More

    ಮಾಗಡಿಯ ಮಲ್ಲಿಗುಂಟೆಯಲ್ಲಿ 50 ಮಂದಿಯ ಅವಿಭಕ್ತ ಕುಟುಂಬ

    ಕುದೂರು: ಮಕ್ಕಳಿರಲವ್ವ ಮನೆ ತುಂಬ ಎನ್ನುವಂತೆ ಮಾಗಡಿ ತಾಲೂಕು ಕುದೂರು ಹೋಬಳಿ ಮಲ್ಲಿಗುಂಟೆ ಗ್ರಾಮದಲ್ಲಿ 50 ವರ್ಷಗಳಿಂದ ತುಂಬು ಕುಟುಂಬವೊಂದು ಇಂದಿಗೂ ಒಂದೇ ಮನೆಯಲ್ಲಿ ವಾಸವಿದ್ದು, ಕುಟುಂಬದ 50 ಸದಸ್ಯರು ಒಟ್ಟಿಗೆ ಬಾಳುತ್ತಿದ್ದಾರೆ.

    ಮಲ್ಲಿಗುಂಟೆ ಗ್ರಾಮದ ಲೇಟ್ ಶಂಕರಮ್ಮ ಮತ್ತು ಲೇಟ್ ಹನುಮಂತಯ್ಯ ದಂಪತಿಗೆ 6 ಹೆಣ್ಣು, 6 ಗಂಡು ಮಕ್ಕಳಿದ್ದು, ಗಂಡು ಮಕ್ಕಳೆಲ್ಲ ಒಟ್ಟಿಗೆ ಒಂದೇ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. 6 ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು ಹಬ್ಬ ಹರಿದಿನಗಳಲ್ಲಿ ಒಟ್ಟಿಗೆ ಸೇರುತ್ತಾರೆ.

    ಕುಟುಂಬ ಸದಸ್ಯರೆಲ್ಲರೂ ವಿದ್ಯಾವಂತ ರಾಗಿದ್ದು, ಕೃಷಿ ಚಟುವಟಿಕೆಯಲ್ಲಿ ಎಲ್ಲರೂ ತೊಡಗಿಸಿ ಕೊಂಡಿದ್ದಾರೆ. ಇಂದಿಗೂ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ಮೊಮ್ಮಕ್ಕಳು, ಸೊಸೆಯಂದಿರೆಲ್ಲ ಸೇರಿ, ದೊಡ್ಡಪ್ಪ ಗಂಗಣ್ಣ ಎಂಬುವವರ ಮಾರ್ಗದರ್ಶನದಲ್ಲಿ ನಾಟಕ, ಸಂಗೀತ ಅಭ್ಯಾಸ ಮಾಡುತ್ತಾರೆ. ಅಷ್ಟೇ ಅಲ್ಲ ಈ ಮನೆಯ ಹೆಣ್ಣುಮಕ್ಕಳು, ಸೊಸೆಯಂದಿರು ಸೇರಿ ಕುದೂರು ಮತ್ತು ಬೆಂಗಳೂರಿನಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

    ಚಾಲನಾ ಪರವಾನಗಿ ಪಡೆದ ಜಿಲ್ಲೆಯ ಪ್ರಥಮ ಮಹಿಳೆ: ಈ ಮನೆಯ ಸೊಸೆ ಭಾಗ್ಯ ಎಂಬುವವರು ಟ್ರ್ಯಾಕ್ಟರ್ ಓಡಿಸುವುದನ್ನು ಕಲಿತು ಚಾಲನಾ ಪರವಾನಗಿ ಪಡೆದ ಜಿಲ್ಲೆಯ ಪ್ರಥಮ ಮಹಿಳೆಯಾಗಿದ್ದಾರೆ. ಎರಡು ವರ್ಷದ ಹಿಂದೆ ಪರವಾನಗಿ ಪಡೆದಿದ್ದು, ಅಂದು ಡಿಎಲ್ ಪರೀಕ್ಷೆಗೆ ಬಂದಿದ್ದ ರಾಮನಗರ ಟ್ರಾಫಿಕ್ ಇನ್‌ಸ್ಪೆಕ್ಟರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲೆಯ ಮೊದಲ ಮಹಿಳಾ ಡಿಎಲ್ ನಿಮ್ಮದೇ ಎಂದು ಪೋಟೋ ತೆಗೆಸಿಕೊಂಡಿದ್ದರು.
    ಒಂದು ಹೊತ್ತಿಗೆ 35 ಮುದ್ದೆ ತಯಾರಿ: ಮನೆಯ ಬಳಿಯ ಜಮೀನಿನ ಬಾವಿಯಲ್ಲಿ ಕುಟುಂಬದ ಯಜಮಾನರು, ಗಂಡುಮಕ್ಕಳು, ಹೆಣ್ಣುಮಕ್ಕಳು, ಸೊಸೆಯಂದಿರು ಒಟ್ಟಿಗೆ ಈಜಾಡಿ ಸಂತೋಷಪಡುತ್ತಾರೆ. ಪ್ರತಿದಿನ ಒಂದು ಹೊತ್ತಿಗೆ 35 ಮುದ್ದೆ ತಯಾರಿಸುವುದು ಈ ಮನೆಯ ಹೆಂಗಸರ ಕೆಲಸವಾಗಿದೆ.

    ಬೆಕ್ಕು, ನಾಯಿ, ಹಸು, ಕುರಿ, ಕೋಳಿ ಸಾಕಿದ್ದಾರೆ. ಹಬ್ಬ, ಹರಿದಿನ, ಬೇಸಿಗೆ ರಜೆ ಬಂದರೆ ಮನೆಯ ತುಂಬೆಲ್ಲಾ ಸಂಬಂಧಿಕರ ಸದ್ದು ಕೇಳಿಸುತ್ತದೆ. ಇಂತಹ ಸಂತೋಷ ತುಂಬಿರುವ ತುಂಬು ಕುಟುಂಬವನ್ನು ಮಲ್ಲಿಗುಂಟೆ ಗ್ರಾಮದಲ್ಲಿ ನೋಡುವುದೇ ಒಂದು ಸಂತಸ ಎನ್ನುತ್ತಾರೆ ಕುದೂರು ಹೋಬಳಿಯ ಗ್ರಾಮಸ್ಥರು.

    ಕುದೂರಿನ ಅಪ್ಪನ ಮನೆಗೆ ಬಂದಾಗಲೆಲ್ಲ ಮಲ್ಲಿಗುಂಟೆ ಗ್ರಾಮದ ಶಂಕರಮ್ಮಜ್ಜಿ ಮನೆಯವರೊಂದಿಗೆ ಸೇರಿ ಕಾಲ ಕಳೆಯುತ್ತೇನೆ. ನಗರ ಪ್ರದೇಶದಲ್ಲಿನ ಜಂಜಾಟಕ್ಕಿಂತ ಹಳ್ಳಿ ಬದುಕು ಮನಸ್ಸಿಗೆ ನೆಮ್ಮದಿ ಕೊಡುತ್ತದೆ.
    ಮೀನಾಕ್ಷಿ ಬೆಂಗಳೂರು (ಮಲ್ಲಿಗುಂಟೆ ಕುಟುಂಬದ ಒಡನಾಡಿಗಳು)

    ನಮ್ಮ ಮನೆಯೇ ನಂದಗೋಕುಲ. ಮನೆಯಲ್ಲಿ ಕಷ್ಟ ಸುಖ ಅನುಭವಿಸಿ 50 ವರ್ಷಗಳಿಂದ ಸಂತೋಷದಿಂದ ತುಂಬು ಕುಟುಂಬದ ಜೀವನ ನಡೆಸುತ್ತಿದ್ದೇವೆ.
    ಪಾಪಣ್ಣ ಮಲ್ಲಿಗುಂಟೆ ಕುಟುಂಬದ ಯಜಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts