More

    ಮಂಡ್ಯ ಬಂದ್‌ಗೆ ಉತ್ತಮ ಬೆಂಬಲ: ರೈತರೊಂದಿಗೆ ನಾವಿದ್ದೇವೆಂದ ವರ್ತಕರು, ವಿದ್ಯಾರ್ಥಿಗಳು

    ಮಂಡ್ಯ: ಪ್ರತಿ ಟನ್ ಕಬ್ಬಿಗೆ 4500 ರೂ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘ ಕರೆ ನೀಡಿದ್ದ ಸೋಮವಾರ ಮಂಡ್ಯ ನಗರ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಅಂತೆಯೇ ಹೋರಾಟ ಬೆಂಬಲಿಸಿ ಮದ್ದೂರು ಹಾಗೂ ಕೆ.ಎಂ.ದೊಡ್ಡಿಯಲ್ಲಿ ನಡೆಸಿದ ಬಂದ್‌ಗೂ ಸ್ಪಂದನೆ ಸಿಕ್ಕಿತು.
    ನ.7ರಿಂದ ರೈತರು ಧರಣಿ ನಡೆಸುತ್ತಿದ್ದರೂ ಸರ್ಕಾರದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಲವು ಕನ್ನಡಪರ ಸಂಘಟನೆಗಳು, ದಲಿತ, ಮುಸ್ಲಿಂ ಸಂಘಟನೆಗಳು ಬೆಂಬಲ ಸೂಚಿಸಿ ಬಂದ್‌ನಲ್ಲಿ ಪಾಲ್ಗೊಂಡವು. ಮಾತ್ರವಲ್ಲದೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಕೂಡ ಪ್ರತಿಭಟನೆಗೆ ಸಾಥ್ ನೀಡಿದರು. ಇನ್ನು ನಗರದ ಬಹುತೇಕ ಅಂಗಡಿ ಮಳಿಗೆಗಳ ಎದುರು ‘ರೈತರೊಂದಿಗೆ ನಾವಿದ್ದೇವೆ’ ಎನ್ನುವ ನಾಮಫಲಕ ಹಾಕಿ ವರ್ತಕರು ಕೂಡ ಬೆಂಬಲ ನೀಡಿದರು.
    ಬೆಳಗ್ಗೆ ಸರ್‌ಎಂವಿ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಬಳಿಕ ಬೈಕ್ ಜಾಥಾ ನಡೆಸಿದರು. ಈ ವೇಳೆ ಬಾಗಿಲು ತೆಗೆದಿದ್ದ ಅಂಗಡಿ ಮಾಲೀಕರ ಮನವೊಲಿಸಿದರು. ಬಳಿಕ ಎಲ್ಲರೂ ಒಗ್ಗೂಡಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದರು. ರೈತರು, ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿ ಸಾವಿರಾರೂ ಸಂಖ್ಯೆಯಲ್ಲಿ ಸೇರಿದರು. ಆ ಸಮಯ ಕಾವೇರಿ ಹೋರಾಟವನ್ನು ನೆನಪು ಮಾಡುವಂತಿತ್ತು.
    ಕಬ್ಬನ್ನು ಸುಡುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿದವು. ಜತೆಗೆ ರೈತರು ಚಡ್ಡಿ ಹಾಕಿಕೊಂಡು ನಡೆಸಿದ ಆಕ್ರೋಶ ಮೆರವಣಿಗೆ ಗಮನಸೆಳೆಯಿತು. ಮಹಿಳೆಯರು, ವಿದ್ಯಾರ್ಥಿನಿಯರು ಭಾಷಣದ ಮೂಲಕ ರೈತರನ್ನು ಸರ್ಕಾರ ನಿರ್ಲಕ್ಷೃ ಮಾಡುತ್ತಿದೆ ಎಂದು ಆಕ್ರೋಶಭರಿತ ಮಾತುಗಳನ್ನಾಡಿದರು. ಬಳಿಕ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿರುವ ಸರ್‌ಎಂವಿ ಪ್ರತಿಮೆ ಎದುರು ತೆರಳಿ ಬಂದ್ ಮುಕ್ತಾಯಗೊಳಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಬಂದ್ ನಂತರ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಲಾಯಿತು.
    ಸಂಚಾರ ಅಸ್ತವ್ಯಸ್ತ: ಬಂದ್ ಹಿನ್ನೆಲೆಯಲ್ಲಿ ಬೆ-ಮೈ ಹೆದ್ದಾರಿ ಸಂಚಾರ ಮಂಡ್ಯ ನಗರದಲ್ಲಿ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಹೆದ್ದಾರಿಯಲ್ಲಿ ಟ್ರಾೃಕ್ಟರ್ ಹಾಗೂ ಇತರೆ ವಾಹನದೊಂದಿಗೆ ಪ್ರತಿಭಟನೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ಮಂಡ್ಯ ನಗರದೊಳಗೆ ಸಂಚರಿಸುವ ವಾಹನಗಳನ್ನು ಪರ್ಯಾಯ ಮಾರ್ಗದ ಮೂಲಕ ಕಳುಹಿಸಲಾಯಿತು. ಅಂತೆಯೇ ಬೆಂ-ಮೈ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಮಂಡ್ಯ ನಗರದ ಹೊರಗಿನ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಯಿತು. ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
    ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಸುನೀತಾ ಪುಟ್ಟಣ್ಣಯ್ಯ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts