More

    ಮದ್ದೂರಲ್ಲಿ ಅಸಲಿಯಾಟ ಶುರು: ಡಿಸಿಟಿಗೆ ಗೇಮ್‌ಪ್ಲಾೃನ್ ಹೇಳಿಕೊಟ್ಟ ಬೀಗರು, ‘ಕೈ’ ಪಾಳಯ ಸೇರಿದ ಉದಯ್

    ಮಂಡ್ಯ: ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ ಸತ್ಯಾಗ್ರಹ ಸೌಧದ ನೆಲದಲ್ಲಿ ವಿಧಾನಸಭಾ ಚುನಾವಣೆ ಕಾವೇರಿದೆ. ಮದ್ದೂರು ಕ್ಷೇತ್ರದಲ್ಲಿ ಪ್ರಮುಖ ಮೂರು ಪಕ್ಷಗಳಲ್ಲಿಯೂ ರಾಜಕೀಯ ಬೆಳವಣಿಗೆ ಮಹತ್ವದ ತಿರುವು ಪಡೆದುಕೊಂಡಿದ್ದು, ಇದರೊಂದಿಗೆ ಅಸಲಿ ಆಟವೂ ಶುರುವಾಗಿದೆ.
    ಇಷ್ಟು ದಿನ ಆಕಾಂಕ್ಷಿತರೆಲ್ಲರೂ ತಮ್ಮ ಪಾಡಿಗೆ ಮತಬೇಟೆ ನಡೆಸುತ್ತಿದ್ದರು. ಆದರೀಗ ಚುನಾವಣೆಯ ಕಾವು ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ಜೆಡಿಎಸ್ ಅಭ್ಯರ್ಥಿಯೂ ಆಗಿರುವ ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಅವರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಇತ್ತ ನಿರೀಕ್ಷೆಯಂತೆ ಸಮಾಜ ಸೇವಕ ಕದಲೂರು ಉದಯ್ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಬಂದು ಹೋದ ಬಳಿಕ ಕಮಲ ಪಾಳಯದಲ್ಲಿ ಉತ್ಸಾಹ ಹೆಚ್ಚಾಗಿದೆ.
    ಉಳಿದ ಕ್ಷೇತ್ರಗಳಂತೆಯೇ ಮದ್ದೂರಿನಲ್ಲಿಯೂ ಪ್ರತಿಷ್ಠೆ ರಾಜಕಾರಣ ಜೋರಾಗಿದೆ. ಮತದಾರರ ಮನಗೆಲ್ಲಲ್ಲು ಇನ್ನಿಲ್ಲದ ತಂತ್ರಗಾರಿಕೆ ನಡೆಸುತ್ತಲೇ ಇದ್ದಾರೆ. ಕ್ಷೇತ್ರದಲ್ಲಿ ಯಾವುದೇ ಶುಭ ಸಮಾರಂಭ ಅಥವಾ ಸಾವಿನ ಮನೆಯಾದರೂ ಸ್ಪರ್ಧಾಕಾಂಕ್ಷಿಗಳು ಹಾಜರಿ ಹಾಕುತ್ತಿದ್ದಾರೆ. ಇದರೊಟ್ಟಿಗೆ ಕ್ಷೇತ್ರದ ಮತದಾರರಿಗೆ ಹೆಚ್ಚಿನ ಉಡುಗೊರೆ ಕೊಡುತ್ತಿರುವ ಕ್ಷೇತ್ರವೂ ಇದಾಗಿದೆ. ಜೆಡಿಎಸ್ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂತೆಯೇ ಮದ್ದೂರು ತನ್ನ ಭದ್ರಕೋಟೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿಕೊಳ್ಳಲು ದಳ ಕೂಡ ಗೇಮ್‌ಪ್ಲಾೃನ್ ನಡೆಸುತ್ತಿದೆ. ಪ್ರಸ್ತುತ ಜೆಡಿಎಸ್‌ನಿಂದ ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಅವರೇ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಅಭ್ಯರ್ಥಿಗಳು ಅಂತಿಮಗೊಂಡಿಲ್ಲವಾದರೂ ಬಿ ಫಾರ್ಮ್ ಆಕಾಂಕ್ಷಿತರು ಮತದಾರರ ಮತಗೆಲ್ಲುವ ಕಸರತ್ತು ನಡೆಸುತ್ತಿದ್ದಾರೆ.
    ಬೀಗರಿಗೆ ದೊಡ್ಡಗೌಡರಿಂದ ಪಾಠ: ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಶಾಸಕ ಡಿ.ಸಿ.ತಮ್ಮಣ್ಣ, ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಳಿಯಲು ಸಜ್ಜಾಗಿದ್ದಾರೆ. ಅಭಿವೃದ್ಧಿ ಕೆಲಸಗಳ ಜತೆಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿ ಗಮನಸೆಳೆದಿದ್ದಾರೆ. ಮುಖಂಡರು, ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿರುವ ಡಿಸಿಟಿ, ಕೆಲ ಕಾರಣಾಂತರಗಳಿಂದ ಮುನಿಸಿಕೊಂಡಿದ್ದ ತಮ್ಮ ಆಪ್ತ ಬಳಗದೊಂದಿಗೆ ಸಂಧಾನ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಅವರು ಕೂಡ ತಮ್ಮ ನಾಯಕರೊಂದಿಗೆ ಚುನಾವಣೆಗೆಂದು ಸಜ್ಜಾಗುತ್ತಿದ್ದಾರೆ.
    ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಎದುರಾಳಿಯಾಗಿತ್ತು. ಈ ಬಾರಿ ದಳವನ್ನು ಎದುರಿಸಲು ಕಾಂಗ್ರೆಸ್ ಜತೆಗೆ ಬಿಜೆಪಿ ಕೂಡ ಸಜ್ಜಾಗಿದೆ. ಆದರೆ ಟಕ್ಕರ್ ಕೊಡುವುದು ಸುಲಭವಲ್ಲ. ಹಲವು ಮುಖಂಡರು ಪಕ್ಷ ತೊರೆದಿದ್ದರೂ ಕಾರ್ಯಕರ್ತರು ಬೆನ್ನುಲುಬಾಗಿ ನಿಂತಿದ್ದಾರೆ. ಪಕ್ಷ ಬಿಟ್ಟು ಹೋದವರಿಗೆ ಟಕ್ಕರ್ ಕೊಡುವಂತೆಯೇ ಪಂಚರತ್ನ ಯಾತ್ರೆಯನ್ನು ಅಭೂತಪೂರ್ವವಾಗಿ ನಡೆಸಿಕೊಟ್ಟಿದ್ದರು. ಐದು ವರ್ಷದ ಅವಧಿಯಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸವನ್ನು ಮುಂದಿಟ್ಟುಕೊಂಡು ಡಿಸಿಟಿ ಮತಯಾಚನೆ ಮಾಡುತ್ತಿದ್ದಾರೆ. ಈ ನಡುವೆ ಬೀಗರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಸೋಮವಾರ ಡಿಸಿಟಿ ಚರ್ಚೆ ನಡೆಸಿದ್ದಾರೆ. ಅದರಂತೆ ಚುನಾವಣಾ ತಂತ್ರಗಾರಿಕೆ ಬಗ್ಗೆ ದೊಡ್ಡಗೌಡರು ಸಲಹೆ ನೀಡಿದ್ದಾರೆ.
    ಉದಯ್‌ಗೆ ಕಾಂಗ್ರೆಸ್ ಮಣೆ: ಸಮಾಜಸೇವೆ ಮೂಲಕವೇ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಕದಲೂರು ಉದಯ್ ನಿರೀಕ್ಷೆಯಂತೆ ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತರಾಗಿದ್ದ ಉದಯ್, ಪ್ರಾರಂಭದ ದಿನದಲ್ಲಿ ಪಕ್ಷೇತರ ಅಭ್ಯರ್ಥಿಯಾಗುವ ಇರಾದೆ ವ್ಯಕ್ತಪಡಿಸಿದ್ದರು. ಆದರೂ ಇವರೊಟ್ಟಿಗಿದ್ದ ಮುಖಂಡರು ಕಾಂಗ್ರೆಸ್‌ನವರೇ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಪಕ್ಷದ ಬೆಂಬಲವಿಲ್ಲದೆ ಚುನಾವಣೆ ಎದುರಿಸುವುದು ಸವಾಲಿನ ಕೆಲಸ ಎನ್ನುವ ಸಲಹೆಯನ್ನು ಆಪ್ತ ಬಳಗ ನೀಡುತ್ತಿತ್ತು.
    ಅದರಂತೆ ಬದಲಾದ ರಾಜಕೀಯ ಬೆಳವಣಿಗೆ ಎಂಬಂತೆ ಕಾಂಗ್ರೆಸ್ ಸೇರ್ಪಡೆಗೆ ಗ್ರೀನ್ ಸಿಗ್ನಿಲ್ ಕೂಡ ಸಿಕ್ಕಿತು. ತಮ್ಮ ಬೆಂಬಲಿಗರೊಂದಿಗೆ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರಿಕೊಂಡಿದ್ದಾರೆ. ಸದ್ಯಕ್ಕೆ ಪಕ್ಷದೊಳಗೆ ಎಲ್ಲವೂ ಸಮತೋಲನವಾಗಿರುವಂತೆ ಕಂಡುಬರುತ್ತಿದೆ. ಆದರೆ ಬಿ ಫಾರ್ಮ್‌ಗೆ ಪ್ರಬಲ ಆಕಾಂಕ್ಷಿಯೂ ಆಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುಟುಂಬದ ಎಸ್.ಗುರುಚರಣ್ ನಡೆ ಬಗ್ಗೆ ಕುತೂಹಲವಿದೆ. ಇದಕ್ಕೆ ಕಾರಣವೂ ಇದೆ. ಉದಯ್ ಪಕ್ಷ ಸೇರುವುದು ಖಚಿತವಾದ ಬಳಿಕವೂ ತಾನೇ ಅಭ್ಯರ್ಥಿ ಎಂದು ಗುರು ಬಹಿರಂಗವಾಗಿ ಘೋಷಣೆ ಮಾಡಿಕೊಂಡಿದ್ದನ್ನು ಸ್ಮರಿಸಬಹುದು. ಆದ್ದರಿಂದ ವರಿಷ್ಠರು ಅಸಮಾಧಾನ ಹೊರಬೀಳದಂತೆ ಹಾಗೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸ್ವಲ್ಪಮಟ್ಟಿಗಾದರೂ ಸರ್ಕಸ್ ಮಾಡಲೇಬೇಕಾದ ಅನಿವಾರ್ಯತೆ ಇದೆ.
    ಕಮಲಕ್ಕೆ ನಮೋ ಹೆಸರೇ ಶ್ರೀರಕ್ಷೆ: ಈ ಬಾರಿ ಚುನಾವಣಾ ಅಖಾಡದಲ್ಲಿ ಬಿಜೆಪಿ ಕೂಡ ಸಕ್ರಿಯವಾಗಿದೆ. ಅಭ್ಯರ್ಥಿ ಯಾರೆಂದು ಇನ್ನೂ ಅಧಿಕೃತಗೊಂಡಿಲ್ಲ. ಸದ್ಯಕ್ಕೆ ಮನ್‌ಮುಲ್ ನಿರ್ದೇಶಕ ಸ್ವಾಮಿ ಆಕಾಂಕ್ಷಿತರಾಗಿದ್ದಾರೆ. ಮಂಡ್ಯದಲ್ಲಿ ಈ ಬಾರಿ ಕಮಾಲ್ ಮಾಡಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿಯ ಚುನಾವಣಾ ಗೇಮ್‌ಪ್ಲಾೃನ್ ದಿನಕ್ಕೊಂದು ರೀತಿ ಬದಲಾಗುತ್ತಿದ್ದು, ಮುಂದಿನ ದಿನದಲ್ಲಿ ಯಾವ ಅಸ್ತ್ರ ಬಳಸುತ್ತಾರೆನ್ನುವುದನ್ನು ಕಾದುನೋಡಬೇಕಿದೆ.
    ಜೆಡಿಎಸ್‌ನಿಂದ ಹೊರಬಂದ ನಂತರ ಬಿಜೆಪಿ ಸೇರ್ಪಡೆಯಾದ ಸ್ವಾಮಿ, ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದಾರೆ. ಉದ್ಯೋಗ ಮೇಳ, ಆರೋಗ್ಯ ತಪಾಸಣೆ ಮೂಲಕ ಜನರಿಗೆ ಹತ್ತಿರವಾಗಲು ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಮದ್ದೂರು ಕ್ಷೇತ್ರಕ್ಕೆ ಬಂದು ಹೋದ ಬಳಿಕ ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅದರಂತೆ ಈ ಬಾರಿಯ ಚುನಾವಣೆಯಲ್ಲಿ ನಮೋ ಹೆಸರು ಅಭ್ಯರ್ಥಿಗೆ ಶ್ರೀರಕ್ಷೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts