More

    ಗ್ರಾಪಂ ಮಾಜಿ ಸದಸ್ಯನ ಕಾಟ: ಆರೋಗ್ಯ ಸಹಾಯಕಿಯಿಂದ ಕುದೂರು ಠಾಣೆಗೆ ದೂರು

    ಕುದೂರು: ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಕಿರುಕುಳ ನೀಡುತ್ತಿದ್ದು, ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮುನಿರತ್ನ ದೂರಿದ್ದಾರೆ. ಗ್ರಾಪಂ ಮಾಜಿ ಸದಸ್ಯ ಬಲರಾಮಪ್ಪ ವಿರುದ್ಧದ ದೂರಿನ ಸಂಬಂಧ ಮಂಗಳವಾರ ಕುದೂರು ಠಾಣೆಗೆ ಬಂದಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಮುನಿರತ್ನ, 6 ವರ್ಷಗಳಿಂದ ತಿಪ್ಪಸಂದ್ರ ಹೋಬಳಿ ಸಂಕೀಘಟ್ಟ ಆರೋಗ್ಯ ಕೇಂದ್ರದ ಹುಳ್ಳೇನಹಳ್ಳಿ ಉಪವಿಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. 12 ಗ್ರಾಮಗಳ ಉಸ್ತುವಾರಿ ನನ್ನ ಮೇಲಿದೆ. ಒಂದು ವರ್ಷದಿಂದ ಕಿರುಕುಳ ನೀಡುತ್ತಿದ್ದು, ಪ್ರತಿದಿನ ದಾರಿಯಲ್ಲಿ ಅಡ್ಡ ಹಾಕುವುದು, ಹುಳ್ಳೇನಹಳ್ಳಿ ಆರೋಗ್ಯ ಕೇಂದ್ರಕ್ಕೆ ಬರುವ ಕೋವಿಡ್ ರೋಗಿಗಳನ್ನು ನೋಡಲು ಹೋಗಬೇಡ ಎಂದು ಒತ್ತಡ ಹಾಕುವುದು, ಕರ್ತವ್ಯ ನಿರ್ವಹಣೆ ಬಗ್ಗೆ ವರದಿ ನೀಡಲು ಮನೆಗೆ ಬಾ ಎಂದು ಕರೆಯುತ್ತಾರೆ ಎಂದು ದೂರಿದರು.

    ಈ ವಿಷಯವನ್ನು ತಾಲೂಕು ಆರೋಗ್ಯಾಧಿಕಾರಿ ಸತೀಶ್ ಗಮನಕ್ಕೂ ತಂದಿದ್ದೇನೆ. ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ ಎಂದು ಜಾತಿ ನಿಂದನೆ ಮಾಡಿದ್ದಾರೆ. ನನ್ನ ಚಲನವಲನಗಳನ್ನು ಗಮನಿಸಲೆಂದೇ ಗ್ರಾಮದ ಅಂಜನ್ ಕುಮಾರ್ ಎಂಬಾತನನ್ನು ಬಿಟ್ಟಿದ್ದಾರೆ. ಆತ ಕೂಡ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದು, ಹಲವು ಬಾರಿ ಕರೆ ಮಾಡಿ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುತ್ತಾನೆ ಎಂದರು.

    ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ ಪ್ರಸಾದ್ ಗಮನಕ್ಕೂ ಈ ವಿಚಾರ ತಂದಿದ್ದು, ಅವರ ಮಾರ್ಗದರ್ಶನದಂತೆ ಹುಳ್ಳೇನಹಳ್ಳಿ ಆರೋಗ್ಯಾಧಿಕಾರಿಗಳ ಜತೆ ಇಂದು ಕುದೂರು ಠಾಣೆಯಲ್ಲಿ ಸೋಮವಾರ ಸಂಜೆ ದೂರು ದಾಖಲಿಸಿದ್ದೇನೆ ಎಂದರು.

    ಹುಳ್ಳೇನಹಳ್ಳಿ ವೈದ್ಯಾಧಿಕಾರಿ ಬಸವರಾಜು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸಿಬ್ಬಂದಿಗೆ ಹಲವು ಜವಾಬ್ದಾರಿಗಳಿರುತ್ತವೆ. ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಅಲ್ಲದೇ ಆರೋಗ್ಯ ಸಹಾಯಕಿ ಮುನಿರತ್ನ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಕಂಡುಬಂದಿಲ್ಲ. ಸುಖಾ ಸುಮ್ಮನೆ ಗ್ರಾಮದ ಮಾಜಿ ಸದಸ್ಯ ಎಂದುಕೊಂಡು ಕಿರುಕುಳ ನೀಡುತ್ತಿದ್ದಾರೆ. ಇವರ ಕಾಟಕ್ಕೆ ಬೇಸತ್ತು ದೂರು ನೀಡಿದ್ದೇವೆ. ಶೀಘ್ರವೇ ಉನ್ನತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಿಬ್ಬಂದಿ ಮೇಲೆ ದೌರ್ಜನ್ಯ ತಡೆಗಟ್ಟಬೇಕು ಎಂದರು.

    ಜಿಲ್ಲಾ ಆರೋಗ್ಯ ಸಹಾಯಕ ಸಂಘದ ಅಧ್ಯಕ್ಷ ಭೈರವೇಗೌಡ, ಕಾರ್ಯದರ್ಶಿ ಬಸವರಾಜು, ತಾಲೂಕು ಆರೋಗ್ಯ ಸಹಾಯಕ ಸಂಘದ ಉಪಾಧ್ಯಕ್ಷ ಲೋಕೇಶ್, ಸಹಾಯಕ ಶಿವಸ್ವಾಮಿ, ಕಾರ್ಯದರ್ಶಿ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts