More

    ಭಕ್ತರಿಲ್ಲದೆ ಭಣಗುಡುತ್ತಿದೆ ಮಹದೇಶ್ವರ ಬೆಟ್ಟ

    ಹನೂರು: ತಾಲೂಕಿನ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದೇಗುಲದ ಬಾಗಿಲು ಬಂದ್ ಆಗಿದ್ದು, ಭಕ್ತರಿಲ್ಲದೆ ಮಾದಪ್ಪನ ಸನ್ನಿಧಿ ಭಣಗುಡುತ್ತಿದೆ.
    ಬೆಟ್ಟಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಆದರೆ ಕರೊನಾ ಹಿನ್ನೆಲೆ ಸಾರ್ವಜನಿಕರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಇದರಿಂದ ದೇಗುಲದ ಆವರಣ ಬಿಕೋ ಎನ್ನುತ್ತಿದೆ. ಆದರೆ ದೇಗುಲದಲ್ಲಿ ಮಾದಪ್ಪನಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಪುನಸ್ಕಾರ ನಡೆಯುತ್ತಿದೆ.

    ಇದೇ ಮೊದಲ ಬಾರಿಗೆ ಬಾಗಿಲು: ಗ್ರಹಣ ಸೇರಿದಂತೆ ಇತರ ಸಂದರ್ಭಗಳಲ್ಲಿ ರಾಜ್ಯದ ಎಲ್ಲ ದೇಗುಲಗಳು ಬಂದ್ ಆಗುತ್ತವೆ. ಆದರೆ ಮಲೆ ಮಹದೇಶ್ವರ ಬೆಟ್ಟದ ದೇಗುಲವು ಎಂದೂ ಬಂದ್ ಆಗಿರಲಿಲ್ಲ. ಇದೀಗ ಕರೊನಾ ಭೀತಿ ಹಿನ್ನೆಲೆ ಇದೇ ಮೊದಲ ಬಾರಿಗೆ ದೇಗುಲಕ್ಕೆ ಬಾಗಿಲು ಹಾಕಲಾಗಿದೆ. ಯುಗಾದಿ ಜಾತ್ರೆಯೂ ರದ್ದು: ಮಾ.21ರಿಂದ 25ರವರೆಗೆ ನಡೆಯಬೇಕಿದ್ದ ಯುಗಾದಿ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿನ ಭಕ್ತರು ತಂಗುವ ಕೊಠಡಿಗಳನ್ನು ಬಾಡಿಗೆಗೆ ನೀಡುವುದನ್ನು ನಿಷೇಧಿಸಲಾಗಿದೆ.

    ಗೇಟುಗಳು ಬಂದ್: ಭಕ್ತರು ದೇಗುಲಕ್ಕೆ ತೆರಳದಂತೆ ಈಗಾಗಲೇ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಮಾಧ್ಯಮಗಳ ಮೂಲಕ ಮಾಹಿತಿ ತಿಳಿಸಿದ್ದಾರೆ. ಹೀಗಿದ್ದರೂ ಕೆಲವರು ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ದೇಗುಲಕ್ಕೆ ಆಗಮಿಸದಂತೆ ಮಾಹಿತಿ ನೀಡಿ ಅವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ.

    ಊರಿಗೆ ಮರಳಲು ಪರದಾಟ: ಶನಿವಾರದಿಂದ ಬಸ್ ಸಂಚಾರ ಸ್ಥಗಿತಗೊಳಿಸಿದ್ದು, ದೇಗುಲಕ್ಕೆ ಬಂದಿದ್ದ ಭಕ್ತರು ತಮ್ಮ ಊರುಗಳಿಗೆ ತೆರಳಲು ಪರದಾಡಿದರು. ಕೆಲವರು ಗೂಡ್ಸ್ ವಾಹನದ ಮೂಲಕ ತೆರಳಿದರು.

    ಕರೊನಾ ಭೀತಿ ಹಿನ್ನೆಲೆ ಜಿಲ್ಲಾಧಿಕಾರಿ ಆದೇಶದಂತೆ ಯುಗಾದಿ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಭಕ್ತರು ಯಾವುದೇ ಕಾರಣಕ್ಕೂ ಬೆಟ್ಟಕ್ಕೆ ಆಗಮಿಸಬೇಡಿ. ಈ ದೆಸೆಯಲ್ಲಿ ಮ.ಬೆಟ್ಟ ಸೇರಿದಂತೆ ವಿವಿಧೆಡೆಯಲ್ಲಿ ಅರಿವು ಮೂಡಿಸಲಾಗುತ್ತಿದೆ. ಜತೆಗೆ ದಾಸೋಹದ ವ್ಯವಸ್ಥೆಯನ್ನೂ ನಿಲ್ಲಿಸಲಾಗಿದೆ. ಭಕ್ತರು ಇದಕ್ಕೆ ಸಹರಿಸಬೇಕಾಗಿ ಮನವಿ.
    ಜಯವಿಭವಸ್ವಾಮಿ, ಕಾರ್ಯದರ್ಶಿ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

    ಯುಗಾದಿ ಜಾತ್ರಾ ಹಿನ್ನೆಲೆ ಪ್ರತಿ ವರ್ಷ ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಕರೊನಾ ವೈರಸ್ ಹಿನ್ನೆಲೆ ಬಸ್ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಸರ್ಕಾರದ ಮುಂದಿನ ಆದೇಶದವರೆಗೆ ತಮಿಳುನಾಡಿಗೂ ಬಸ್ ಸಂಚಾರವಿರುವುದಿಲ್ಲ.
    ಸುಬ್ರಹ್ಮಣ್ಯ, ವ್ಯವಸ್ಥಾಪಕ, ಕೊಳ್ಳೇಗಾಲ ಡಿಪೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts