More

    ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳೊಳಗೆ ಆಕ್ಸಿಜನ್ ಘಟಕ ; ಕೆಆರ್‌ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ಭರವಸೆ 

    ಮಾಗಡಿ : ಇನ್ನೊಂದು ತಿಂಗಳೊಳಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಘಟಕ ನಿರ್ಮಿಸಿ ಜನಸೇವೆಗೆ ಲೋಕಾರ್ಪಣೆ ಮಾಡುವುದಾಗಿ ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಹೇಳಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಆಕ್ಸಿಜನ್ ಘಟಕ ನಿರ್ಮಾಣ ಸ್ಥಳವನ್ನು ಶನಿವಾರ ವೀಕ್ಷಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಮೇರೆಗೆ ಮಾಗಡಿ ಹಾಗೂ ಕನಕಪುರದಲ್ಲಿ ಕೆಆರ್‌ಐಡಿಎಲ್ ಸಿಎಸ್‌ಆರ್ ಅನುದಾನದಲ್ಲಿ ಆಕ್ಸಿಜನ್ ಘಟಕ ಆರಂಭಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದರು. ಅದರಂತೆ ಜಾಗ ಪರಿಶೀಲಿಸಲಾಗಿದ್ದು, ತ್ವರಿತವಾಗಿ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

    ಕರೊನಾದಿಂದಾಗಿ ಮಾನವ ಕುಲ ಸಂಕಷ್ಟದಲ್ಲಿದ್ದು ಈ ಯುದ್ಧವನ್ನು ಒಗ್ಗಟ್ಟಾಗಿ ಗೆಲ್ಲಬೇಕಿದೆ. ಸೋಂಕಿತರಿಗೆ ಅತ್ಮಸ್ಥೈರ್ಯ ತುಂಬುವುದೇ ದೊಡ್ಡ ಔಷಧ ಇದ್ದಂತೆ. ಪ್ರತಿಯೊಬ್ಬರೂ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆಯಬೇಕು ಎಂದು ಕರೆ ನೀಡಿದರು.
    ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ, ಕಾರ್ಮಿಕರಿಗೆ ಊಟ-ತಿಂಡಿ ವಿತರಣೆ ಮಾಡುವಲ್ಲಿ ಕೆಲ ಗೊಂದಲ, ಲೋಪದೋಷಗಳಿದ್ದವು. ಆದರೆ, ನಗರ ಪ್ರದೇಶಗಳಲ್ಲಿ ಸ್ವಯಂಸೇವಕರು, ಎನ್‌ಇಒಗಳು ಜವಾಬ್ದಾರಿ ವಹಿಸಿಕೊಂಡಿರುವುದರಿಂದ ಸಮರ್ಪಕ ವಾಗಿ ಊಟ ವಿತರಣೆ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಂತ ಹಂತವಾಗಿ ಸಮಸ್ಯೆಗಳನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದರು.

    ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕೆ ಬಿ.ಎಸ್.ಯಡಿಯೂರಪ್ಪ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇದರಿಂದ ಕಳೆದ ನಾಲ್ಕು ದಿನಗಳಿಂದ ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದು, ಪ್ರತಿಯೊಬ್ಬರಿಗೂ ಕರೊನಾ ಲಸಿಕೆ ನೀಡಲು ಸರ್ಕಾರ ಸೂಕ್ತ ವ್ಯವಸ್ಥೆ ಕೈಗೊಂಡಿದೆ. ಸರ್ಕಾರದ ಜತೆಗೆ ಜನರು ಕೈಜೋಡಿಸಿದರೆ ಕರೊನಾ ನಿಯಂತ್ರಣ ಸಾಧ್ಯ ಎಂದರು.

    ಬಿಎಂಆರ್‌ಡಿಎ ಅಧ್ಯಕ್ಷ ಡಾ. ರಂಗಧಾಮಯ್ಯ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್, ತಾಪಂ ಇಒ ಟಿ.ಪ್ರದೀಪ್, ಟಿಎಚ್‌ಒ ಡಾ. ಸತೀಶ್, ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್, ಸಿಪಿಐ ಎ.ಪಿ. ಕುಮಾರ್, ಪ್ರಭಾರ ಮುಖ್ಯಾಧಿಕಾರಿ ರಮೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ, ಮುಖಂಡರಾದ ಎಚ್.ಎಂ. ಕೃಷ್ಣಮೂರ್ತಿ, ಪೊಲೀಸ್ ವಿಜಯ್ ಕುಮಾರ್
    ಇತರರು ಇದ್ದರು.

    ಚಿಕಿತ್ಸೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿ : ರಾಮನಗರ ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಲಸಿಕೆ ನೀಡಲು ಆಸ್ಪತ್ರೆಗಳಲ್ಲಿ ಆಕ್ಸಿಜನ್, ಔಷಧ ಮತ್ತು ಮಾತ್ರೆಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್‌ಗೆ ಸಲಹೆ ನೀಡಿದ ರುದ್ರೇಶ್, ಸಾಮಾನ್ಯ ಕಾಯಿಲೆಯಿಂದ ಬಳಲುವ ನಾಗರಿಕರಿಗೆ ಚಿಕಿತ್ಸೆ ನೀಡಲು ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts