More

    ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಮಹಾಲಿಂಗಪುರ-ರಬಕವಿ ರಸ್ತೆ

    ಮಹಾಲಿಂಗಪುರ: ಪಟ್ಟಣದಿಂದ ರಬಕವಿಗೆ ತೆರಳುವ ಜಾಂಬೋಟಿ-ರಬಕವಿ ರಾಜ್ಯ ಹೆದ್ದಾರಿ ಮಹಾಲಿಂಗಪುರ ಸಮೀಪದ ಖಾಸಗಿ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುವಂತಿದೆ.

    ರಸ್ತೆ ಒಂದು ಬದಿ ರಸ್ತೆ ಹದಗೆಟ್ಟು ಮಳೆ ನೀರು, ಇತರೆಡೆಯಿಂದ ಹರಿದು ಬರುವ ನೀರು ಸೇರಿ ಚರಂಡಿಯಂತಾಗಿ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

    ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅವುಗಳಲ್ಲಿ ದ್ವಿಚಕ್ರ ವಾಹನಗಳೇ ಅಧಿಕ. ಪಟ್ಟಣದ ವಿವಿಧ ಬಡಾವಣೆಗಳಾದ ಜಯನಗರ, ದಾನಮ್ಮ ದೇವಿನಗರ, ಶಾಂತಿನಗರ ಹಾಗೂ ಚಿಮ್ಮಡ ಗ್ರಾಮದ ನಿವಾಸಿಗಳು ಈ ರಸ್ತೆಯನ್ನೇ ಅವಲಂಬಿಸಿ ಬಸ್‌ನಿಲ್ದಾಣ, ಚನ್ನಮ್ಮ ಸರ್ಕಲ್ ಮುಖಾಂತರ ಪಟ್ಟಣದೊಳಗೆ ಪ್ರವೇಶಮಾಡುತ್ತಾರೆ. ಚಿಮ್ಮಡ ಕಡೆಯಿಂದ ಬರುವಾಗ ರಸ್ತೆಯ ಎಡಭಾಗ ಹಾಳಾಗಿದ್ದು, ಅನಿವಾರ್ಯವಾಗಿ ವಾಹನ ಚಾಲಕರು ಬಲಗಡೆಯಿಂದ ತೆರಳುತ್ತಿದ್ದು, ಇದು ನಿಯಮಬಾಹಿರವಾಗಿದ್ದು, ಅಪಘಾತವಾಗುವ ಸಾಧ್ಯತೆಯೂ ಅಧಿಕ. ರಾತ್ರಿ ಎದುರಿಗೆ ಬರುವ ವಾಹನಗಳ ಹೆಡ್‌ಲೈಟ್ ಬೆಳಕಲ್ಲಿ ರಸ್ತೆಯ ತಗ್ಗುಗಳ ಕಾಣದೆ ವಾಹನ ಸವಾರರು ತಗ್ಗಿನೊಳಗೆ ವಾಹನ ಚಲಾಯಿಸಿ ಆಘಾತ ಅನುಭವಿಸುತ್ತಿದ್ದಾರೆ. ಹೀಗಾಗಿ ವಾಹನ ಸವಾರರು ಹಿಡಿಶಾಪ ಹಾಕಿ ಸಾಗುತ್ತಿದ್ದಾರೆ.

    ಇತ್ತೀಚೆಗೆ ಹಾಳಾದ ರಸ್ತೆಯಲ್ಲಿ ಗರಸು ತುಂಬಲಾಗಿತ್ತಾದರೂ, ಇದು ತೇಪೆ ಹಚ್ಚಿದಂತಾಗಿ ಒಂದು ವಾರದಲ್ಲೇ ಗರಸು ನೀರಿನಲ್ಲಿ ಕೊಚ್ಚಿಹೋಗಿದೆ. ತಕ್ಷಣವೇ ಸಂಬಂಧಿತ ಅಧಿಕಾರಿಗಳು ಗಮನಹರಿಸಿ, ಈ ರಸ್ತೆ ಯಾರನ್ನಾದರೂ ಬಲಿ ತೆಗೆದುಕೊಳ್ಳುವ ಮೊದಲೇ ಸರಿಪಡಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts