More

    ಎಳನೀರು ಮಾರುಕಟ್ಟೆಯಲ್ಲಿ ಆದಾಯ ಸೋರಿಕೆ

    ಮದ್ದೂರು: ಪಟ್ಟಣದ ಎಳನೀರು ಮಾರುಕಟ್ಟೆಯಲ್ಲಿ ಆದಾಯ ಸೋರಿಕೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವ ಬಗ್ಗೆ ಶಾಸಕ ಕೆ.ಎಂ.ಉದಯ್ ಬೇಸರ ವ್ಯಕ್ತಪಡಿಸಿದರು.

    ಶುಕ್ರವಾರ ಎಳನೀರು ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಎಂಪಿಎಂಸಿ ಅಧಿಕಾರಿಗಳು, ಹೊರ ಗುತ್ತಿಗೆ ನೌಕರರು, ವರ್ತಕರು ಹಾಗೂ ರೈತರಿಂದ ಮಾಹಿತಿ ಪಡೆದು ಮಾತನಾಡಿದರು. ಎಳನೀರು ಮಾರುಕಟ್ಟೆಯಿಂದ ಬೇರೆ ರಾಜ್ಯಗಳಿಗೆ ಎಳನೀರು ತುಂಬಿಕೊಂಡು ಹೋಗುವ ಲಾರಿಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡುತ್ತಿಲ್ಲ. ರಸೀದಿ ಹಾಕುತ್ತಿಲ್ಲ. ಅಧಿಕಾರಿಗಳು ಲಾರಿ ಮಾಲೀಕರ ಜತೆ ಹೊಂದಾಣಿಕೆ ಮಾಡಿಕೊಂಡು ಎಪಿಎಂಸಿಗೆ ಹೆಚ್ಚಿನ ಆದಾಯ ಬರದಂತೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮಾರುಕಟ್ಟೆಯಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. ಶೌಚಗೃಹ ಸಮರ್ಪಕವಾಗಿಲ್ಲ, ಲಾರಿಗಳು ಸುಗಮವಾಗಿ ಮಾರುಕಟ್ಟೆಗೆ ಬರಲು ಮತ್ತು ಹೋಗಲು ಸಾಧ್ಯವಾಗುತ್ತಿಲ್ಲ. ಎಲ್ಲೆಂದರದಲ್ಲಿ ನಿಂತು ಸಂಚಾರ ಅಸ್ತವ್ಯಸ್ತವಾಗುತ್ತಿದ್ದು,ಎಂಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಮಹಿಳೆಯರು ಕಣ್ಣೀರು: ಎಂಎಂಸಿಗೆ ಖಾಸಗಿ ಏಜೆನ್ಸಿಯು ಹೊರ ಗುತ್ತಿಗೆ ನಿಯಮದಡಿ ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದು, ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂದು ಮಹಿಳೆಯರು ಶಾಸಕರ ಮುಂದೆ ಕಣ್ಣೀರು ಹಾಕಿದರು.

    ಇದನ್ನು ಆಲಿಸಿ ಎಪಿಎಂಸಿ ಕಾರ್ಯದರ್ಶಿ ಕೆ.ಸಿ.ಸಂದೇಶ್ ಅವರನ್ನು ತರಾಟೆ ತೆಗೆದುಕೊಂಡ ಶಾಸಕರು, ಸ್ಥಳೀಯರನ್ನು ಕೆಲಸಕ್ಕೆ ಬಳಸಿಕೊಳ್ಳಬೇಕು ಮತ್ತು ನಿಯಾಮನುಸಾರ ಸಂಬಳ ನೀಡಬೇಕು ಎಂದು ಸೂಚಿಸಿದರು. ಆದರೂ ಕಾರ್ಯದರ್ಶಿ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಈ ಬಗ್ಗೆ ಈ ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕರು ತಿಳಿಸಿದರು.

    ಮಾದರಹಳ್ಳಿ ಗ್ರಾಮದ ರೈತರ ಕುಮಾರ್ ಮಾತನಾಡಿ, ಮಾರುಕಟ್ಟೆಯಲ್ಲಿ ಎಳನೀರು ಮಾರಾಟ ಮಾಡಲು ರೈತರು ಬಂದಾಗ ವರ್ತಕರು 100 ಎಳನೀರಿಗೆ 10 ಎಳನೀರನ್ನು ಹೆಚ್ಚುವರಿಯಾಗಿ ಹಿಡಿದುಕೊಳ್ಳುತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ದೂರಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಇದಕ್ಕೆ ಹೊಸ ಮಾನದಂಡ ಹುಡುಕಲಾಗುವುದು. ಸರ್ಕಾರದಿಂದ ವಿಶೇಷ ಅನುದಾನ ತಂದು ಮಾರುಕಟ್ಟೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ಎಪಿಎಂಸಿ ಕಾರ್ಯದರ್ಶಿ ಕೆ.ಸಿ.ಸಂದೇಶ್, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ವರ್ತಕರು, ರೈತರು ಇದ್ದರು.

    ಗಮನ ಸೆಳೆದ ವಿಜಯವಾಣಿ ವರದಿ: ಮಾರುಕಟ್ಟೆ ಮುಂದಿರುವ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎಳನೀರು ತುಂಬಿದ ಲಾರಿಗಳು ನಿಲ್ಲುವುದರಿಂದ ಸುಗಮಕ್ಕೆ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ನ.13 ರಂದು ‘ಸರ್ವೀಸ್ ರಸ್ತೆಯಲ್ಲೇ ಪಾರ್ಕಿಂಗ್’ ಶೀಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಕೆ.ಎಂ.ಉದಯ್ ‘ಇನ್ಮುಂದೆ ಹೆದ್ದಾರಿಯಲ್ಲಿ ಎಳನೀರು ಲಾರಿಗಳು ನಿಲ್ಲದಂತೆ ಕ್ರಮವಹಿಸಬೇಕು’ ಎಂದು ಸ್ಥಳದಲ್ಲಿದ್ದ ಸಂಚಾರ ಪಿಎಸ್‌ಐ ಮಹೇಶ್ ಅವರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts