More

    ಬೆಟ್ಟದ ಮಳೆ ನೀರು ತಡೆದ ಟೀಂ; ಐದು ಹೊಂಡಗಳ ನಿರ್ಮಿಸಿದ ಸಮಾನ ಮನಸ್ಕರ ತಂಡ

    ವೀರಾಪುರ ಕೃಷ್ಣ ಗಂಗಾವತಿ

    ಸರ್ಕಾರದ ಅನುದಾನ ಪಡೆಯದೆ ನಗರದ ಸಮಾನ ಮನಸ್ಕರ ತಂಡ (ಎಸ್‌ಎಂಟಿ)ಅರಣ್ಯ ಪ್ರದೇಶದಲ್ಲಿ ಐದು ಹೊಂಡಗಳನ್ನು ನಿರ್ಮಿಸಿದ್ದು, ಚರಂಡಿ ಪಾಲಾಗುತ್ತಿದ್ದ ಮಳೆ ನೀರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

    ನಗರದ ಸರ್ವೇ ನಂ. 207/1ರಲ್ಲಿ 600 ಎಕರೆ ಅರಣ್ಯ ಭೂಮಿಯಿದ್ದು, ಟ್ರೀ ಪಾರ್ಕ್‌ಗಾಗಿ 300 ಎಕರೆ ಅರಣ್ಯ ಇಲಾಖೆಗೆ ನೀಡಲಾಗಿದೆ. ಅರಣ್ಯ ಭೂಮಿ ಬೆಟ್ಟಕ್ಕೆ ಹೊಂದಿಕೊಂಡಿದ್ದು, ಮಳೆಗಾಲದಲ್ಲಿ ಅಪಾರ ಪ್ರಮಾಣ ನೀರು ಹಾಗೂ ಮರಳು ಮಿಶ್ರಿತ ಮಣ್ಣು ನಗರದ ಚರಂಡಿಗಳ ಪಾಲಾಗುತ್ತಿತ್ತು. ಇದನ್ನು ತಡೆಯಲು ದಂತ ವೈದ್ಯ ಶಿವಕುಮಾರ ಮಾಲಿಪಾಟೀಲ್ ನೇತೃತ್ವದ ಸಮಾನ ಮನಸ್ಕರ ತಂಡ ಸ್ವಂತ ಖರ್ಚಿನಲ್ಲಿ 5 ಹೊಂಡಗಳನ್ನು ನಿರ್ಮಿಸಿದ್ದು, ನೀರು ಸಂಗ್ರಹವಾಗಿದೆ. ಇದರಿಂದ ಜಾನುವಾರು ಮತ್ತು ಪಕ್ಷಿಗಳ ಜಲದಾಹ ನೀಗಿದಂತಾಗಿದೆ. ಅಲ್ಲದೆ ಗಿಡ-ಮರಗಳಿಗೂ ಅನುಕೂಲವಾಗಿದೆ. ನಗರಸಭೆಯಿಂದ 12 ವರ್ಷಗಳಲ್ಲಿ ಮಳೆ ನೀರು ನಿರ್ವಹಣೆಗೆ 10 ಕೋಟಿ ರೂ.ವೆಚ್ಚ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, ತಂಡವು 3.30ಲಕ್ಷ ರೂ. ವೆಚ್ಚದಲ್ಲಿ ಶೇ.60 ನೀರು ವ್ಯರ್ಥವಾಗದಂತೆ ತಡೆದಿದೆ ಹೊಂಡ ವ್ಯಾಪ್ತಿಯಲ್ಲಿ ಬಯಲು ಬಹಿರ್ದೆಸೆ ನಿಯಂತ್ರಣಕ್ಕೆ ಕಾವಲುಗಾರನನ್ನು ನೇಮಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಕೃತಕ ಜಲಪಾತ ಹಾಗೂ ಸೂಕ್ತ ವಾಕಿಂಗ್ ಟ್ರ್ಯಾಕ್, ವಿಶ್ರಾಂತಿ ಆಸನ, ಯೋಗ ಬಂಡೆ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ.

    ಅಂತರ್ಜಲ ಅಭಿಯಾನದ ಆರಂಭ: ದುರುಗಮ್ಮನ ಹಳ್ಳ ಹೂಳೆತ್ತುವುದರಿಂದ ಶುರುವಾದ ತಂಡದ ಅಂತರ್ಜಲ ಅಭಿಯಾನ, ಸೂರ್ಯನಾಯಕನ ತಾಂಡದಲ್ಲೂ ಕೆರೆ ನಿರ್ಮಿಸಿದೆ. ಈಗ ಹೊಂಡಗಳನ್ನು ನಿರ್ಮಾಣ ಮಾಡಿದೆ. ಸಂಗಾಪುರದ ಲಕ್ಷ್ಮಿ ನಾರಾಯಣ ಕೆರೆ ಅಭಿವೃದ್ಧಿ ಮಾಡುವ ಉದ್ದೇಶವಿದ್ದು, ಸಣ್ಣ ನೀರಾವರಿ ಇಲಾಖೆ ಅನುಮತಿಗೆ ಕಾಯುತ್ತಿದೆ. ತಂಡದಲ್ಲಿ ರಾಮನಾಥ ಭಂಡಾರಕರ್, ಪ್ರಹ್ಲಾದ್ ಕುಲ್ಕರ್ಣಿ, ಡಾ.ಶರಣಬಸಪ್ಪ ಕೋಲ್ಕಾರ್, ಮೈಲಾರಪ್ಪ ಬೂದಿಹಾಳ್, ರಮೇಶ ಗಬ್ಬೂರ್, ಸಿ.ಸೂರ್ಯನಾರಾಯಣ, ಹರನಾಯಕ, ಸಂಗೀತಾ ನೂತನಕುಮಾರ, ಸಿ.ಮಹಾಲಕ್ಷ್ಮಿ,ಆನಂದ ಕೆಲೋಜಿ ಮತ್ತು ಇತರರು ಸರದಿಯಂತೆ ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದು, ಪರಿಸರ ರಕ್ಷಣಾ ವೇದಿಕೆ ಮತ್ತು ಚಾರಣ ಬಳಗ ಸದಸ್ಯರು ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ, ಅರೆಸ್ಸೆಸ್ ಮುಖಂಡ ದುರ್ಗದಾಸ ಭಂಡಾರಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

    ಮೂರು ಜೆಸಿಬಿ-ಎರಡು ಟ್ರಾೃಕ್ಟರ್ ಬಳಕೆ
    ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದೊಂದಿಗೆ ಮೂರು ಜೆಸಿಬಿ-ಎರಡು ಟ್ರಾೃಕ್ಟರ್ ಬಳಸಿದ್ದು, 11 ದಿನಗಳಲ್ಲಿ ಹೊಂಡಗಳನ್ನು ನಿರ್ಮಿಸಲಾಗಿದೆ. ತೆಗೆದ ಮಣ್ಣನ್ನು ವಾಕಿಂಗ್ ಟ್ರ್ಯಾಕ್‌ಗೆ ಬಳಕೆ ಮಾಡಲಾಗಿದೆ. ಸಮಾನ ಮನಸ್ಕರ ತಂಡವೂ ನಿತ್ಯ ಮೂರು ಗಂಟೆ ಶ್ರಮದಾನ ಮಾಡಿದೆ. ತಂಡದೊಂದಿಗೆ ಕೆಲ ಉದ್ಯಮಿಗಳು ಕೈ ಜೋಡಿಸಿದ್ದಾರೆ. ಹೊಂಡದಲ್ಲಿ 10 ರಿಂದ 15 ಅಡಿ ಆಳದಲ್ಲಿ ನೀರು ನಿಂತಿದ್ದರಿಂದ ಮರಗಳಿಗೆ ಅನುಕೂಲವಾಗಿದ್ದು, ಜಾನುವಾರುಗಳಿಗೆ ಕುಡಿವ ನೀರು ಸಿಕ್ಕಿದೆ.

    1/4 ಟಿಎಂಸಿ ನೀರು ಸಂಗ್ರಹ ನಿರೀಕ್ಷೆ
    ಈ ಅರಣ್ಯ ಪ್ರದೇಶ ಸ್ವಾತಂತ್ರ್ಯ ಹೋರಾಟಗಾರರ ಅಡಗು ತಾಣವಾಗಿತ್ತು. 200 ವರ್ಷಗಳ ಹಿಂದಿನ ಹುಣಿಸೆಮರವಿದೆ. ಕರಡಿ, ಚಿರತೆ, ಮೊಲ, ನವಿಲು ಮತ್ತು ಕಾಡು ಬೆಕ್ಕು ಆಶ್ರಯ ಪಡೆದಿದ್ದು, ಆಲ, ಬಸರಿ, ಅರಳಿ ಮತ್ತು ಹೆಬ್ಬೇವು ಹೆಚ್ಚಿನ ಪ್ರಮಾಣದಲ್ಲಿವೆ. ಬೆಟ್ಟದ ನೀರಿನಿಂದಲೇ ಪ್ರತಿ ವರ್ಷ 20 ಟ್ರ್ಯಾಕ್ಟರ್ ಮರಳು ಸಂಗ್ರಹವಾಗುತ್ತಿದ್ದು, ನಗರದ ಚರಂಡಿಗಳು ಮುಚ್ಚಿಹೋಗುತ್ತಿದ್ದವು. ಹೊಂಡ ಗಳ ನಿರ್ಮಾಣದಿಂದ ತಡೆದಂತಾಗಿದೆ. 1/4 ಟಿಎಂಸಿ ನೀರು ಸಂಗ್ರಹ ನಿರೀಕ್ಷೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts