ್ಮಹತ್ಯೆಗೆ ಯತ್ನಿಸಿದರು. ಸಚಿವ ಚಲುವರಾಯಸ್ವಾಮಿ ಸೂಚನೆಯಂತೆ ಅಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ, ಕ್ರಿಮಿನಾಶಕ ತಂದು ಡಿಪೋದಲ್ಲೇ ಆತ್ಮಹತ್ಯೆಗೆ ಯತ್ನಿಸಿದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಜಗದೀಶ್ ಅವರ ತಂದೆ ಓಡಾಡಿದ್ದಕ್ಕಾಗಿ ಟ್ರಾರ್ಗೆಟ್​ ಮಾಡಿ, ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಡೆತ್​ನೋಟ್​ನಲ್ಲಿ ಏನಿತ್ತು?

    ಸದ್ಯ ಜಗದೀಶ್​ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ್ಮಹತ್ಯೆಗೆ ಯತ್ನಿಸುವ ಮುನ್ನ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೋ ಮ್ಯಾನೇಜರ್ ಕೇಳಿದೆ. ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನ ಕೇಳಿದಾಗ ಕೃಷಿ ಸಚಿವರ ಆದೇಶದ ಮೇರೆಗೆ ವರ್ಗಾವಣೆ ಎಂದು ಹೇಳಿದರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನವನ್ನ ಸಹಿಸಲು ನನ್ನಿಂದ ಆಗುತ್ತಿಲ್ಲ. ನನ್ನ ಆತ್ಮಹತ್ಯೆಗೆ ಶಾಸಕರೇ ಕಾರಣ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.

    ಸಿಬ್ಬಂದಿ ಪ್ರತಿಭಟನೆ

    ಜಗದೀಶ್​ ವಿಷ ಸೇವನೆ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ ಇಂದು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿದ್ದಾರೆ. ನಾಗಮಂಗಲದ ಡಿಪೋದಿಂದ ಒಂದೂ ಬಸ್​ ಅನ್ನು ಚಾಲಕರು ತೆಗಿದಿಲ್ಲ. 60ಕ್ಕೂ ಹೆಚ್ಚು ಕೆಎಸ್ಆರ್‌ಟಿಸಿ ಬಸ್‌ಗಳು ನಿಂತಲ್ಲೇ ನಿಂತಿವೆ. ಬಸ್ ಸಂಚಾರ ಸ್ಥಗಿತ ಹಿನ್ನೆಲೆ ನಾಗಮಂಗಲ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಜಗದೀಶ್ ವರ್ಗಾವಣೆ ಮಾಡಿದ್ದಕ್ಕೆ ಕೆಎಸ್ಆರ್‌ಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರ ಆಕ್ರೋಶ ಹೊರಹಾಕಿದ್ದಾರೆ. ವರ್ಗಾವಣೆ ಮಾಡಿ ಕಿರುಕುಳ ನೀಡಿರುವುದರಿಂದಲೇ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

    ವಿಧಾನಸಭೆ ನೂತನ ಉಪಸಭಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಆಯ್ಕೆ: ಅನುಭವ, ಸರಳತೆ ಕೊಂಡಾಡಿದ ಸದನದ ಸದಸ್ಯರು

    ಕುಟುಂಬದವರ ವಿರೋಧದ ನಡುವೆಯೂ ಕೃಷಿ ಕೆಲಸಕ್ಕೆ ಕೈ ಹಾಕಿದ ಪದವೀಧರ ಯುವಕ ; ಆಮೇಲೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts