More

    ಸ್ವೀಪ್ ಚಟುವಟಿಕೆ ಪರಿಣಾಮಕಾರಿಯಾಗಿರಲಿ

    ಬಾಗಲಕೋಟೆ: ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಮತದಾನ ಆಗಿರುವ ಕಡೆಗಳಲ್ಲಿ ಸ್ವೀಪ್ ಚಟುವಟಿಕೆ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಜಿಪಂ ಸಿಇಒ ಆಗಿರುವ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ತಿಳಿಸಿದರು.

    ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸೋಮವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಚಟುವಟಿಕೆ ಅನುಷ್ಠಾನದ ಜಿಲ್ಲಾ ಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ವಿವಿಧ ಜಾಥಾ, ರಂಗೋಲಿ ಸ್ಪರ್ಧೆ ಸೇರಿ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ. ಅಧಿಕಾರಿಗಳು ಈ ಕಾರ್ಯಕ್ಕೆ ತಮ್ಮ ಹಂತದಲ್ಲಿ ವಿವಿಧ ಚಟುವಟಿಕೆ, ಕ್ರಿಯಾಯೋಜನೆ ರೂಪಿಸಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಲು ತಿಳಿಸಿದರು.

    ಜಿಲ್ಲೆಯಲ್ಲಿ ಸ್ಥಾಪಿಸಲಾದ ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಅಂಗವಿಕಲ ಮತದಾರರಿಗೆ ರ‌್ಯಾಂಪ್ ವ್ಯವಸ್ಥೆ, ಕುಡಿಯುವ ನೀರು, ಶೌಚಗೃಹ ಸೇರಿ ಎಲ್ಲ ಸೌಲಭ್ಯಗಳು ಹೊಂದಿರಬೇಕು. ಇದಕ್ಕಾಗಿ ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೌಲಭ್ಯಗಳ ಕುರಿತು ಖಚಿತಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.

    ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಮತದಾನ ಸಂದರ್ಭದಲ್ಲಿ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಶಾಮಿಯಾನ ವ್ಯವಸ್ಥೆ, ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿಗಾಗಿ ಆಸನ ವ್ಯವಸ್ಥೆಗೆ ಕ್ರಮ ವಹಿಸಬೇಕು. ಪ್ರತಿಯೊಬ್ಬ ಮತದಾರ ಸಹಭಾಗಿತ್ವ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮತದಾರ ಮತದಾನದಿಂದ ವಂಚಿತರಾಗದಂತೆ ಕಡ್ಡಾಯವಾಗಿ ಮತ ಚಲಾಯಿಸುವ ನಿಟ್ಟಿನಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸಬೇಕು ಎಂದರು.

    ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸ್ವೀಪ್ ಸಮಿತಿ ವತಿಯಿಂದ ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಅಭಿಯಾನ ಕೈಗೊಳ್ಳಬೇಕು. ನಿರಂತರವಾಗಿ ಈ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬೀದಿ ನಾಟಕ, ಸರ್ಕಾರಿ ಕಚೇರಿಗಳಲ್ಲಿ ಗೋಡೆ ಬರಹ, ಆಕರ್ಷಣೀಯ ವರ್ಲಿ ಕಲೆ ಬರೆಯುವುದು ಸೇರಿದಂತೆ ಮತದಾನ ಮಹತ್ವ ಸಾರಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ತಿಳಿಸಿದರು.

    ವಿದ್ಯಾರ್ಥಿಗಳಿಗೆ ಚಿತ್ರಬಿಡಿಸುವ ಸ್ಪರ್ಧೆ, ಜಾಥಾ ಕಾರ್ಯಕ್ರಮ, ಮತದಾನ ಅರಿವು ಕುರಿತು ಕಾರ್ಯಾಗಾರ, ಪ್ರತಿಜ್ಞಾವಿಧಿ ಬೋಧನೆ-ಸ್ವೀಕಾರ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ, ಮ್ಯಾರಾಥಾನ್, ರ‌್ಯಾಲಿ, ಆಟೋಟ ಚಟುವಟಿಕೆ, ಕ್ಯಾಂಡಲ್ ಲೈಟ್ ಸೇರಿ ಹಲವು ಚಟುವಟಿಕೆಯನ್ನು ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

    ಜಿಲ್ಲೆಯ ಗ್ರಾಮಿಣ ಹಾಗೂ ನಗರಪ್ರದೇಶದಲ್ಲಿ 9 ವಿಶೇಷ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಈ ಪೈಕಿ 5 ಪಿಂಕ್, 1 ವಿಶೇಷ ಚೇತನರ ಮತಗಟ್ಟೆ, 1 ಯುವ ಮತಗಟ್ಟೆ, 1 ಥೀಮ್ ಉಳ್ಳ ಮತಗಟ್ಟೆ ಹಾಗೂ 1 ಸಾಂಸ್ಕೃತಿಕ ಮಹತ್ವವುಳ್ಳ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ಅಧಿಕಾರಿಗಳಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಭೆಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಶಶಿಕಾಂತ ಶಿವಪುರೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts