More

    ಪ್ರೀ ವೆಡ್ಡಿಂಗ್ ಶೂಟ್ ಸೇವೆಯಿಂದ ವೈದ್ಯ ವಜಾ

    ಚಿತ್ರದುರ್ಗ: ವೈದ್ಯರೊಬ್ಬರು ತಮ್ಮ ಪ್ರೀ ವೆಡ್ಡಿಂಗ್ ಶೂಟ್‌ಗೆ ತಾಲೂಕಿನ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಾ ಘಟಕ ಬಳಸಿಕೊಂಡ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    ಎನ್‌ಎಚ್‌ಎಂ ಅಡಿ ಗುತ್ತಿಗೆ ಆಧಾರದಲ್ಲಿ ಜ. 12ರಂದು ಆಸ್ಪತ್ರೆಗೆ ಹಾಜರಾಗಿ, ಇಲ್ಲಿ ವರದಿ ಮಾಡಿಕೊಂಡ ನಂತರ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಅಭಿಷೇಕ್ ಎಂಬುವವರು ಭಾವಿ ಪತ್ನಿಯಾಗಲಿರುವ ವೈದ್ಯೆ ಜೊತೆಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು, ಈ ಕುರಿತ ದೂರಿನ ಮೇರೆಗೆ ಸಿಎಂ ಕಚೇರಿ, ಆರೋಗ್ಯ ಸಚಿವರು ಮಾಹಿತಿ ಕೇಳಿ, ಕ್ರಮಕ್ಕೆ ಸೂಚಿಸಿದ್ದರು. ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ವೈದ್ಯನನ್ನು ವಜಾಗೊಳಿಸಿ ಡಿಸಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.

    ಘಟನೆ ಹಿನ್ನೆಲೆ: ಹಾಸಿಗೆ ಮೇಲೆ ರೋಗಿಯೊಬ್ಬರನ್ನು ಮಲಗಿಸಿ, ಸಮವಸ್ತ್ರ ಧರಿಸಿ, ಕೈಯಲ್ಲಿ ಕತ್ತರಿ ಹಿಡಿದು ಹೊಟ್ಟೆ ಭಾಗದಲ್ಲಿ ವೈದ್ಯ ಶಸ್ತ್ರಚಿಕಿತ್ಸೆ ಮಾಡುವ, ಬೆವರುವಾಗ ವೈದ್ಯೆ ಒರೆಸುವ, ಕೊನೆಯಲ್ಲಿ ಎಲ್ಲರೂ ನಗುವ ಮಾದರಿಯ ದೃಶ್ಯವನ್ನು ಪ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಸರ್ಕಾರಿ ಆಸ್ಪತ್ರೆ ದುರ್ಬಳಕೆ ಎಂಬ ಆರೋಪ ಕೂಡ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮವಹಿಸಲಾಗಿದೆ.

    ಘಟನೆಗೆ ಬಳಸಿಕೊಂಡ ಶಸ್ತ್ರಚಿಕಿತ್ಸಾ ಘಟಕ ಕಳೆದ 6 ತಿಂಗಳಿನಿಂದಲೂ ದುರಸ್ತಿಯಲ್ಲಿತ್ತು. ಹೀಗಾಗಿ ವೈದ್ಯಕೀಯ ಚಟುವಟಿಕೆಗೆ ಬಳಸುತ್ತಿರಲಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮುಂದಿನ ವಾರ ಮದುವೆ ಇದ್ದ ಕಾರಣ ಆತುರದಲ್ಲಿ ತನ್ನ ವೃತ್ತಿ ಮಾದರಿಯಲ್ಲೇ ಪ್ರೀ ವೆಡ್ಡಿಂಗ್ ಶೂಟ್ ಮಾಡಿಕೊಳ್ಳುವ ಭರದಲ್ಲಿ ಈ ರೀತಿ ಸರ್ಕಾರಿ ಆಸ್ಪತ್ರೆ ಬಳಸಿಕೊಂಡು ಯಡವಟ್ಟು ಮಾಡಿಕೊಂಡಿದ್ದಾರೆ.

    ಭರಮಸಾಗರ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆಯೊಂದಿಗೆ ಹೆಸರು ಗಳಿಸಿದೆ. ಆದರೆ, ಈ ಘಟನೆ ಕುರಿತು ಸರ್ಕಾರ ವರದಿ ಕೇಳಿ, ಕ್ರಮಕ್ಕೆ ಸೂಚಿಸಿತ್ತು. ಜಿಲ್ಲಾಧಿಕಾರಿ ಅವರು ವಜಾಗೊಳಿಸಿ ಆದೇಶಿಸಿದ್ದಾರೆ. ಮರುಕಳಿಸದಂತೆ ಎಲ್ಲ ವೈದ್ಯಾಧಿಕಾರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಡಿಎಚ್‌ಒ ಡಾ.ರೇಣುಪ್ರಸಾದ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts