More

    ಹೊನ್ನಾವರ ತಾಲೂಕಿನಲ್ಲಿ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಬೆಂಗಳೂರಿನ ಸುದೀಕ್ಷ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಡಾ. ಸುಬ್ರಹ್ಮಣ್ಯಂ ಶರ್ಮ

    ಹೊನ್ನಾವರ: ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ಸುದೀಕ್ಷ ಕಂಪನಿಯ ಸಹಯೋಗದೊದಿಗೆ ಹೊನ್ನಾವರ ತಾಲೂಕಿನಲ್ಲಿ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಬೆಂಗಳೂರಿನ ಸುದೀಕ್ಷ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಡಾ. ಸುಬ್ರಹ್ಮಣ್ಯಂ ಶರ್ಮ ಗೌರವರಂ ಹೇಳಿದರು.
    ತಾಲೂಕಿನ ಗೇರಸೊಪ್ಪೆಯ ಶ್ರೀ ಬಂಗಾರಮಕ್ಕಿ ಕ್ಷೇತ್ರದ ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆದ ಸಂಸ್ಕೃತಿ ಕುಂಭ ಮಲೆನಾಡ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಉನ್ನತ ದರ್ಜೆಯ ಆಸ್ಪತ್ರೆಯಿಲ್ಲದೇ ನೂರಾರು ಜೀವಗಳು ಆತಂಕದಿಂದ ಇದ್ದು ಜನರ ಕೂಗಿಗೆ ಬೆಲೆಯೇ ಇಲ್ಲವಾಗಿದೆ, ಜಿಲ್ಲೆಗೊಂದು ದಾರಿ ತೋರಿಸಿ’ ಎಂದು ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಅವರು ಹೇಳಿಕೊಂಡಿದ್ದು ಅವರ ಮಾತಿಗೆ ಬೆಲೆ ಕೊಟ್ಟು ಈ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಹೊನ್ನಾವರ ತಾಲೂಕಿನ ಆಯ್ದ ಸ್ಥಳದಲ್ಲಿ ನಿರ್ಮಿಸಲಾಗುವುದು. ಜಿಲ್ಲೆಯ ಜನರು ಸಹಕಾರ ಕೊಟ್ಟು ಪ್ರಯೋಜನ ಪಡೆಯುವಂತಾಗಲಿ ಎಂದರು.
    ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗಳೂರಿನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಚೇತನ್ ಆರ್. ವೇದಿಕೆಯಲ್ಲಿ ಪ್ರಸ್ತಾಪಿತ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯೋಜನೆಗೆ ತಮ್ಮ ಆಸ್ಪತ್ರೆಯಿಂದ ಎಲ್ಲ ಸಹಕಾರ ನೀಡಲಾಗುವುದು. ಕ್ಷೇತ್ರದಿಂದ ಸಿಬಿಎಸ್‌ಸಿ ಪಠ್ಯಕ್ರಮದಡಿ ನಡೆಸುತ್ತಿರುವ ಪಿಯುಸಿ ದ್ವಿತೀಯ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ತಮ್ಮ ತಂದೆಯವರ ಹೆಸರಿನಲ್ಲಿ ಚಿನ್ನದ ಪದಕ ನೀಡಲಾಗುವುದು ಎಂದರು.
    ಮುಖ್ಯ ಅತಿಥಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಜಿಲ್ಲೆಗೆ ಉನ್ನತ ದರ್ಜೆಯ ಆಸ್ಪತ್ರೆ ಬೇಕೆಂದು ಜನ ಹಲವಾರು ವರ್ಷಗಳಿಂದ ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಕೂಗಿಗೆ ರಾಜಕೀಯ ಬಣ್ಣ ಬಳಿದು ಚುನಾವಣಾ ಸಮಯದ ಸರಕನ್ನಾಗಿ ಕೆಲವರು ಮಾಡಿಕೊಂಡು ಆಸ್ಪತ್ರೆಯ ಕನಸು ಗಗನಕುಸುಮವಾಗಿಯೇ ಉಳಿದಿತ್ತು. ಇದೀಗ ಡಾ. ಸುಬ್ರಹ್ಮಣ್ಯಂ ಅವರು ಜಿಲ್ಲೆಗೊಂದು ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಟ್ಟರೆ ಉತ್ತರ ಕನ್ನಡ ಜಿಲ್ಲೆ ಅವರಿಗೆ ಶರಣಾಗಿರುತ್ತದೆ ಎಂದರು.
    ವೇದಿಕೆಯಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಮಾರುತಿ ಗುರೂಜಿ ಅವರು `ಉತ್ತರ ಕಾಣದ ಜಿಲ್ಲೆ’ ಎಂದು ವಿಡಂಬನಾತ್ಮಕವಾಗಿ ಕರೆಯಲ್ಪಡುವ ಈ ಜಿಲ್ಲೆಗೆ ಅತಿ ಸನಿಹದಲ್ಲಿಯೇ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಉತ್ತಮ ದರ್ಜೆಯ ಇಂಜಿನಿಯರಿAಗ್ ಕಾಲೇಜು ಬರುತ್ತಿರುವುದರ ಜೊತೆಗೆ ದಿವ್ಯಾಂಗರ ವಿಶ್ವ ವಿದ್ಯಾಲಯ ಕೂಡ ಕ್ಷೇತ್ರದ ವತಿಯಿಂದ ಆಗಲಿದೆ. ಇದು ದೇಶ ಮಾತ್ರವಲ್ಲ, ಜಾಗತಿಕವಾಗಿಯೂ ವಿಶಿಷ್ಟವಾಗಲಿದೆ ಎಂದರು.
    ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಯ ಕಾರ್ಯದರ್ಶಿ ಅರ್ಪಿತಾ ಮಾರುತಿ ಗುರೂಜಿ ಉಪಸ್ಥಿತರಿದ್ದರು. ಗಣಪತಿ ಹೆಗಡೆ ಸ್ವಾಗತಿಸಿದರು. ಕ್ಷೇತ್ರದ ಆಡಳಿತಾಧಿಕಾರಿ ಎಂ.ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ದಯಾನಂದ ನಾಯ್ಕ ವಂದಿಸಿದರು. ಗೋಪಾಲಕೃಷ್ಣ ನಾಯ್ಕ ಮತ್ತು ಕವಿತಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

    https://www.vijayavani.net/rain-for-4-days-in-many-parts-of-the-state

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts