More

    ಲೋಕಸಭೆ ಚುನಾವಣೆ ಒಳಗೆ ಮೀಸಲಾತಿ ಕಲ್ಪಿಸಿ

    ಕೂಡಲಸಂಗಮ: ಲೋಕಸಭಾ ಚುನಾವಣೆ ಒಳಗೆ ಸರ್ಕಾರ 2ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತರಿಗೆ ಒಬಿಸಿ ಮೀಸಲಾತಿ ಶಿಫಾರಸು ಮಾಡಬೇಕು. ಸಿದ್ದರಾಮಯ್ಯನವರ ಸರ್ಕಾರ ಬರಲು ಪಂಚಮಸಾಲಿ ಹೋರಾಟ ಕಾರಣ ಎಂಬುದನ್ನು ಮರೆಯಬಾರದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಪಂಚಮಸಾಲಿ ಪಾದಯಾತ್ರೆಯ ತೃತೀಯ ವರ್ಷಾಚರಣೆ ನಿಮಿತ್ತ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಭಾನುವಾರ ನಡೆದ 2ಎ ಮೀಸಲಾತಿ ಚಳವಳಿಗಾರರ ಪಂಚಸಂಗಮ ಸಭೆ ಹಾಗೂ 12ನೇ ಕೃಷಿ ಸಂಕ್ರಾಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಮುಖ್ಯಮಂತ್ರಿಗಳೇ ನಮ್ಮ ಋಣ ನಿಮ್ಮ ಮೇಲೆ ಇದೆ. ನಿರ್ಲಕ್ಷಿಸಿದರೆ ಸಮಾಜ ಬಾಂಧವರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ನೂರು ವರ್ಷದಲ್ಲಿ ಮಾಡದ ಸಂಘಟನೆ ಮೂರು ವರ್ಷದಲ್ಲಿ ಮಾಡಿದ ತೃಪ್ತಿ ನಮ್ಮ ಪಾದಯಾತ್ರೆಗೆ ಇದೆ. ಭಾರತದ ಇತಿಹಾಸದಲ್ಲಿ ಸ್ವಾತಂತ್ರೃ ಹೋರಾಟದ ನಂತರ ನಿರಂತರ ಮೂರು ವರ್ಷ ಹೋರಾಟ ಮಾಡಿದ್ದು ದಾಖಲೆಯಾಗಿದೆ ಎಂದರು.

    ಭಕ್ತಾದಿಗಳು, ಸಮಾಜದ ನಾಯಕರು ಮೂರು ವರ್ಷಗಳವರೆಗೆ ನಮ್ಮ ಮೇಲಿಟ್ಟ ನಂಬಿಕೆ, ವಿಶ್ವಾಸ, ಭರವಸೆ ಮರೆಯುವಂತಿಲ್ಲ. ಎಷ್ಟೋ ಯುವಕರು, ಹಿರಿಯರು ಮನೆ ಬಿಟ್ಟರೆ, ನಾನು ಮಠ ಬಿಟ್ಟು ಹೋರಾಟ ಮಾಡಿದ್ದೇನೆ ಎಂದರು.

    ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀಸಲಾತಿ ಹೋರಾಟದಲ್ಲಿ ರಾಜಕೀಯ ಬೇಡ. ನಾವು ಹೋರಾಟ ಮಾಡಲು ಸಿದ್ಧ. ಸಂದರ್ಭ ಬಂದರೆ ಪುನಃ ಹೋರಾಟ ಆರಂಭಿಸುತ್ತೇವೆ.

    ಮುಖ್ಯಮಂತ್ರಿಗಳು ಒಂದು ವಾರದಲ್ಲಿ ಸಭೆಯ ಕರೆಯುತ್ತೆನೆ ಎಂದಿದ್ದಾರೆ. ಮೀಸಲಾತಿ ಹೋರಾಟ ನಿರಂತರ ನಡೆಯುತ್ತಿದೆ. ನಮಗೆ ಬೇಕಾಗಿರುವುದು 2ಎ ಮೀಸಲಾತಿ, 2ಡಿ ಅಲ್ಲ. ನಾನು ಮುಖ್ಯಮಂತ್ರಿಗಳಿಗೆ ನಮ್ಮ ಸಮಾಜಕ್ಕೆ 2ಎ ಮೀಸಲಾತಿ, ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಕೊಡುವಂತೆ ಶಿಫಾರಸು ಮಾಡುವಂತೆ ಸ್ಪಷ್ಟವಾಗಿ ಹೇಳಿರುವುದಾಗಿ ತಿಳಿಸಿದರು.

    ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಬಿ.ಎಸ್. ಪಾಟೀಲ ನಾಗರಾಳ, ರುದ್ರಗೌಡ ಪಾಟೀಲ, ಬಿ.ಎಂ. ಪಾಟೀಲ, ಮಹಾಂತೇಶ ಕಡಾಡಿ, ವೀಣಾ ಕಾಶಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts