More

    ಶಿಕ್ಷಣದ ಗುಣಮಟ್ಟ ವೃದ್ಧಿಸಲು ಪ್ರಯತ್ನ

    ಬೀರೂರು: ಶಾಲಾ ಮಕ್ಕಳ ಅನುಕೂಲಕ್ಕಾಗಿ ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಿದ ಯೋಜನೆಗಳ ಪೈಕಿ ಯಾವುದನ್ನು ಕೈಬಿಟ್ಟಿಲ್ಲ. ಬದಲಾಗಿ ಇನ್ನೂ ಹೆಚ್ಚಿನ ಆದ್ಯತೆ ನೀಡಿದ್ದು ಗುಣಮಟ್ಟ ವೃದ್ಧಿಸುವ ಪ್ರಯತ್ನ ಸರ್ಕಾರದ ಧ್ಯೇಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
    ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಕರು ಇಂಗ್ಲಿಷ್ ಮಾಧ್ಯಮಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಿರುವುದು ಗಮನದಲ್ಲಿದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಆರಂಭಿಸಲಾಗಿದೆ. ಇದರಿಂದ ನಮ್ಮ ಶಾಲೆಗಳು ಮತ್ತಷ್ಟು ಸದೃಢಗೊಳ್ಳುವ ನಿರೀಕ್ಷೆಯಿದೆ. ಯಾವ ಕಾರಣಕ್ಕೂ ಕನ್ನಡ ಮಾಧ್ಯಮ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
    ಶಿಕ್ಷಣ ಇಲಾಖೆಗೆ 34 ಸಾವಿರ ಕೋಟಿ ರೂ. ಇದ್ದ ಅನುದಾನವನ್ನು ಈ ಬಜೆಟ್‌ನಲ್ಲಿ 44 ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 12 ಸಾವಿರ ಶಿಕ್ಷಕರನ್ನು ನೂತನವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕಾಗಿಯೇ ಅಭಿವೃದ್ಧಿ ಮಂಡಳಿಯ ಶೇ.30ರಷ್ಟು ಅನುದಾನ ವೆಚ್ಚ ಮಾಡಲಾಗುತ್ತಿದೆ ಎಂದರು.
    2,500 ಕೋಟಿ ರೂ. ವೆಚ್ಚದಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುತ್ತಿದ್ದು ಇಲ್ಲಿಯೂ ದ್ವಿಭಾಷಾ ಸೂತ್ರ ಜಾರಿಯಾಗಲಿದೆ. ನಮ್ಮ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯನ್ನು ಅರಸಿ ಹೋಗುವ ಬದಲು ಸರ್ಕಾರಿ ಶಾಲೆಗಳಲ್ಲಿಯೆ ದಾಖಲಾಗಿ ಶಿಕ್ಷಣ ಪಡೆಯಬಹುದು. ಈ ಎಲ್ಲ ಕ್ರಮಗಳು ಇಲಾಖೆಯ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲ್ದರ್ಜೆಗೇರಿಸುವ ಸಲುವಾಗಿಯೆ ಕೈಗೊಂಡಿದ್ದಾಗಿದೆ ಎಂದು ಹೇಳಿದರು.
    ಶಿಕ್ಷಕರಿಲ್ಲದೆ ಗಣತಿ, ಚುನಾವಣೆಗಳು ಮುಂತಾದವುಗಳನ್ನು ನಡೆಸಲು ಸಾಧ್ಯವಿಲ್ಲ. ಕೆಲವೊಂದು ಪದ್ಧತಿಗಳು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ ಎಂದರು.
    ಹಿಂದಿನ ಸರ್ಕಾರ ಈ ಹಿಂದೆ 8ನೇ ತರಗತಿವರೆಗಿನ ಮಕ್ಕಳಿಗೆ ಮಾತ್ರ ಮೊಟ್ಟೆ ವಿತರಿಸುತ್ತಿತ್ತು. ಈಗ 10ನೇ ತರಗತಿ ಮಕ್ಕಳಿಗೂ ವಿಸ್ತರಿಸಿದ್ದೇವೆ. ವಾರದಲ್ಲಿ ಮೂರು ಬಾರಿ ಪೌಷ್ಟಿಕ ಆಹಾರ ರಾಗಿ ಮಾಲ್ಟ್ ನೀಡಲಾಗುತ್ತಿದೆ ಎಂದು ಹೇಳಿದರು.
    ಶತಮಾನ ಪೂರೈಸಿದ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ಅವುಗಳ ಮಾಹಿತಿಯನ್ನು ಆಯಾ ಕ್ಷೇತ್ರದ ಶಾಸಕರು ತರುವಂತೆ ತಿಳಿಸಲಾಗಿದೆ. ಅದೇ ರೀತಿ ಕಡೂರು ಭಾಗದಲ್ಲಿ ದುಸ್ಥಿತಿಯಲ್ಲಿರುವ ಶಾಲೆಗಳ ಸಮಗ್ರ ಮಾಹಿತಿ ಒದಗಿಸುವಂತೆ ಶಾಸಕ ಕೆ.ಎಸ್.ಆನಂದ್ ಅವರಿಗೆ ಸೂಚಿಸಿದರು.
    ಶಾಸಕ ಕೆ.ಎಸ್.ಆನಂದ್, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಬಿ.ಆರ್.ರವಿಕುಮಾರ್, ಬೀರೂರು ಮತ್ತು ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್, ಚಂದ್ರಮೌಳಿ, ತಾಪಂ ಮಾಜಿ ಅಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಮುಖಂಡರಾದ ಮುರ್ಗಿ ಹರ್ಷ, ವಿನಾಯಕ, ಪ್ರದೀಪ್, ಮನೋಹರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts