More

    ಕ್ವಾರಂಟೈನ್ ನಿಯಮ ಪಾಲಿಸದವರಿಗೆ ಮಧ್ಯಪ್ರದೇಶ ಪೊಲೀಸರೊಂದು ಪಾಠ ಕಲಿಸಿದ್ರು: ಅದು ದೇಶಕ್ಕೇ ಮಾದರಿಯಾಗದಿದ್ದರೆ ಸಾಕು- ಅನ್ನಬಹುದೇನೋ ನಿಯಮ ಉಲ್ಲಂಘಕರು!

    ಭೋಪಾಲ: ಕರೊನಾ ಲಾಕ್​ಡೌನ್ ನಿಯಮ, ಕ್ವಾರಂಟೈನ್​ ನಿಯಮಗಳನ್ನು ಪಾಲಿಸದ ಜನರ ನಡವಳಿಕೆ ಪೊಲೀಸರನ್ನು ಮತ್ತು ಆರೋಗ್ಯ ಸೇವಾ ಸಿಬ್ಬಂದಿಯನ್ನು ಎಷ್ಟರ ಮಟ್ಟಿಗೆ ಹತಾಶೆಗೊಳಪಡಿಸಿದೆ ಎಂದರೆ ಅನಿವಾರ್ಯವಾಗಿ ಕಠಿಣ ಕ್ರಮಕ್ಕೆ ಮುಂದಾಗುವಂತೆ ಮಾಡಿದೆ! ಮಧ್ಯಪ್ರದೇಶದ ಛಾತ್ರಪುರ ಜಿಲ್ಲೆಯ ರಾಜ್​ನಗರದ ಜನ ಮನೆಯೊಳಗೇ ಬಂಧಿಯಾಗುವ ವಿಲಕ್ಷಣ ಶಿಕ್ಷೆಗೆ ಈಡಾಗಿದ್ದಾರೆ.

    ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಜನ ಬೀದಿಗಿಳಿಯುತ್ತಿರುವುದನ್ನು ಕಂಡ ಪೊಲೀಸರು ಮತ್ತು ಆರೋಗ್ಯ ಸೇವಾ ಸಿಬ್ಬಂದಿ ಪರಿಪರಿಯಾಗಿ ಅವರಿಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಆದರೆ ಇದಾವುದನ್ನೂ ಲೆಕ್ಕಿಸದ ಜನರನ್ನು ಗುರುತಿಸಿ, ಅವರ ಮನೆಯನ್ನು ಗುರುತಿಸಿದ ಪೊಲೀಸರು ಅವರನ್ನೆಲ್ಲ ಅವರದೇ ಮನೆಯೊಳಗೆ ಕೂಡಿ ಹಾಕಿ ಬೀಗ ಜಡಿದ್ರು. ಬುಧವಾರ ಈ ರೀತಿ ಪ್ರಯೋಗ ಮಾಡಿದ ಪೊಲೀಸರಿಗೆ ತಕ್ಕಮಟ್ಟಿನ ಯಶಸ್ಸು ಸಿಕ್ಕಿದೆ.

    ಈ ಪಟ್ಟಣದಲ್ಲಿ ಬೀಗ ಹಾಕಿಸಿಕೊಂಡ ಕೆಲವು ಮನೆಯವರು ಇನ್ನೊಮ್ಮೆ ಇಂಥ ತಪ್ಪು ಮಾಡಲ್ಲ. ಕ್ವಾರಂಟೈನ್ ನಿಯಮ ಪಾಲಿಸುವುದಾಗಿ ಎಂದು ಅಲವತ್ತುಕೊಂಡು ಬೇಡಿಕೊಂಡು ಭರವಸೆ ನೀಡಿದ ಬಳಿಕ ಶುಕ್ರವಾರ ರಾತ್ರಿ ಈ ಮನೆಗಳ ಬೀಗವನ್ನು ತೆಗೆಯಲಾಗಿದೆ. ಆದಾಗ್ಯೂ, ಸರಿ ಸುಮಾರು 50 ಮನೆಗಳಿಗೆ ಈ ರೀತಿ ಬೀಗ ಜಡಿದಿದ್ರು ಪೊಲೀಸರು. ಈ ಎಲ್ಲ ಮನೆಗಳ ಬೀಗಗಳನ್ನು 14 ದಿನಗಳ ಬಳಿಕ ತೆಗೆಯಲಾಗುತ್ತದೆ. ಅವರಿಗೆ ಅಗತ್ಯ ವಸ್ತುಗಳನ್ನು ಅಲ್ಲಿಗೇ ಪೂರೈಸಲಾಗುತ್ತದೆ. ಸದ್ಯಕ್ಕೆ ಈ ಪ್ರದೇಶದಲ್ಲಿ ಕರೋನಾ ಸೋಂಕು ಅತಿಯಾಗಿ ಇಲ್ಲ. ಅದನ್ನೇ ನಿರ್ವಹಿಸಿಕೊಂಡು ಹೋಗುವ ಸಲುವಾಗಿ 14 ದಿನ ಕ್ವಾರಂಟೈನ್ ನಿಯಮ ಪಾಲಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ರಾಜ್​ನಗರ ಉಪವಿಭಾಗಾಧಿಕಾರಿ ಸ್ವಪ್ನಿಲ್ ವಾಂಖೆಡೆ ಈ ಕಠಿಣ ನಿಲುವು ಪ್ರದರ್ಶಿಸಿದ ಅಧಿಕಾರಿಯಾಗಿದ್ದು, ಇದು ಮುಂಜಾಗ್ರತಾ ಕ್ರಮವಾಗಿದ್ದು, ನಮ್ಮ ತಂಡದ ಸದಸ್ಯರು ಈ ಮನೆಗಳ ಸದಸ್ಯರ ಸಂಪರ್ಕದಲ್ಲಿದ್ದು ಅವರ ಬೇಕು ಬೇಡಗಳನ್ನು ಗಮನಿಸುತ್ತಾರೆ. ಈ ರೀತಿ ಬಂಧಿಯಾದವರು ಬಹುತೇಕರು ಪ್ರವಾಸೋದ್ಯಮಕ್ಕೆ ಸಂಬಂಧಿಸಿದವರು. ಚಾಲಕರು, ಗೈಡ್​ಗಳು, ಕೆಲವು ವಿದೇಶೀಯರೂ ಇದ್ದಾರೆ. ಈ ನಗರಕ್ಕೆ ಸಮೀಪದಲ್ಲೇ ಕಜರಾಹೋ ಮತ್ತು ಇತರೆ ಪ್ರವಾಸಿ ಸ್ಥಳಗಳಿವೆ. ಹೀಗಾಗಿ ಈ ಮುನ್ನೆಚ್ಚರಿಕೆ ಅವಶ್ಯ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ನೀರು ಕುಡಿಯುವ ಬದಲು ಫಾರ್ಮಾಲಿನ್ ಮಿಶ್ರಿತ ನೀರು ಕುಡಿದ ಜಿಲ್ಲಾ ಆರೋಗ್ಯಾಧಿಕಾರಿ!

    ಬೈ ಒನ್​ ಗೆಟ್​ ಟು ಫ್ರೀ !- ಒಮ್ಮೆ ಕ್ವಾರಂಟೈನ್​ ಮುಗಿಯಿತೆಂದು ಬೀದಿಗಿಳಿದ ವ್ಯಕ್ತಿಗೆ ಉಚಿತವಾಗಿ ಸಿಕ್ಕಿದ್ದೇನು!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts