More

    ಬಹುಮತದ ಬಿಜೆಪಿ ಸರ್ಕಾರ ಬರಲಿ – ಪ್ರಧಾನಿ ಮೋದಿ ಅಭಿಮತ

    ಬಳ್ಳಾರಿ: ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಆಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ನಗರದ ಹೊರವಲಯದಲ್ಲಿರುವ ಸತ್ಯಂ ಶಾಲೆ ಎದುರುಗಡೆಯ ವಿಶಾಲ ಜಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು. ಸ್ವಾತಂತ್ರೃ ಬಂದು ಏಳು ದಶಕಗಳೇ ಕಳೆದರೂ ಕಾಂಗ್ರೆಸ್ ಸಾಮಾನ್ಯ ಜನರಿಗೆ ಮೂಲ ಸೌಲಭ್ಯ ಕಲ್ಪಿಸಲುವಲ್ಲಿ ವಿಫಲವಾಗಿದೆ.

    ಇದನ್ನೂ ಓದಿ: ನನ್ನ ನಮಸ್ಕಾರ ಮನೆ ಮನೆಗೆ ತಲುಪಿಸುವಿರಾ? – ನರೇಂದ್ರ ಮೋದಿ

    ಬಂಜಾರ, ವಾಲ್ಮೀಕಿ ಸೇರಿದಂತೆ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದ ಜನರಿಗೆ ಗುಣಮಟ್ಟದ ಶಿಕ್ಷಣ, ಕುಡಿಯುವ ನೀರಿನ ಸೌಲಭ್ಯ , ವಸತಿ, ಶೌಚಗೃಹ ತಲುಪಿಸಿಲ್ಲ. ಈ ಕೊರತೆಯನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

    ಬಳ್ಳಾರಿ ಜಿಲ್ಲೆಯಲ್ಲಿ 1.50 ಲಕ್ಷ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಲಾಗಿದೆ. ಸ್ಲಂ ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ಕರ್ನಾಟಕದ ವಿಕಾಸ ಆಗಬೇಕಿದೆ. ಅಭಿವೃದ್ಧಿ ಪಥದಲ್ಲಿ ಸಾಗಬೇಕಿದೆ. ರಸ್ತೆ, ವಿಮಾನ ನಿಲ್ದಾಣ, ಶಿಕ್ಷಣ, ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಮಾಡಲು ಬಿಜೆಪಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

    ಮನೆಮನೆಗೆ ಭೇಟಿ ನೀಡಿ ಮತದಾರರಿಗೆ ಬಿಜೆಪಿಗೆ ಮತ ನೀಡಲು ತಿಳಿಸಿ. ಇದು ನನ್ನ ಕೆಲಸ ಎಂದು ಮಾಡಬೇಕು. ಮೋದಿ ಅವರು ಬಳ್ಳಾರಿಗೆ ಬಂದಿದ್ದರು, ಎಲ್ಲರಿಗೂ ನಮಸ್ಕಾರ, ಅಭಿನಂದನೆ ತಿಳಿಸಿದ್ದಾರೆ ಎಂದು ಪ್ರತಿ ಮನೆಗೂ ಹೋಗಿ ಹೇಳುವ ಕೆಲಸ ಮಾಡಬೇಕು. ಆಗ ಮಾತ್ರ ಬಳ್ಳಾರಿಗೆ ಕಬ್ಬಿಣದಷ್ಟೂ ತಾಕತ್ತು ಸಿಗಲಿದೆ ಎಂದರು.

    ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಹಗರಣಗಳಿಂದ ಕಾಂಗ್ರೆಸ್ ನೆಲಕಚ್ಚಿದೆ. ವಿಶ್ವದ ನೆಚ್ಚಿನ ನಾಯಕ ನರೇಂದ್ರ ಮೋದಿ ಅವರಿಗೆ ಹೆಚ್ಚಿನ ಜನ ಮನ್ನಣೆ ಸಿಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದರು.

    ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ಬೆಳ್ಳಿಯ ಕನಕದುರ್ಗಮ್ಮ ದೇವಿ ವಿಗ್ರಹ ನೀಡಿ ಸನ್ಮಾನಿಸಲಾಯಿತು. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಅಭ್ಯರ್ಥಿಗಳಾದ ಸುರೇಶ್‌ಬಾಬು, ಶಿಲ್ಪಾ ರಾಘವೇಂದ್ರ, ಬಿ.ಶ್ರೀರಾಮುಲು, ಜಿಲ್ಲಾಧ್ಯಕ್ಷ ಗೋನಾಳ ಮುರಹರಗೌಡ, ಮುಖಂಡ ಸಿದ್ದೇಶ್ ಯಾದವ್ ಮತ್ತಿತರರು ಪಾಲ್ಗೊಂಡಿದ್ದರು.

    ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ

    ಸಮಾವೇಶದಲ್ಲಿ ಮಾತನಾಡಿದ ಸಿರಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ, ರಾಜ್ಯದಲ್ಲಿ ಸದೃಢವಾದ ಸರ್ಕಾರ ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಎಲ್ಲ ಸಮುದಾಯಗಳಿಗೆ ಅನುದಾನ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ.

    ರಾಜ್ಯದಲ್ಲಿ ವಿರೋಧ ಪಕ್ಷದವರು ಸುಖಾಸುಮ್ಮನೆ ಬೊಬ್ಬೆ ಹೊಡೆಯುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕೆಳವರ್ಗದ ಜನರಿಗೆ ಮೀಸಲಾತಿ ಸರಿಯಾಗಿ ನೀಡಲು ಸಾಧ್ಯವಾಗಿರಲಿಲ್ಲ ಎಂದರು. ಬಡ ವರ್ಗಕ್ಕೆ ಬೊಮ್ಮಾಯಿ ಅವರು ಮೀಸಲಾತಿ ಕಲ್ಪಿಸಿದ್ದಾರೆ.

    ಪರಿಶಿಷ್ಟ ಪಂಗಡದವರಿಗೆ ಶೇ. 3ರಿಂದ ಶೇ.7, ಪರಿಶಿಷ್ಟ ಜಾತಿ ಅವರಿಗೆ ಶೇ.15ರಿಂದ ಶೇ.17ಕ್ಕೆ ಏರಿಸಲಾಗಿದೆ. ಪ್ರಧಾನಿ ಮೋದಿ ಅವರು ಜನ್‌ಧನ್, ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆ, ಉಜ್ವಲ ಯೋಜನೆಯಡಿ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿದ್ದಾರೆ. ಮುಂದುವರಿದ ದೇಶಗಳು ನಮ್ಮ ದೇಶದ ಪ್ರಧಾನಿಯನ್ನು ಕೊಂಡಾಡುತ್ತಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನವ ಸಂಡೂರಿಗೆ ಸಹಕರಿಸಿ

    ಸಮಾವೇಶದಲ್ಲಿ ಮಾತನಾಡಿದ ಸಂಡೂರು ಕ್ಷೇತ್ರದ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ, ಸಂಡೂರು ವಿಧಾನ ಸಭೆ ಕ್ಷೇತ್ರದಿಂದ ಕಳೆದ ಬಾರಿ ಡಿ.ರಾಘವೇಂದ್ರ ಅವರಿಗೆ 64 ಸಾವಿರ ಮತಗಳನ್ನು ನೀಡಿ ಮತದಾರರು ಬೆಂಬಲಿಸಿದ್ದರು. ವಿಧಿಯಾಟ ಕರೊನಾ ಮಹಾಮಾರಿಗೆ ನನ್ನ ಪತಿ ರಾಘವೇಂದ್ರ ಅವರು ನಿಧನರಾದರು. ನವ ಸಂಡೂರು ನಿರ್ಮಾಣಕ್ಕೆ ಮತದಾರರು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

    ಬಹುಮತದ ಬಿಜೆಪಿ ಸರ್ಕಾರ ಬರಲಿ - ಪ್ರಧಾನಿ ಮೋದಿ ಅಭಿಮತ

    ಕುರ್ಚಿಗಳು ಖಾಲಿ ಖಾಲಿ

    ಪ್ರಧಾನಿ ಮೋದಿ ಅವರ ಭಾಷಣ ಕೇಳಲು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಜನರಿಗಾಗಿ 80 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಯಷ್ಟು ಜನರು ಆಗಮಿಸದ ಹಿನ್ನೆಲೆ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಬಳ್ಳಾರಿ ನಗರದಿಂದ ಹೊರವಲಯದಲ್ಲಿರುವುದರಿಂದ ಜನರು ಅಷ್ಟೊಂದು ಸಂಖ್ಯೆಯಲ್ಲಿ ಪಾಲ್ಗೊಂಡಿರಲಿಲ್ಲ.

    ಬೆಳಗ್ಗೆಯಿಂದಲೇ ಜನರು ವೇದಿಕೆಯತ್ತ ಧಾವಿಸಿದರೂ ಭದ್ರತಾ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರಿಂದಾಗಿ ಕೆಲವರು ವೇದಿಕೆಯತ್ತ ಬರಲು ಆಗಿರಲಿಲ್ಲ. ಮಧ್ಯಾಹ್ನ 2ರ ಹೊತ್ತಿಗೆ ವೇದಿಕೆ ಮುಂಭಾಗ ಕುರ್ಚಿಗಳು ಖಾಲಿ ಖಾಲಿ ಆಗಿರುವುದನ್ನು ಗಮನಿಸಿದ ಬಿಜೆಪಿ ನಾಯಕರು, ಹಿಂಬದಿಯಲ್ಲಿ ಕುಳಿತಿದ್ದ ಜನರನ್ನು ವೇದಿಕೆ ಮುಂಭಾಗ ಕಳಿಸುವಂತೆ ವೇದಿಕೆಯಿಂದಲೇ ಆಗಾಗ ಸಂದೇಶವನ್ನು ಕಳುಹಿಸುತ್ತಿದ್ದರು.

    ಬಹುಮತದ ಬಿಜೆಪಿ ಸರ್ಕಾರ ಬರಲಿ - ಪ್ರಧಾನಿ ಮೋದಿ ಅಭಿಮತ
    ನಮೋ ಹುಟ್ಟಿದ ದಿನಾಂಕದ ನೋಟುಗಳ ಸಂಗ್ರಹ

    ಬಳ್ಳಾರಿಯ ದೀಪಕ್ ಸ್ಟೋರ್‌ನ ಉದ್ಯಮಿ ಸುರೇಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರು ಹುಟ್ಟಿದ ದಿನಾಂಕ ಹೊಂದುವ ಸಂಖ್ಯೆ ಇರುವ ನೋಟುಗಳನ್ನು ಸಂಗ್ರಹಿಸಿ ಫೋಟೋ ಫ್ರೇಮ್ ಹಾಕಿಸಿ ತಂದಿದ್ದು ವಿಶೇಷವಾಗಿತ್ತು. ಮೋದಿ ಅವರ ಹುಟ್ಟಿದ ದಿನಾಂಕ 19-09-1950ರ ನಂಬರಿನ, 10, 20, 50, 100, 500 ರೂ. ನೋಟುಗಳು ಜೋಡಿಸಿ, ಫೋಟೋ ಫ್ರೇಮ್ ಹಾಕಿಕೊಂಡು ಗಿಫ್ಟ್ ಕೊಡಲು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts