More

    ಕಲ್ಲೇಶ್ವರ ಸ್ವಾಮಿ ಸಂಭ್ರಮದ ಮಹಾರಥೋತ್ಸವ


    ಜಗಳೂರು: ತಾಲೂಕಿನ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಕಲ್ಲೇದೇವರಪುರ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ಮಹಾರಥೋತ್ಸವ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ಒಂದು ವಾರದ ಕಾಲ ನಡೆಯುವ ಜಾತ್ರೆ ಹಿನ್ನೆಲೆ ಗ್ರಾಮದಲ್ಲಿ ಜನಸ್ತೋಮ ನೆರೆದಿತ್ತು. ಮುಂಜಾನೆ ಸ್ವಾಮಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಮುಂಜಾನೆ ಸ್ವಾಮಿ ಮೂರ್ತಿಯನ್ನು ಹೊಳೆಗೆ ಕರೆದೊಯ್ದು ಗಂಗಾಪೂಜೆ, ಮಂಗಳಾರತಿ ಬಸವನ ಉಚ್ಚ್ಚಾಯ ನೆರವೇರಿಸಲಾಯಿತು. ನಂತರ ಅಭಿಷೇಕ ನೆರವೇರಿತು.

    ಜಮ್ಮಾಪುರ ಗ್ರಾಮದ ಭಕ್ತರು ಪಾದಯಾತ್ರೆ ಮೂಲಕ ಕಲ್ಲೇದೇವರಪುರಕ್ಕೆ ತಂದ ಸಜ್ಜೆ ಹೋಳಿಗೆ ಎಡೆಯ ಅಭಿಷೇಕ, ರುದ್ರಾಭಿಷೇಕ, ಬಾಳೇಭಿಷೇಕ ಮದಲಿಂಗ ಶಾಸ್ತ್ರ ಮತ್ತು ಗಜೋತ್ಸವ, ಕಂಕಣಧಾರಣೆ, ವೃಷಭೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ನಡೆದವು.

    ತೇರು ಬೀದಿಯಲ್ಲಿ ಮಧ್ಯಾಹ್ನ 3 ಗಂಟೆಯಿಂದಲೇ ರಥೋತ್ಸವಕ್ಕಾಗಿ ಜನರು ಬಿಸಿಲನ್ನು ಲೆಕ್ಕಿಸದೇ ಕಾದು ನಿಂತಿದ್ದರು. ಸಂಜೆ 5 ಗಂಟೆಗೆ ಕಲ್ಲೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

    ಮೂರ್ತಿಯನ್ನು ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಿ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ತೇರಿನ ಗಾಲಿಗೆ ತೆಂಗಿನ ಕಾಯಿ ಹೊಡೆದು, ಕಳಸಕ್ಕೆ ಬಾಳೆಹಣ್ಣು ಎಸೆದು ಸ್ವಾಮಿ ಕೃಪೆಗೆ ಪಾತ್ರರಾದರು.

    ಶಾಸಕ ಎಸ್.ವಿ. ರಾಮಚಂದ್ರ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಕೆ.ಪಿ. ಪಾಲಯ್ಯ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕಾನನಕಟ್ಟೆ ಪ್ರಭು ಮತ್ತಿತರಿದ್ದರು. ಏ.12ರ ಬುಧವಾರ ಸ್ವಾಮಿ ಅಡ್ಡಪಲ್ಲಕ್ಕಿ ಮಹೋತ್ಸವ, ರಾತ್ರಿ ಕೋಲಾಟ, ಭಜನೆ, ಹರಿಕಥೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಓಕುಳಿ, ಸಂಜೆ ಗುಡಿ ತುಂಬಿಸಿ ಜಾತ್ರೆಗೆ ತೆರೆ ಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts