More

    ಮೋದಿಯವರ ಟ್ವಿಟರ್​ ಮೂಲಕ ಹೋರಾಟದ ಬದುಕನ್ನು ತೆರೆದಿಟ್ಟ ಮಾಳವಿಕಾ ಅಯ್ಯರ್​..! 13ನೇ ವಯಸ್ಸಿನಿಂದ ಇವರಿಟ್ಟ ಹೆಜ್ಜೆಗಳೆಲ್ಲ ಸಾಧನೆಗೆ ಮೆಟ್ಟಿಲುಗಳು…

    ನವದೆಹಲಿ: ಮಹಿಳಾ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿಯವರ ಸೋಷಿಯಲ್​ ಮೀಡಿಯಾ ಖಾತೆಗಳನ್ನು ಬಳಸಿಕೊಳ್ಳುವ ಏಳು ಮಂದಿ ಮಹಿಳೆಯರಲ್ಲಿ ಮಾಳವಿಕಾ ಅಯ್ಯರ್​ ಕೂಡ ಓರ್ವರು.

    ಭಯಾನಕ ಬಾಂಬ್​ ಸ್ಫೋಟದಲ್ಲಿ ಬದುಕುಳಿದ ಮಾಳವಿಕಾ ಅಯ್ಯರ್​ ಅವರು ತಮ್ಮ ಜೀವನದ ಕತೆಯನ್ನು ಮೋದಿಯವರ ಟ್ವಿಟರ್​ ಖಾತೆ ಮೂಲಕ ವಿಶ್ವದೆದುರು ತೆರೆದಿಟ್ಟಿದ್ದಾರೆ. ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು ನಾವು ಹೇಗೆ ಬುದಕುತ್ತೇವೆ ಎಂಬುದು ಮುಖ್ಯ ಎಂದು ತಾವು ಧೈರ್ಯ, ಆತ್ಮವಿಶ್ವಾಸದಿಂದ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದ್ದಾರೆ.

    ನಾವು ನಮಗೇ ಕೊಟ್ಟುಕೊಳ್ಳಬಹುದಾದ ಬಹುದೊಡ್ಡ ಕೊಡುಗೆಯೆಂದರೆ ಅದು ‘ಸ್ವೀಕಾರ’. ನಮ್ಮ ಜೀವನದಲ್ಲಿ ನಡೆಯಬೇಕಾದದ್ದು ನಡೆಯುತ್ತದೆ. ಅದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಜೀವನದೆಡೆಗಿನ ನಮ್ಮ ಮನೋಭಾವವನ್ನು ಖಂಡಿತ ಬದಲಿಸಿಕೊಳ್ಳಬಹುದು. ನಾವು ನಮಗೆದುರಾಗುವ ಎಲ್ಲ ಸವಾಲುಗಳನ್ನೂ ಮೆಟ್ಟಿನಿಂತು, ಹೇಗೆ ಬದುಕು ನಡೆಸಿದ್ದೇವೆ ಎಂಬುದೇ ಕೊನೆಯಲ್ಲಿ ಮುಖ್ಯವಾಗುತ್ತದೆ ಎಂದು ಟ್ವೀಟ್ ಮಾಡುವ ಮೂಲಕ..ತಮ್ಮ ಜೀವನದ ಕಷ್ಟದ ದಿನಗಳ ಮೆಲುಕು ಹಾಕಿದ್ದಾರೆ.

    ಮಾಳವಿಕಾ ಅಯ್ಯರ್​ ಪ್ರಸ್ತುತ ಪಡಿಸಿದ ಅವರ ಜೀವನ ಹೀಗಿದೆ…’
    ರಾಜಸ್ಥಾನದಲ್ಲಿ ನಡೆದ ಒಂದು ಭಯಂಕರ ಬಾಂಬ್​ ಸ್ಫೋಟದಿಂದ ನಾನು ತಪ್ಪಿಸಿಕೊಂಡು ಬದುಕುಳಿದಾಗ ನನಗೆ 13 ವರ್ಷ. ಸ್ಫೋಟದಲ್ಲಿ ನನ್ನ ಕೈಗಳು ಕತ್ತರಿಸಲ್ಪಟ್ಟಿದ್ದವು. ಕಾಲುಗಳೂ ತೀವ್ರ ಗಾಯಗೊಂಡು, ಸ್ಪರ್ಶಾನುಭವವೇ ಇಲ್ಲದಂತಾಗಿತ್ತು. ಅದೃಷ್ಟವಶಾತ್​ ಜೀವ ಉಳಿದಿತ್ತು. ಆದರೆ ಕುಗ್ಗದೆ, ಆತ್ಮವಿಶ್ವಾಸದಿಂದ ಮುನ್ನಡೆದೆ. ವಿದ್ಯಾಭ್ಯಾಸವನ್ನು ಪಡೆದು, ಪಿಎಚ್​ಡಿ ಮುಗಿಸಿದೆ. ಬಿಟ್ಟುಕೊಡುವುದು ಒಂದು ಆಯ್ಕೆಯಾಗಬಾರದು ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು. ನೀವೂ ನಿಮ್ಮ ಪರಿಧಿಯನ್ನು ಮರೆತುಬಿಡಿ. ಅದನ್ನು ಮೀರಿ ಆತ್ಮವಿಶ್ವಾಸ ಹಾಗೂ ಭರವಸೆಯ ಆಶಯದೊಂದಿಗೆ ಈ ಜಗತ್ತನ್ನು ನೋಡಿ ಎಂದು ಮಾಳವಿಕಾ ಹೇಳಿದ್ದಾರೆ.

    ತಮ್ಮ ಈ ಅಂಗವೈಕಲ್ಯದಿಂದ ಹೊರಬರಲು ಶಿಕ್ಷಣವೂ ಸಹಾಯ ಮಾಡಿತು ಎಂದು ಮಾಳವಿಕಾ ತಿಳಿಸಿದ್ದಾರೆ. ಮೂರೇ ತಿಂಗಳಲ್ಲಿ ಸಿದ್ಧತೆ ಮಾಡಿಕೊಂಡು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದೆ. ಅದೂ ನನಗೆ ಬರೆಯಲು ಸಾಧ್ಯವಾಗದ ಕಾರಣ ಬೇರೊಬ್ಬರಿಂದ ಬರೆಸಬೇಕಾಯಿತು. ಆದರೆ ಅಂದು ನನಗೆ 95 ಪರ್ಸಂಟ್​ ಅಂಕ ಬಂತು.
    ಅಂದಿನಿಂದಲೂ ನಾನ್ಯಾವತ್ತೂ ಹಿಂದುರಿಗಿ ನೋಡಲಿಲ್ಲ. ನನ್ನ ಸ್ಥಿತಿ ನೋಡಿಕೊಂಡು ಕೊರಗುತ್ತ ಕುಳಿತುಕೊಳ್ಳಲಿಲ್ಲ. ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ ನನಗೆ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ. ಅಬ್ದುಲ್​ ಕಲಾಂ ಅವರನ್ನು ಭೇಟಿ ಮಾಡುವ ಅವಕಾಶವೂ ಒದಗಿಬಂತು ಎಂದು ನೆನಪಿಸಿಕೊಂಡಿದ್ದಾರೆ.

    ಮಾಳವಿಕಾ ಅಯ್ಯರ್​ ಅವರಿಗೆ ಎರಡೂ ಕೈಗಳಿಗೂ ಅಂಗೈ ಇಲ್ಲ. ಆದರೆ ತಮ್ಮೆಲ್ಲ ಅಂಗವೈಕಲ್ಯತೆಯನ್ನು ಬದಿಗಿಟ್ಟು ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಮೋಟಿವೇಶನಲ್​ ಸ್ಪೀಕರ್​ (ತಮ್ಮ ಮಾತುಗಳ ಮೂಲಕವೇ ಇನ್ನೊಬ್ಬರಲ್ಲಿ ಸ್ಫೂರ್ತಿ ತುಂಬುವುದು) ಆಗಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ, ಫ್ಯಾಷನ್​ ಲೋಕದಲ್ಲೂ ಇವರು ಚಾಪು ಮೂಡಿಸಿದ್ದಾರೆ. ರೂಪದರ್ಶಿಯಾಗಿಯೂ ಖ್ಯಾತಿ ಗಳಿಸಿದ್ದಾರೆ. 2019ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ನಾರಿಶಕ್ತಿ ಪುರಸ್ಕಾರವನ್ನು ಪಡೆದಿದ್ದಾರೆ.

    ಮಾಳವಿಕಾ ಅವರು ಮೂಲತಃ ತಮಿಳುನಾಡಿನ ಕುಂಭಕೋಣಂನವರು. ಆದರೆ ಬೆಳೆದಿದ್ದು ರಾಜಸ್ಥಾನದ ಬಿಕನೇರ್​ ಎಂಬಲ್ಲಿ. ಅಲ್ಲಿ ನಡೆದ ಬಾಂಬ್​ ಸ್ಫೋಟದ ಬಳಿಕ ತೀವ್ರವಾಗಿ ಗಾಯಗೊಂಡು ಚೆನ್ನೈನ ಆಸ್ಪತ್ರೆಯೊಂದರಲ್ಲಿ 18 ತಿಂಗಳು ಚಿಕಿತ್ಸೆ ಪಡೆದಿದ್ದಾರೆ.

    ತನ್ನ ಅಂಗವೈಕಲ್ಯವನ್ನೇ ಸಾಧನೆಯ ಮೆಟ್ಟಿಲಾಗಿ ಮಾಡಿಕೊಂಡ ಮಾಳವಿಕಾ ಇಂದು ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯನ್ನು ಬಳಸಲು ಅವಕಾಶ ಪಡೆದಿದ್ದಾರೆ. ಅಂಗವಿಕಲರ ಬಗ್ಗೆ ಜನರ ಮನಸ್ಥಿತಿ ಬದಲಾಗಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts