More

    ಮಲ್ಲಮ್ಮಳ ಕೀರ್ತಿ ಪಸರಿಸಲಿ

    ಬೈಲಹೊಂಗಲ: ಮಲ್ಲಮ್ಮಳು ಕನ್ನಡ, ಸಂಸ್ಕೃತ, ಮರಾಠಿ, ಉರ್ದು ಭಾಷಿಕಳಾಗಿದ್ದಳಲ್ಲದೆ, ಶಸ್ತ್ರವಿದ್ಯೆಯಲ್ಲೂ ನಿಪುಣೆಯಾಗಿದ್ದಳು. ಗುರು ಪರಂಪರೆ ಬಗ್ಗೆ ಗೌರವ ಇಟ್ಟುಕೊಂಡಿದ್ದಳು. ಶಕ್ತಿಗಿಂತ ಯುಕ್ತಿ ಮೇಲು ಎಂಬುದನ್ನು ತಿಳಿದಿದ್ದಳು ಎಂದು ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.

    ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಬೆಳವಡಿ ಮಲ್ಲಮ್ಮ ಉತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

    ಮಹಿಳಾ ಸೈನ್ಯ ಕಟ್ಟಿದ್ದಳು. ಶೌರ್ಯದಿಂದ ಶಿವಾಜಿಯನ್ನು ಸೋಲಿಸಿದಳು ಆದರೆ, ವೈರತ್ವ ಹೊಂದಲಿಲ್ಲ ಎಂದರು. ಒಳ್ಳೆಯ ಮನಸ್ಸಿನಿಂದ ಮಕ್ಕಳನ್ನು ಪಡೆದುಕೊಳ್ಳಬೇಕೆಂದರೆ, ಜನಿಸುವ ಮಕ್ಕಳು ಸಂಸ್ಕಾರವಂತರಾಗಿ ಹಾಗೂ ಧೈರ್ಯವಂತರಾಗಿತ್ತಾರೆ. ಇದು ವೈಜ್ಞಾನಿಕವಾಗಿ ಸಹ ಸಾಬೀತಾಗಿದೆ. ಅದೇ ರೀತಿ ಮಲ್ಲಮ್ಮಳ ತಂದೆ, ತಾಯಿ ವ್ರತ ಮಾಡಿ ಮಲ್ಲಮ್ಮಳನ್ನು ಪಡೆದಿದ್ದರು ಎಂದು ಹೇಳಿದರು.

    ಸಾಹಿತಿ ಯ.ರು. ಪಾಟೀಲ ಮಾತನಾಡಿ, ಜಗತ್ತಿನ ಎಲ್ಲ ಮಹಿಳೆಯರಿಗೆ ದೇಶ ಪ್ರೇಮ, ನಾಡು ರಕ್ಷಣೆ, ಶೌರ್ಯಕ್ಕೆ ಹೆಸರುವಾಸಿಯಾದ ವೀರರಾಣಿ ಬೆಳವಡಿ ಮಲ್ಲಮ್ಮಳ ಕೀರ್ತಿ ದೇಶಾದ್ಯಂತ ಪಸರಿಸಲು ಸರ್ಕಾರ ಕ್ರಮ ಜರುಗಿಸಬೇಕು ಎಂದರು. ಮರಾಠಿ, ಕನ್ನಡ ಬಾಂಧವ್ಯ ಬೆಸೆದ ರಾಣಿ ಮಲ್ಲಮ್ಮಳ ಉತ್ಸವದಲ್ಲಿ ಹೊಸ ಹೊಸ ವಿಷಯಗಳು ಬರಬೇಕು. ಇಂದಿನ ಮಹಿಳಾ ಸಮಸ್ಯೆಗಳಿಗೆ ರಾಣಿ ಮಲ್ಲಮ್ಮಳ ಸಾಹಸ ಕಾರ್ಯ ಪ್ರೇರಣೆಯಾಗಿಟ್ಟುಕೊಂಡು ಮುಂದುವರಿದರೆ ವಿಚಾರ ಸಂಕಿರಣಗಳು ಸಾರ್ಥಕವೆನಿಸಿಕೊಳ್ಳುತ್ತವೆ ಎಂದು ಹೇಳಿದರು.

    ಹಂಪಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಉಪನ್ಯಾಸಕಿ ಶೈಲಜಾ ಎಂ. ಹಿರೇಮಠ ಮಹಿಳಾ ಸಬಲೀಕರಣ ವಿಷಯದ ಕುರಿತು ಉಪನ್ಯಾಸ ನೀಡಿ, ರಾಣಿ ಮಲ್ಲಮ್ಮಳ ಮನೋಬಲ, ದಿಟ್ಟತನ, ಔದಾರ್ಯ, ನೈತಿಕತೆ, ಸಚ್ಚಾರಿತ್ರ್ಯದ ಆದರ್ಶ ಗುಣಗಳನ್ನು ಇಂದಿನ ಯುವಜನತೆ ಅರಿತು ಪಾಲಿಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

    ಈಶಪ್ರಭು ಪ್ರಶಸ್ತಿ ಪುರಸ್ಕೃತ ಎಂ.ಎಂ. ಕಾಡೇಶನವರ ಬೆಳವಡಿ ಸಂಸ್ಥಾನದ ವಂಶಸ್ಥರು ವಿಷಯದ ಕುರಿತು ಮಾತನಾಡಿ, ರಾಣಿ ಮಲ್ಲಮ್ಮಳ ಮೇಲಿನ ಅಭಿಮಾನದ ಪ್ರಜ್ಞೆ 40 ವರ್ಷಗಳ ಹಿಂದೆಯೇ ಇದ್ದಿದ್ದರೆ ಇಡೀ ದೇಶದ ತುಂಬ ಮಲ್ಲಮ್ಮಳ ಯಶೋಗಾಥೆ ಮನೆ ಮಾತಾಗುತ್ತಿತ್ತು. ಚಚಡಿ ದೇಸಾಯಿ, ತಲ್ಲೂರು ದೇಸಾಯಿ ಮನೆತನ ಯಾದವಾಡ ಸೇರಿ ಇನ್ನು ಅನೇಕ ಕಡೆ ಮಲ್ಲಮ್ಮ ರಾಣಿ ವಂಶ ವೃಕ್ಷದ ಬಳ್ಳಿ ಇದೆ. ಶಿವಾಜಿ ಮಹಾರಾಜರ ಮೂರ್ತಿಗಳಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ರಾಣಿ ಮಲ್ಲಮ್ಮಳ ಮೂರ್ತಿ ಸ್ಥಾಪನೆಯಾಗಬೇಕು. ಮಾತುಗಳು ಭರವಸೆಗಳಾಗದೆ ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ. ಡಿ.ಎ. ಉಪಾಧ್ಯೆ ಮಾತನಾಡಿದರು. ರಾಣಿ ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಆರ್.ಬಿ. ಪಾಟೀಲ, ಅಕ್ಷರ ದಾಸೋಹ ಅಧಿಕಾರಿ ಪ್ರಕಾಶ ಮಾಸ್ತಹೊಳಿ, ಸಿಆರ್‌ಪಿಗಳಾದ ರಾಜು ಹಕ್ಕಿ, ಎಂ.ಬಿ. ಗಣಾಚಾರಿ, ಪ್ರಮುಖ ಎಸ್.ವಿ. ಸಿದ್ದಮನಿ, ಪ್ರಕಾಶ ಹುಂಬಿ, ದಯಾನಂದ ಮುಪ್ಪಯ್ಯನವರ, ಸದಾಶಿವ ಗುಗ್ಗರಿ, ಅಮೀರ ಹಾದಿಮನಿ, ರವಿ ಪಾಟೀಲ, ಶಿಕ್ಷಕ ಎಂ.ವಿ. ಉಪ್ಪಿನ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ಸ್ವಾಗತಿಸಿದರು. ನ್ಯಾಯವಾದಿ ಸಿ.ಎಸ್. ಚಿಕ್ಕನಗೌಡರ ವಂದಿಸಿದರು. ಎಫ್.ಎ. ನದಾಫ್ ಸಂಯೋಜಿಸಿದರು. ಹುಬ್ಬಳ್ಳಿಯ ಜಿ.ವಿ. ಕಲಾ ಬಳಗದ ಗದಗಯ್ಯ ಹಿರೇಮಠ ನಿರೂಪಿಸಿದರು.

    ಮಕ್ಕಳಲ್ಲಿ ನಾಡ ರಕ್ಷಣೆಗೆ ಹೋರಾಡಿದ ವೀರ ಶೂರರ ತ್ಯಾಗ, ಬಲಿದಾನದ ಕುರಿತು ತಿಳಿವಳಿಕೆ ಮೂಡಿಸಲು ವಿಚಾರ ಸಂಕಿರಣಗಳು ಪೂರಕವಾಗಿದ್ದು, ಉತ್ಸವದ ವಿಚಾರ ಸಂಕಿರಣದಲ್ಲಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜು ಮಕ್ಕಳು ಪಾಲ್ಗೊಳ್ಳಲು ಅನುಮತಿ ನೀಡಿ ಅವರನ್ನು ಕರೆ ತರುವಂತಾಗಬೇಕು.
    | ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ರಾಣಿ ಮಲ್ಲಮ್ಮ ಪ್ರಶಸ್ತಿ ಪುರಸ್ಕೃತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts