More

    ಭಾರತದ ಸಹೋದರ-ಸಹೋದರಿಯರೇ… ಕೊನೆಗೂ ಅಂಗಲಾಚಿ ಬೇಡಿಕೊಂಡ ಮಾಲ್ಡೀವ್ಸ್​!

    ನವದೆಹಲಿ: ಮಾತು ಮನೆ ಕೆಡಿಸಿತು ತೂತು ಒಲೆ ಕೆಡೆಸಿತು ಎಂಬ ಗಾದೆ ಮಾತು ಮಾಲ್ಡೀವ್ಸ್​ನ ಇಂದಿನ ಪರಿಸ್ಥಿತಿಗೆ ಸೂಕ್ತವಾಗಿದೆ. ಸುಮ್ಮನಿರದೇ ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟ ಮಾಲ್ಡೀವ್ಸ್​ ಇದೀಗ ತನ್ನ ತಪ್ಪಿನ ಅರಿವಾಗಿ ದಮ್ಮಯ್ಯ ಎಂದು ಭಾರತದ ಮುಂದೆ ಬೇಡಿಕೊಳ್ಳುವ ಹಂತಕ್ಕೆ ಬಂದಿದೆ. ಅದಕ್ಕೆ ಹೇಳೋದು ಮಾತನಾಡುವ ಮುಂಚೆ ಹತ್ತು ಬಾರಿ ಯೋಚನೆ ಮಾಡಬೇಕು ಅಂತ.

    ಇತ್ತೀಚೆಗಷ್ಟೇ ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಬಂದಿದ್ದು ನಿಮಗೆಲ್ಲ ತಿಳಿದಿದೆ. ಅಲ್ಲಿನ ಸೌಂದರ್ಯ ಕಂಡು ಪ್ರಧಾನಿ ಮೋದಿ ವಾವ್​​ ಎಂದಿದ್ದೇ ತಡ ಮಾಲ್ಡೀವ್ಸ್​ ರಾಜಕಾರಣಿಗಳಿಗೆ ಭಯ ಶುರುವಾದಂತಿದೆ. ಎಲ್ಲಿ ನಮ್ಮ ಮಾಲ್ಡೀವ್ಸ್​ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುತ್ತದೆ ಎಂಬ ಭಯದಲ್ಲಿ ನಾಲಿಗೆ ಹರಿಬಿಟ್ಟರು. ಸುಮ್ಮನೇ ಇದ್ದಿದ್ದರೆ ಎಲ್ಲವೂ ಮೊದಲಿನಂತಿರುತ್ತಿತ್ತು. ಆದರೆ, ಇರಲಾರದೆ ಇರುವೆ ಬಿಟ್ಟುಕೊಂಡರು ಎಂಬಂತೆ ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಂಡು ಇದೀಗ ಭಾರತೀಯ ಕೆಂಗಣ್ಣಿಗೆ ಗುರಿಯಾಗಿ, ನಮ್ಮ ಮುಂದೆ ಅಂಗಲಾಚಿ ಬೇಡಿಕೊಳ್ಳುವಂತಹ ಸ್ಥಿತಿಗೆ ಮಾಲ್ಡೀವ್ಸ್​ ಬಂದಿದೆ.

    ಪ್ರವಾಸೋದ್ಯಮವನ್ನೇ ಬದುಕಿನ ಆಧಾರ ಮಾಡಿಕೊಂಡಿರುವ ಮಾಲ್ಡೀವ್ಸ್​ಗೆ ಭಾರತದ ಪ್ರವಾಸಿಗರೇ ಪ್ರಮುಖ ಆದಾಯದ ಮೂಲ. ಮಾಲ್ಡೀವ್ಸ್​ ಮಾತ್ರವಲ್ಲ ಚೀನಾ ಸೇರಿದಂತೆ ಜಗತ್ತಿನ ಮುಂಚೂಣಿ ರಾಷ್ಟ್ರಗಳಿಗೂ ಭಾರತ ಒಂದು ದೊಡ್ಡ ಮಾರುಕಟ್ಟೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ ಸಂಗತಿ. ಆದರೆ, ಅದೇ ಭಾರತದ ವಿರುದ್ಧ ಬಾಲ ಬಿಚ್ಚಿದ ಮಾಲ್ಡೀವ್ಸ್​ನ ಬಾಲ ಈಗ ಕಟ್ಟಾಗಿದೆ. ಹೀಗಾಗಿಯೇ ಭಾರತದ ಮುಂದೆ ಮಂಡಿಯೂರಿದೆ.

    ಭಾರತೀಯ ಸಹೋದರ-ಸಹೋರಿಯರೇ
    ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್​ ಸಚಿವರು ನಾಲಿಗೆ ಹರಿಬಿಟ್ಟ ಬೆನ್ನಲ್ಲೇ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ. ಸಲ್ಮಾನ್​ ಖಾನ್​, ಸಚಿನ್​ ತೆಂಡೂಲ್ಕರ್​, ವೀರೇಂದ್ರ ಸೆಹ್ವಾಗ್​ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಮಾಲ್ಡೀವ್ಸ್​ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್​ ಬಹಿಷ್ಕರಿಸಿ ಅಭಿಯಾನವು ನಡೆಯಿತು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅನೇಕರು ತಮ್ಮ ಮಾಲ್ಡೀವ್ಸ್​ ಪ್ರವಾಸವನ್ನೇ ರದ್ದು ಮಾಡಿದರು. ಭಾರತ ಬೆಂಬಲಿಸಿರುವ ಈಸಿ ಮೈ ಟ್ರಿಪ್ ಟ್ರಾವೆಲ್ ಏಜೆನ್ಸಿಯು ಸಹ ಮಾಲ್ಡಿವ್ಸ್‌ಗೆ ತೆರಳುವ ವಿಮಾನಗಳ ಬುಕ್ಕಿಂಗ್​ಗಳನ್ನು ರದ್ದುಗೊಳಿಸಿದೆ. ಈ ಬೆಳವಣಿಗೆಯಿಂದ ಬಾಲ ಮುದುರಿದ ಬೆಕ್ಕಿನಂತಾಗಿರುವ ಮಾಲ್ಡೀವ್ಸ್​ ಇದೀಗ ಭಾರತದ ಮುಂದೆ ಕೈ ಚಾಚಿ ಭಿಕ್ಷೆ ಬೇಡುತ್ತಿದೆ. ವಿಮಾನ ಬುಕ್ಕಿಂಗ್​ ಅನ್ನು ಮರುಸ್ಥಾಪಿಸಿ ಎಂದು ಪ್ರಖ್ಯಾತ ಮಾಲ್ಡೀವ್​​ ಪ್ರವಾಸೋದ್ಯಮ ಮಂಡಳಿ ಈಸಿ ಟ್ರಿಪ್​ ಏಜೆನ್ಸಿ ಸಿಇಒ ನಿಶಾಂತ್​ ಪ್ರೀತಿಗೆ ಪತ್ರದ ಮೂಲಕ ಮನವಿ ಮಾಡಿದೆ.

    ಮಾಲ್ಡೀವ್ಸ್ ಅಸೋಸಿಯೇಷನ್ ​​ಆಫ್ ಟೂರ್ ಮತ್ತು ಟ್ರಾವೆಲ್ ಆಪರೇಟರ್ಸ್ ಅಥವಾ MATATO ಮಂಗಳವಾರ EaseMyTrip ಗೆ ವಿಷಾದ ವ್ಯಕ್ತಪಡಿಸಿದೆ. ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸಂಬಂಧವನ್ನು ವ್ಯಾಖ್ಯಾನಿಸುವ ನಿರಂತರ ಸ್ನೇಹ ಮತ್ತು ಪಾಲುದಾರಿಕೆಗಾಗಿ ನಾವು ಭಾರತಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಉಭಯ ರಾಷ್ಟ್ರಗಳ ನಡುವೆ ರಾಜಕೀಯವನ್ನು ಮೀರಿದ ಸಂಬಂಧಗಳು ಇವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಮ್ಮ ಭಾರತೀಯ ಸಹವರ್ತಿಗಳನ್ನು ನಾವು ಸಹೋದರ ಮತ್ತು ಸಹೋದರಿಯರಂತೆ ಕಾಣುತ್ತೇವೆ ಎಂದು MATATO ಪತ್ರದ ಮೂಲಕ ತಿಳಿಸಿದೆ.

    ಪ್ರವಾಸೋದ್ಯಮವು ಮಾಲ್ಡೀವ್ಸ್‌ನ ಜೀವನಾಡಿಯಾಗಿ ನಿಂತಿದೆ. ನಮ್ಮ GDP ಯ ಮೂರನೇ ಎರಡರಷ್ಟು ಕೊಡುಗೆಯನ್ನು ಈ ವಲಯವೇ ನೀಡುತ್ತಿದೆ. ಇಲ್ಲಿ ಕೆಲಸ ಮಾಡುವ ಸುಮಾರು 44,000 ಮಾಲ್ಡೀವಿಯನ್ನರಿಗೆ ಜೀವನೋಪಾಯವನ್ನು ಪ್ರವಾಸೋದ್ಯಮ ಒದಗಿಸುತ್ತದೆ. ಪ್ರವಾಸೋದ್ಯಮದ ಮೇಲಿನ ಸಂಭಾವ್ಯ ಪ್ರತಿಕೂಲ ಪರಿಣಾಮವು ನಮ್ಮ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದೆ ಎಂದಿರುವ MATATO, ಮಾಲ್ಡೀವಿಯನ್ ಪ್ರವಾಸೋದ್ಯಮ ಕ್ಷೇತ್ರದ ಯಶಸ್ಸಿನಲ್ಲಿ ಅನಿವಾರ್ಯ ಶಕ್ತಿ, ಅತಿಥಿ ಗೃಹಗಳಿಗೆ ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಭಾರತೀಯ ಪ್ರವಾಸಿಗರು ಒಂದು ದೊಡ್ಡ ಶಕ್ತಿಯಾಗಿದ್ದಾರೆ ಎಂದು ಹೇಳಿದೆ.

    ಇನ್ನೂ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಕಳೆದ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಭಾರತೀಯರು ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದರು ಮತ್ತು ಕಳೆದ ಎರಡು ವರ್ಷಗಳಲ್ಲಿ 4.5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಸಿಗರ ಸ್ವರ್ಗಕ್ಕೆ ಪ್ರಯಾಣಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಪ್ರವಾಸಿಗರಿಗೆ ಮುಕ್ತವಾದ ಕೆಲವೇ ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಒಂದು. ಈ ವೇಳೆ ಸುಮಾರು 63,000 ಭಾರತೀಯರು ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದರು.

    ದ್ವೇಷಪೂರಿತ ಕಾಮೆಂಟ್‌ಗಳ ಮೂಲಕ ಎರಡು ರಾಷ್ಟ್ರಗಳ ನಡುವಿನ ವಿಭಜನೆಗೆ ಕೊಡುಗೆ ನೀಡುವುದನ್ನು ತಕ್ಷಣವೇ ತಡೆಯಿರಿ ಎಂದು MATATO ಎಲ್ಲರನ್ನು ಒತ್ತಾಯಿಸಿದೆ. ಈ ಮೂಲಕ ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟ ತಮ್ಮ ದೇಶದ ರಾಜಕೀಯ ನಾಯಕರನ್ನು ಟೀಕಿಸಿದೆ.

    ಕಳೆದ ಸೋಮವಾರವಷ್ಟೇ ಈಸಿ ಮೈ ಟ್ರಿಪ್​ ತನ್ನ ವೆಬ್​ಸೈಟ್​ನಲ್ಲಿ ಮಾಲ್ಡೀವ್ಸ್​ಗೆ ಎಲ್ಲ ಬುಕ್ಕಿಂಗ್​ ಅನ್ನು ಸ್ಥಗಿತಗೊಳಿಸಿದೆ. ಇದೀಗ ಬುಕ್ಕಿಂಗ್​ ಓಪನ್​ ಮಾಡುವಂತೆ ಮನವಿ ಮಾಡಿಕೊಂಡಿದೆ.

    ಏನಿದು ವಿವಾದ?
    ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಸೌಂದರ್ಯಕ್ಕೆ ಮಾರುಹೋಗಿ ಕೊಂಡಾಡಿದರು. ಅಲ್ಲದೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಮಾತುಗಳನ್ನಾಡಿದರು. ಆದರೆ, ಇದು ಪಕ್ಕದ ಮಾಲ್ಡೀವ್ಸ್​ ಸಹಿಸಿಕೊಳ್ಳಲು ಆಗುತ್ತಿಲ್ಲ. ಏಕೆಂದರೆ, ಕಡಲತಡಿಯ ಪ್ರವಾಸೋದ್ಯಮವನ್ನೇ ಮಾಲ್ಡೀವ್ಸ್​ ದೊಡ್ಡ ಆದಾಯವಾಗಿ ಹೊಂದಿದೆ. ಇತ್ತೀಚೆಗೆ ಲಕ್ಷದ್ವೀಪಕ್ಕೆ ಸಿಗುತ್ತಿರುವ ಪ್ರಚಾರ-ಮನ್ನಣೆ ಸಹಿಸಿಕೊಳ್ಳಲಾಗದೆ ಅಲ್ಲಿನ ಜನಪ್ರತಿನಿಧಿಗಳು ಭಾರತವನ್ನು ಅವಹೇಳನ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋಲು ಕೊಟ್ಟು ಪೆಟ್ಟು ತಿಂದಂಥ ಪರಿಸ್ಥಿತಿ ಸೃಷ್ಟಿಯಾಗಿಸಿದೆ. ಮಾಲ್ದೀವ್ಸ್ ಉಪ ಸಚಿವೆ ಮರಿಯಂ ಶಿಯುನಾ ಮುಂತಾದವರು ಪ್ರವಾಸೋದ್ಯಮದ ವಿಚಾರದಲ್ಲಿ ಭಾರತವನ್ನು ಅವಮಾನಿಸಿ ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಭಾರತ ಮಾಲ್ದೀವ್ಸ್​ನ ಗುರಿಯಾಗಿಸುತ್ತಿದೆ, ಕಡಲತಡಿಯ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಜತೆ ಸ್ಪರ್ಧೆಗಿಳಿದರೆ ಭಾರತ ಸವಾಲೆದುರಿಸಬೇಕಾಗುತ್ತದೆ ಎಂದಿರುವ ಅವರು ಮೋದಿಯನ್ನೂ ನಿಂದಿಸಿ ಪೋಸ್ಟ್ ಮಾಡಿದ್ದರು. ಮಾಲ್ದೀವ್ಸ್ ಎಂಪಿ ಜಹಿದ್ ರಮೀಜ್ ಎಂಬಾತ, ಶ್ರೀಲಂಕಾದಂಥ ರಾಷ್ಟ್ರದ ಸಣ್ಣ ಆರ್ಥಿಕತೆಯನ್ನು ಭಾರತ ನಕಲು ಮಾಡಿ ಹಣ ಮಾಡುತ್ತಿದೆ ಎಂದು ಟೀಕಿಸಿದ್ದು ಕೂಡ ತೀವ್ರ ಆಕ್ರೋಶಕ್ಕೆ ಒಳಗಾಯಿತು.

    ಭಾರತೀಯರ ಆಕ್ರೋಶ
    ದೇಶದ ಪ್ರಧಾನಿ ಮತ್ತು ಭಾರತದ ಬಗ್ಗೆ ಮಾಲ್ಡೀವ್ಸ್​ ರಾಜಕಾರಣಿಗಳು ಲಘುವಾಗಿ ಮಾತನಾಡಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಯಿತು. ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್​ ವಿರುದ್ಧ ಕಿಡಿಕಾರಿದರು ಮತ್ತು ಮತ್ತೆ ಮಾಲ್ಡೀವ್ಸ್​ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಶಪಥ ಸಹ ಮಾಡಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್​ ಬಹಿಷ್ಕರಿಸಿ ಎಂಬ ಅಭಿಯಾನವೂ ಕೂಡ ಟ್ರೆಂಡ್​ ಆಯಿತು. ಮುಂಗಡವಾಗಿ ಬುಕ್ಕಿಂಗ್​ ಆಗಿದ್ದ ಅನೇಕ ಬುಕ್ಕಿಂಗ್​ಗಳು ಸಹ ರದ್ದಾದವು. ಇದರಿಂದ ಮಾಲ್ಡೀವ್ಸ್​ ಜನಪ್ರತಿನಿಧಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಮುಂದೇನು ಮಾಡುವುದು ಎಂಬ ಯೋಚನೆಯಲ್ಲಿ ಮುಳುಗಿದ್ದಾರೆ.

    ಮೂವರು ಸಚಿವರ ಅಮಾನತು
    ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಮಾಲ್ದೀವ್ಸ್ ಸರ್ಕಾರದ ಗಮನಕ್ಕೆ ಬಂದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಸರ್ಕಾರದ ದೃಷ್ಟಿಕೋನವಲ್ಲ ಎಂದು ಮಾಲ್ದೀವ್ಸ್ ಸರ್ಕಾರ ಬಳಿಕ ಸ್ಪಷ್ಟೀಕರಣ ನೀಡಿದೆ. ಮಾತ್ರವಲ್ಲ, ಇದಾದ ಕೆಲವೇ ಹೊತ್ತಲ್ಲಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ದೀವ್ಸ್ ಯುವ ಸಬಲೀಕರಣ ಸಚಿವಾಲಯದ ಉಪ ಸಚಿವೆಯರಾದ ಮರಿಯಂ ಶಿಯುನಾ, ಮಾಲ್​ಷಾ, ಸಾರಿಗೆ ಸಚಿವಾಲಯ ಉಪ ಸಚಿವ ಹಸನ್ ಜಿಹಾನ್ ಅವರನ್ನು ಮಾಲ್ದೀವ್ಸ್ ಸರ್ಕಾರ ಅಮಾನತುಗೊಳಿಸಿದೆ. (ಏಜೆನ್ಸೀಸ್​)

    ದ್ವೀಪರಾಷ್ಟ್ರಕ್ಕೆ ಇದೆಂಥಾ ದುರ್ಗತಿ! ಕಾಪಾಡಿ ಎಂದು ಚೀನಾ ಮುಂದೆ ಮಂಡಿಯೂರಿದ ಮಾಲ್ಡೀವ್ಸ್​

    ಕ್ರಿಕೆಟ್​ ಆಡುವಾಗಲೇ ಕುಸಿದುಬಿದ್ದು ಟೆಕ್ಕಿ ದುರ್ಮರಣ: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts