ಪತ್ನಿಯನ್ನು ವಾಪಸ್​ ಕರೆದಿದ್ದೇ ಈತನ ಪಾಲಿಗೆ ಮುಳುವಾಯ್ತು!

Fire engine
Published on

ಆಗ್ರಾ: ಆಘಾತಕಾರಿ ಘಟನೆಯೊಂದರಲ್ಲಿ ತನ್ನ ಪತ್ನಿಯನ್ನು ವಾಪಸ್​ ಕಳಿಸಿಕೊಡುವಂತೆ ಕೇಳಿದ್ದಕ್ಕೆ, ಅತ್ತೆ ಮನೆಯವರು ಅಳಿಯನ ಮೇಲೆ ಪೆಟ್ರೋಲ್​ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಘಟನೆಯಲ್ಲಿ ಅಳಿಯ ಧರ್ಮೇಂದ್ರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಗಾಯಾಳುವಿನ ಸಹೋದರ ಲೋಕೇಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಧರ್ಮೇಂದ್ರನ ಪತ್ನಿ ಪ್ರೀತಿ, ಆಕೆಯ ತಾಯಿ ಶಿಲ್ಪಾ ಹಾಗೂ ಸಹೋದರ ಅಜಯ್​ ಸಿಂಗ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನಲೆ

ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತನ ಸಹೋದರ ಲೋಕೇಶ್​ ಧರ್ಮೇಂದ್ರ ಹಾಗೂ ಪ್ರೀತಿಗೆ 2019ರ ನವೆಂಬರ್​ ತಿಂಗಳಲ್ಲಿ ಮದುವೆ ಮಾಡಲಾಗಿತ್ತು. ಮದುವೆಯಾದ ದಿನದಿಂದಲೂ ನಮ್ಮ ಅತ್ತಿಗೆ ಹಾಗೂ ಅಕೆಯ ಕುಟುಂಬಸ್ಥರು ಒಂದಿಲ್ಲೊಂದು ವಿಚಾರಕ್ಕೆ ನಮ್ಮ ಜೊತೆ ಜಗಳವಾಡುತ್ತ ಬಂದಿದ್ದಾರೆ.

Fire Accident
ಗಾಯಾಳು ಧರ್ಮೇಂದ್ರ

ನಮ್ಮ ಅತ್ತಿಗೆ ಪ್ರೀತಿ ಬಹುಪಾಲು ಸಮಯ ತವರು ಮನೆಯಲ್ಲೇ ಕಳೆಯುತ್ತಿದ್ದರು. ಈ ಸಂಬಂಧ ನಮ್ಮ ಅಣ್ಣ ಅವರನ್ನು ವಾಪಸ್​ ಮನೆಗೆ ಬರುವಂತೆ ಕರೆಯಲು ಹೋದಾಗ ಪ್ರೀತಿ, ಆಕೆಯ ತಾಯಿ ಶಿಲ್ಪಾ ಹಾಗು ಸಹೋದರ ಅಜಯ್​ ಸಿಂಗ್​ ಧರ್ಮೇಂದ್ರನನ್ನು ಮನೆಯೊಳಗೆ ಕೂಡಿ ಹಾಕಿ ಪೆಟ್ರೋಲ್​​​ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಆರೋಪಿಗಳು ಪರಾರಿ

ಬೆಂಕಿಯ ಉರಿ ತಾಳಲಾರದೆ ನನ್ನ ಅಣ್ಣ ಜೋರಾಗಿ ಕೂಗಿಕೊಂಡಿದ್ದು, ಸ್ಥಳೀಯರು ಹಾಗೂ ನೆರೆಹೊರೆಯವರು ಅವನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇಹದ ಬಹುಪಾಲು ಭಾಗ ಸುಟ್ಟುಹೋಗಿರುವುದರಿಂದ ವೈದ್ಯರು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ದೂರು ನೀಡಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ಧರ್ಮೇಂದ್ರನ ಸಹೋದರ ಲೋಕೇಶ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net