More

    ಮಡಿ ರಸ್ತೆ ಅಭಿವೃದ್ಧಿಗೆ ಗಡಿ ಸಮಸ್ಯೆ ಅಡ್ಡಿ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಗಂಗೊಳ್ಳಿ ಲೈಟ್‌ಹೌಸ್ ಬಳಿಯ ಮಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ಸಂಚರಿಸಲು ಮೀನುಗಾರರು ಮತ್ತು ಸಾರ್ವಜನಿಕರು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಪಂಚಾಯಿತಿಗಳ ಗಡಿ ಸಮಸ್ಯೆಯಿಂದಾಗಿ ಈ ರಸ್ತೆ ಅಭಿವೃದ್ಧಿಯಾಗುತ್ತಿಲ್ಲ.

    ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಮಡಿ ಪ್ರದೇಶದ ರಸ್ತೆ ಅಭಿವೃದ್ಧಿಯಾಗದೆ ದಶಕಗಳೇ ಕಳೆದಿವೆ. ಮಳೆಗಾಲದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಯುವಾಗ ಮಡಿಗೆ ನಿತ್ಯ ನೂರಾರು ಮೀನುಗಾರರು ಬರುತ್ತಾರೆ.ನೂರಾರು ವಾಹನಗಳು ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿರುತ್ತವೆ. ಆದರೆ ಈ ಪ್ರದೇಶದ ರಸ್ತೆ ಹಾಗೂ ಗಂಗೊಳ್ಳಿಯ ಬಾವಿಕಟ್ಟೆಯಿಂದ ಮಡಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮತ್ತು ಮಡಿ ಪ್ರದೇಶದ ರಸ್ತೆಯ ಅವ್ಯವಸ್ಥೆ ಮಾತ್ರ ಹೇಳತೀರದಾಗಿದೆ.

    ಬಾವಿಕಟ್ಟೆಯಿಂದ ಮಡಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿ ಬೆಳೆದಿದ್ದು, ವಾಹನಗಳು ಸಂಚರಿಸಲು ಕಷ್ಟಕರವಾಗುತ್ತಿದೆ. ಇನ್ನೊಂದೆಡೆ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮಡಿ ರಸ್ತೆಯಲ್ಲಿ ನೀರು ತುಂಬಿಕೊಂಡು ಹೊಂಡಗುಂಡಿ ನಿರ್ಮಾಣವಾಗಿದೆ. ಕೆಸರು ರಾಡಿಯಿಂದ ಕೂಡಿದ ರಸ್ತೆಯಲ್ಲಿ ವಾಹನಗಳು ಸಾಗುವುದು ದುಸ್ತರವಾಗಿದೆ. ಹಗಲಿರುಳು ಮಡಿಯಲ್ಲಿ ಮೀನುಗಾರಿಕಾ ವಹಿವಾಟು ನಡೆಯುತ್ತಿರುತ್ತದೆ. ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ದೋಣಿಗಳು ಮೀನು ಹೇರಿಕೊಂಡು ತೀರಕ್ಕೆ ಬರುತ್ತವೆ. ಆದರೆ ಸಂಪರ್ಕ ವ್ಯವಸ್ಥೆ ಸರಿ ಇಲ್ಲದಿರುವುದರಿಂದ ಕ್ಲಪ್ತ ಸಮಯದಲ್ಲಿ ಮೀನನ್ನು ಮಾರುಕಟ್ಟೆಗೆ ಸಾಗಿಸಲು ಕಷ್ಟವಾಗುತ್ತಿದೆ ಎಂದು ಮೀನುಗಾರರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಡಿ ಪ್ರದೇಶದ ದಕ್ಷಿಣ ಭಾಗ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದರೆ ಉತ್ತರ ಭಾಗ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಹೀಗಾಗಿ ಈ ಭಾಗದ ಅಭಿವೃದ್ಧಿ ಮಾಡುವವರ‌್ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

    ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಆರಂಭಗೊಂಡಿದೆ. ಆದರೆ ಮಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಮೀನುಗಾರರಿಗೆ ತುಂಬಾ ತೊಂದರೆ ಆಗುತ್ತಿದೆ. ಹೀಗಾಗಿ ಆದಷ್ಟು ಶೀಘ್ರ ರಸ್ತೆ ದುರಸ್ತಿಗೊಳಿಸಿ ಅಭಿವೃದ್ಧಿಪಡಿಸಬೇಕು.
    -ಸದಾಶಿವ ಖಾರ್ವಿ ಕಂಚುಗೋಡು, ಅಧ್ಯಕ್ಷರು, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಗಂಗೊಳ್ಳಿ

    ಬಾವಿಕಟ್ಟೆಯಿಂದ ಮಡಿವರೆಗಿನ ರಸ್ತೆಯ ಇಕ್ಕೆಲಗಳಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಮಡಿ ರಸ್ತೆ ಅಭಿವೃದ್ಧಿ ಬಗ್ಗೆ ಶಾಸಕರ ಗಮನಕ್ಕೆ ತಂದು ಅನುದಾನ ಮೀಸಲಿಡಲು ಮನವಿ ಮಾಡಲಾಗುವುದು.
    – ಶ್ರೀನಿವಾಸ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts