More

    ನನ್ನ ನಮಸ್ಕಾರ ಮನೆ ಮನೆಗೆ ತಲುಪಿಸುವಿರಾ? – ನರೇಂದ್ರ ಮೋದಿ

    ವಿಜಯಪುರ: ‘ನನ್ನದೊಂದು ಚಿಕ್ಕ ಕೋರಿಕೆ, ನನ್ನ ನಮಸ್ಕಾರ ಮನೆ ಮನೆಗೆ ತಲುಪಿಸುವಿರಾ? ಇದನ್ನು ಈಡೇರಿಸುತ್ತೀರಾ? ನೀವು ಈಡೇರಿಸಲೇಬೇಕು. ನನಗೋಸ್ಕರ ಈ ಚಿಕ್ಕದೊಂದು ಕೆಲಸ ಮಾಡಿಕೊಡುವಿರಾ?’ ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೆರೆದ ಅಪಾರ ಜನಸ್ತೋಮವನ್ನು ಭಾವನಾತ್ಮಕವಾಗಿ ಸೆಳೆದರು.

    ನಗರದ ಸೈನಿಕ ಶಾಲೆ ಆವರಣದಲ್ಲಿ ಶನಿವಾರ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಇಂಥದೊಂದು ಪ್ರಶ್ನೆಯನ್ನು ನೆರೆದ ಜನಸ್ತೋಮದ ಮುಂದೆ ಇಡುತ್ತಿದ್ದಂತೆ ಇಡೀ ಮೈದಾನ ಒಂದು ಕ್ಷಣ ಸ್ತಂಭೀಭೂತವಾಯಿತು. ಮೈ-ಮನಸ್ಸುಗಳಲ್ಲಿ ವಿದ್ಯುತ್ ಸಂಚಾರವಾದ ಅನುಭವ. ಕರ್ಣಗಳೆರಡೂ ಮೋದಿ ಕೋರಿಕೆಯತ್ತ ನಿಮಿರಿ ನಿಂತಿದ್ದವು.

    ಇದನ್ನೂ ಓದಿ : ಗಡಿ ಸಮಸ್ಯೆಗೆ ನೆಹರು ಕಾರಣ – ಸುಧೀರ ಮುನಗಂಟಿವಾರ್

    ಮೋದಿ ಕೇಳಿಕೊಂಡಿದ್ದೇನು ಗೊತ್ತಾ?

    ಅಂದ ಹಾಗೆ ಮೋದಿ ಕೇಳಿಕೊಂಡಿದ್ದೇನು ಗೊತ್ತಾ? ‘‘ನನ್ನ ಚಿಕ್ಕ ಕೆಲಸ ನೀವು ಮಾಡಿಕೊಡಲೇಬೇಕು. ಆ ಕೆಲಸ ಏನೆಂದರೆ, ಪ್ರತಿ ಮನೆಗೆ ಹೋಗಿ ಅಲ್ಲಿನ ಜನರಿಗೆ ನಮಸ್ಕಾರ ಮಾಡಿ, ಮೋದಿ, ನಿಮ್ಮ ಸೇವಕ ದೆಹಲಿಯಿಂದ ವಿಜಯಪುರಕ್ಕೆ ಬಂದಿದ್ದರು. ಅವರು ನಿಮಗೆ ನಮಸ್ಕಾರವನ್ನು ತಿಳಿಸಿದ್ದಾರೆ ಎಂದು ಹೇಳಿ, ಮೋದಿ ಅವರಿಗೆ ನಿಮ್ಮ ಆಶೀರ್ವಾದ ಬೇಕಾಗಿದೆ ಎಂದು ಹೇಳುವಿರಾ?’ ಎಂದು ಉತ್ಸಾಹಭರಿತವಾಗಿ ಮೋದಿ ಕೋರಿಕೊಳ್ಳುತ್ತಿದ್ದಂತೆ ಸೇರಿದ ಅಪಾರ ಜನಸ್ತೋಮ ಎರಡೂ ಕೈಗಳನ್ನು ಮೇಲೆತ್ತಿ ‘ಹೋ…’ ಎಂದು ಚಿತ್ಕಾರ ತೆಗೆದರು.

    ಆರಂಭದಲ್ಲಿಯೇ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ‘ಪಂಚನದಿಗಳ ನಾಡು ವಿಜಯಪುರದ ಎಲ್ಲ ಜನತೆಗೆ ನಮಸ್ಕಾರಗಳು‘ ಎಂದಿದ್ದು ರೋಮಾಂಚನಗೊಳಿಸಿತು. ಕಿಕ್ಕಿರಿದು ತುಂಬಿದ್ದ ಜನ ‘ಮೋದಿ… ಮೋದಿ… ಮೋದಿ’ ಎಂದು ಘೋಷಣೆ ಮೊಳಗಿಸಿದರು. ಮೋದಿ ಬಾಯಿಂದ ಹೊರಹೊಮ್ಮಿದ ‘ಪಂಚನದಿಗಳ ಬೀಡು’ ಎಂಬ ಉಪಮೇಯ ಜನರನ್ನು ಪುಳಕಿತರನ್ನಾಗಿಸಿತು.

    ಜಿಲ್ಲೆಯ ನೀರಾವರಿ ಕುರಿತು ಮಾತನಾಡಿದ ಮೋದಿ, ಈ ಹಿಂದೆ ನೀರಾವರಿಗೆ ದೊಡ್ಡ ಪ್ರಯತ್ನಗಳು ನಡೆಯಬೇಕಿದ್ದವು. ಆದರೆ, ನಡೆಯಲಿಲ್ಲ. ನಮ್ಮ ಸರ್ಕಾರ ಯುಕೆಪಿ ಮೂರನೇ ಹಂತದ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳುತ್ತಿದೆ. ನಾರಾಯಣಪುರ ಜಲಾಶಯಕ್ಕೆ ಆಧುನಿಕ ಸ್ಪರ್ಶ ನೀಡಿದೆ. ಮುಳವಾಡ ಏತ ನೀರಾವರಿ ಅನುಷ್ಟಾನಕ್ಕೆ ತಂದಿದೆ. ಹೊರ್ತಿ-ರೇವಣಸಿದ್ದೇಶ್ವರ ಯೋಜನೆಗೆ ಚಾಲನೆ ನೀಡಿದೆ ಎಂದಿದ್ದು ಈ ಭಾಗದ ಜನರಲ್ಲಿ ಅಭಿವೃದ್ಧಿಯ ಆಶಾಕಿರಣ ಗೋಚರಿಸಿತು. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ ಎಂದಾಗ ಜನ ಘೋಷಣೆ ಮೊಳಗಿಸಿದರು.

    ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ದೇಶಕ್ಕಾಗಿ ನಾವು ಪ್ರಾಣ ತ್ಯಾಗ ಮಾಡಲು ಸಿದ್ಧ, ನಾವು ಭಾರತದ ಅಪಮಾನ ಯಾವ ಕಾಲಕ್ಕೂ ಸಹಿಸುವುದಿಲ್ಲ, ಪ್ರತಿಪಕ್ಷ ನಾಯಕರೇ ಕೆಟ್ಟ ನಾಲಿಗೆಯಿಂದ ನಮ್ಮ ನಾಯಕರನ್ನು ಟೀಕಿಸಿದರೆ ಅದೇ ಪರಿಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದರು.

    ನೇತಾಜಿ ಸುಭಾಸಚಂದ್ರ ಬೋಸ್ ಅವರ ಅಪರಾವತಾರವಾಗಿರುವ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಭಾರತ ವಿಶ್ವಗುರುವಾಗಿ ಮುನ್ನಡೆಯುತ್ತಿದೆ. ಮೋದಿ ಎಂದರೆ ದೇಶ, ಮೋದಿ ಎಂದರೆ ರಕ್ಷಣೆ, ಮೋದಿ ಎಂದರೆ ಹಿಂದುತ್ವ, ಮೋದಿ ಎಂದರೆ ಭ್ರಷ್ಟರಿಗೆ ಸಿಂಹ ಸ್ವಪ್ನ, ಮೋದಿ ಎಂದರೆ ಪ್ರಾಮಾಣಿಕತೆ, ಮೋದಿ ಎಂದರೆ ಸಂಸ್ಕೃತಿ, ಮೋದಿ ಎಂದರೆ ದೂರದೃಷ್ಟಿ, ಮೋದಿ ಎಂದರೆ ಅಜಾತಶತ್ರು ಎಂದು ಯತ್ನಾಳ ಉಲ್ಲೇಖಿಸಿ ಭರ್ಜರಿ ಭಾಷಣ ಮಾಡಿದರು.

    ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಪಟ್ಟಿ ಮಂಡಿಸಿದರು. ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಬಬಲೇಶ್ವರ ಅಭ್ಯರ್ಥಿ ವಿಜುಗೌಡ ಪಾಟೀಲ, ಇಂಡಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಮಾತನಾಡಿದರು. ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಸೋಮನಗೌಡ ಪಾಟೀಲ ಸಾಸನೂರ, ಸಂಜೀವ ಐಹೊಳೆ, ರಮೇಶ ಭೂಸನೂರ, ಎಸ್.ಕೆ. ಬೆಳ್ಳುಬ್ಬಿ, ಜಗದೀಶ ಗುಡಗಂಟಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಪಿ.ಎಚ್. ಪೂಜಾರ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts