More

    ತಾಯಿ ಮೇಲಿನ ಕೋಪಕ್ಕೆ ಮಗನನ್ನು ಕೆರೆಗೆ ತಳ್ಳಿ ಸಾಯಿಸಿದ ಪಾಪಿ!; ಇದು 2 ಸಂಸಾರದ ದುರಂತ ಕಥೆ

    ಬೆಂಗಳೂರು: ತಾಯಿ ಮೇಲಿನ ಕೋಪಕ್ಕೆ ಮಗನನ್ನು ಕೆರೆಗೆ ತಳ್ಳಿ ಸಾಯಿಸಿರುವ ಪ್ರಕರಣ ನಗರದಲ್ಲಿ ನಡೆದಿದೆ. ಸಂಸಾರ ನಡೆಸಲು ನಿರಾಕರಿಸಿದ ಎರಡನೇ ಪತ್ನಿಯ ಮಗನನ್ನು ಮಲತಂದೆಯೇ ಕೆರೆಗೆ ತಳ್ಳಿ ಕೊಲೆಗೈದಿರುವ ಪ್ರಕರಣ ಕೆಜಿಎಫ್​ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬಂಗಾರಪೇಟೆ ಮೂಲದ ಚೇತನ್ ರೆಡ್ಡಿ (11) ಕೊಲೆಯಾದ ಬಾಲಕ. ಕೃತ್ಯ ಎಸಗಿದ ಆತನ ಮಲ ತಂದೆ, ಕೆಜಿಎಫ್ ನಿವಾಸಿ ಸಂಪತ್ ಕುಮಾರ್ (35) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಫೆ.28ರಂದು ಕೆಜಿಎಫ್‌ನ ಕ್ಯಾಸಂಬಳ್ಳಿಯಲ್ಲಿರುವ ಕೆರೆಗೆ ಚೇತನ್ ರೆಡ್ಡಿಯನ್ನು ತಳ್ಳಿ ಕೊಲೆಗೈದಿದ್ದ. ಅಲ್ಲದೆ, ಆತ ಕೂಡ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದೀಗ ಆರೋಪಿ ಗುಣಮುಖವಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ತಾತನ ಮರಣದ ಬೆನ್ನಿಗೇ ಮೊಮ್ಮಗನಿಗೂ ಸಾವು; ಮಾವನ ಕಣ್ಣೆದುರೇ ಪ್ರಜ್ಞೆ ತಪ್ಪಿ ಬಿದ್ದಿದ್ದ 17 ವರ್ಷದ ಹುಡುಗ!

    ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ನಿವಾಸಿ ಪ್ರವೀಣ್ ಕುಮಾರ್ ಹಾಗೂ ಕೃಷ್ಣರಾಜಪುರ ಗ್ರಾಮದ ಸಂಪತ್ ಕುಮಾರ್ ಸ್ನೇಹಿತರಾಗಿದ್ದು, ಟಿಪ್ಪರ್ ಲಾರಿ ಚಾಲನೆ ಮಾಡುತ್ತಿದ್ದರು. ಪ್ರವೀಣ್ ಕುಮಾರ್ ಬಂಗಾರಪೇಟೆ ತಾಲೂಕಿನ ಪುಷ್ಪಾವತಿಯನ್ನು ಮದುವೆಯಾಗಿದ್ದು, ದಂಪತಿಗೆ ಚೇತನ್ ರೆಡ್ಡಿ ಮತ್ತು ರಕ್ಷಿತಾ ಎಂಬ ಮಕ್ಕಳು ಇದ್ದಾರೆ. ಇನ್ನು ಸಂಪತ್‌ಗೂ ನಿರ್ಮಲಾ ಎಂಬಾಕೆ ಜತೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.

    ಇದನ್ನೂ ಓದಿ: ಎರಡನೇ ಮಹಡಿಯಿಂದ ಆಯತಪ್ಪಿ ಕೆಳಕ್ಕೆ ಬಿದ್ದ 3 ವರ್ಷದ ಮಗು!

    ಪ್ರವೀಣ್ ಕೆಲಸಕ್ಕೆ ಹೋದಾಗ, ಆತನ ಮನೆಗೆ ಬರುತ್ತಿದ್ದ ಸಂಪತ್, ಪುಷ್ಪಾವತಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದ ಪ್ರವೀಣ್ ಪತ್ನಿಗೆ ವಿಚ್ಛೇದನ ನೀಡಿದ್ದ. ಈ ಮಧ್ಯೆ ಕೋರ್ಟ್ ಗಂಡು ಮಗ ಚೇತನ್ ರೆಡ್ಡಿಯನ್ನು ಪ್ರವೀಣ್ ಜತೆ, ಹೆಣ್ಣು ಮಗು ರಕ್ಷಿತಾಳನ್ನು ತಾಯಿ ಜತೆ ವಾಸಿಸಲು ಆದೇಶ ನೀಡಿತ್ತು. ಮತ್ತೊಂದೆಡೆ ಸಂಪತ್, ಪತ್ನಿ ನಿರ್ಮಲಾಗೆ ವಿಚ್ಛೇದನ ನೀಡಿ 2021ರ ಆ.16ರಂದು ಪುಷ್ಪಾವತಿಯನ್ನು ರಿಜಿಸ್ಟರ್ಡ್​ ಮ್ಯಾರೇಜ್ ಮೂಲಕ 2ನೇ ಮದುವೆಯಾಗಿದ್ದ. ದಂಪತಿ ಬಂಗಾರಪೇಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ನಂಬರ್ ಬ್ಲಾಕ್ ಮಾಡಿದ್ದಕ್ಕೆ ಆಕ್ರೋಶಗೊಂಡಿದ್ದ

    ಆರು ತಿಂಗಳ ಬಳಿಕ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು. ಆಕೆಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿದ್ದ. ಇದರಿಂದ ನೊಂದ ಪುಷ್ಪಾವತಿ, ಒಂದು ವರ್ಷದಿಂದ 2ನೇ ಪತಿ ಸಂಪತ್‌ನ ಮೊಬೈಲ್ ನಂಬರ್ ಬ್ಲಾಕ್ ಮಾಡಿಕೊಂಡು, ಮಗಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಆದರೂ ಆರೋಪಿ ಆಗಾಗ್ಗೆ ಪುಷ್ಪಾವತಿ ಮನೆ ಬಳಿ ಬಂದರೂ ಆಕೆ ಸಿಗುತ್ತಿರಲಿಲ್ಲ. ಪುಷ್ಪಾವತಿಯ ವರ್ತನೆಯಿಂದ ಆಕ್ರೋಶಗೊಂಡಿದ್ದ ಆರೋಪಿ, ಆಕೆಗೆ ಬ್ಲ್ಯಾಕ್​ಮೇಲ್​​ ಮಾಡಲು ಆರಂಭಿಸಿದ್ದ. ತನ್ನೊಂದಿಗೆ ಮಾತನಾಡಬೇಕು. ಸಂಸಾರ ನಡೆಸಬೇಕು. ಇಲ್ಲವಾದಲ್ಲಿ ಮಗಳು ರಕ್ಷಿತಾಗೆ ತೊಂದರೆ ಕೊಡುತ್ತೇನೆ. ಹತ್ಯೆ ಮಾಡುತ್ತೇನೆ ಎಂದು ಬೆದರಿಸುತ್ತಿದ್ದ. ಆದರೂ ಆಕೆ ತಲೆಕೆಡಿಸಿಕೊಂಡಿರಲಿಲ್ಲ. ಫೆ.19ರಂದು ಬಂಗಾರಪೇಟೆಯಲ್ಲಿರುವ ಪುಷ್ಪಾವತಿ ಮನೆಗೆ ಹೋದ ಸಂಪತ್, ಮಗಳು ರಕ್ಷಿತಾಳನ್ನು ಹೊರಗಡೆ ಕರೆದೊಯ್ಯಲು ಯತ್ನಿಸಿದ್ದಾನೆ. ಆದರೆ, ರಕ್ಷಿತಾ ತಾಯಿ ಬಂದರೆ ಮಾತ್ರ ಬರುತ್ತೇನೆ ಎಂದು ಹೇಳಿ ಜೋರಾಗಿ ಅಳಲು ಆರಂಭಿಸಿದ್ದಾಳೆ. ಇದರಿಂದ ಹೆದರಿದ ಆರೋಪಿ ಮನೆಯಿಂದ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

    ಇದನ್ನೂ ಓದಿದ್ದು: ಮಧುರೆ ದೇಗುಲದಲ್ಲಿ ‘ಮಾಂಸದ ಹಾರ’: ಪ್ರಕರಣದ ಹಿಂದಿರುವುದು ಬೇರಾರೂ ಅಲ್ಲ, ಜ್ಯೋತಿಷಿ!

    ಕೆರೆಗೆ ತಳ್ಳಿ ಕೊಲೆ ಮಾಡಿದ ಪಾಪಿ

    ಈ ಮಧ್ಯೆ ಕೋಲಾರದಲ್ಲಿ ತಾತನ ಮನೆಯಲ್ಲಿದ್ದ ಚೇತನ್ ರೆಡ್ಡಿಯನ್ನು ತಾತ, ಸ್ಥಳೀಯರ ಸಹಾಯದಿಂದ ಚೊಕ್ಕನಹಳ್ಳಿಯಲ್ಲಿರುವ ಚಿಲ್ಡ್ರನ್ ವಿಲೇಜ್ ಫೌಂಡೇಷನ್ ಹಾಸ್ಟೆಲ್‌ಗೆ ಸೇರಿಸಿದ್ದು, 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಫೆ.20ರಂದು ಹಾಸ್ಟೆಲ್ ಬಳಿ ಬಂದಿದ್ದ ಸಂಪತ್, ಚೇತನ್ ರೆಡ್ಡಿಗೆ ಚಾಕೋಲೇಟ್, ಬಿರಿಯಾನಿ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿ ತನ್ನೊಂದಿಗೆ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಈ ಹಿಂದೆ ತಾಯಿ ಜತೆ ಒಂದೆರಡು ಬಾರಿ ಬಂದಿದ್ದರಿಂದ ಚೇತನ್ ಮರು ಮಾತನಾಡದೆ ಆತನ ಜತೆ ಹೋಗಿದ್ದ. ಬಳಿಕ ಕೆಜಿಎಫ್‌ನಲ್ಲಿ ಬಿರಿಯಾನಿ, ಚಾಕೋಲೇಟ್ ಕೊಡಿಸಿ, ಪತ್ನಿ ಪುಷ್ಪಾವತಿಗೆ ಕರೆ ಮಾಡಿದ್ದಾನೆ. ಆದರೆ, ಬ್ಲಾಕ್​ಲಿಸ್ಟ್‌ಗೆ ಹಾಕಿದ್ದರಿಂದ ಕರೆ ತಲುಪಿಲ್ಲ. ಹೀಗಾಗಿ ಆಕೆಗೆ ಬುದ್ಧಿ ಕಲಿಸಬೇಕೆಂದು ಕ್ಯಾಸಂಬಳ್ಳಿಯಲ್ಲಿರುವ ಕೆರೆ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಚೇತನ್‌ನನ್ನು ಕರೆದೊಯ್ದು ತಳ್ಳಿ ಪರಾರಿಯಾಗಿದ್ದ. ಮತ್ತೊಂದೆಡೆ ಚಿಲ್ಡ್ರನ್ ವಿಲೇಜ್ ಪೌಂಡೇಷನ್ ಮುಖ್ಯಸ್ಥರು ಬಾಗಲೂರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

    ಇದನ್ನೂ ಓದಿ: ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ

    ಆತ್ಮಹತ್ಯೆಗೆ ಯತ್ನ: ಪುತ್ರ ಅಪಹರಣದ ವಿಚಾರ ತಿಳಿದ ಮೊದಲ ಪತಿ ಪ್ರವೀಣ್, ಪುಷ್ಪಾವತಿಗೆ ವಿಷಯ ತಿಳಿಸಿ, ಆರೋಪಿ ಸಂಪತ್‌ಗೆ ಮನೆಗೆ ತೆರಳಿ ವಿಚಾರಿಸಿದ್ದಾರೆ. ಆದರೆ, ಆತ ಈ ವಿಚಾರ ನನಗೆ ಗೊತ್ತಿಲ್ಲ ಎಂದು ವಾದಿಸಿದ್ದ. ಬಳಿಕ ಹಾಸ್ಟೆಲ್ ಮುಖ್ಯಸ್ಥರು ನೀಡಿದ ದೂರಿನ ವಿಚಾರ ತಿಳಿಸುತ್ತಿದ್ದಂತೆ, ಕೊಠಡಿಗೆ ಸೇರಿಕೊಂಡು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಸ್ಥಳೀಯರು ಆಂಧ್ರಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮತ್ತೊಂದೆಡೆ ಬಾಗಲೂರು ಠಾಣೆಯ ಇನ್‌ಸ್ಪೆಕ್ಟರ್ ಶಂಕರಾಚಾರಿ ನೇತೃತ್ವದ ತಂಡ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ ಆಸ್ಪತ್ರೆಯಲ್ಲೇ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಸುಮಾರು ಒಂದು ವಾರ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಆತನನ್ನು ಬಂಧಿಸಲಾಗಿದೆ. ಸುಮಾರು 9 ದಿನಗಳ ಕಾಲ ಶೋಧ ನಡೆಸಿದಾಗ ಕೆರೆಯಲ್ಲಿ ಚೇತನ್ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts