More

    ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಎಂ.ಡಿ.ಹರಿಕಾಂತ

    ಕಾರವಾರ:ಬಡ ಮೀನುಗಾರರ ಕುಟುಂಬದಲ್ಲಿ ಹುಟ್ಟಿ, ಅತಿ ಕುಗ್ರಾಮದ‌ ಶಾಲೆಯ ಶಿಕ್ಷಕರಾಗಿ ದುಡಿದ ಎಂ.ಡಿ.ಹರಿಕಾಂತ ಅವರು ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಮಂಗಳವಾರ ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.

    ಪರಿಚಯ

    ಹೊನ್ನಾವರ ತಾಲೂಕಿನ ಮಂಕಿಯ ಹೊಸಹಿತ್ಲು ಗ್ರಾಮದ ಬಡ ಮೀನುಗಾರ ಕುಟುಂಬದಲ್ಲಿ ಜನಿಸಿ, ಸ್ನಾತಕೋತ್ತರ ಪದವಿ ಪಡೆದವರು ಎಂ.ಡಿ.ಹರಿಕಾಂತ.

    2003 ರಲ್ಲಿ ಕಾರವಾರ ತಾಲೂಕಿನ ಸುಳಗೇರಿ ಎಂಬ ಕುಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು.

    ಸಮುದಾಯದ ಸಹಭಾಗಿತ್ವದಲ್ಲಿ ವಿದ್ಯುದ್ದೀಪ, ಕಂಪೌಂಡ್ ಮುಂತಾದ ಸೌಲಭ್ಯವನ್ನು ಶಾಲೆಯ ಮೆಚ್ಚಿನ ಮೇಸ್ಟರಾಗಿದ್ದರು

    ಪ್ರಸ್ತುತ ಹೊನ್ನಾವರ ಮಂಕಿ ಚಿತ್ತಾರ ಶಾಲೆಯ ಶಿಕ್ಷಕರಾಗಿ ಸಮುದಾಯದ ಸಹಭಾಗಿತ್ವದಲ್ಲಿ ಅರಣ್ಯ ಜಾಗವನ್ನು ಶಾಲೆಗೆ ಮಂಜೂರು ಮಾಡಿಸಿದರು.

    ಹೈಸ್ಕೂಲ್ ಮಂಜೂರಿಗೆ ಶ್ರಮಿಸಿದರು. ಇನ್ನೊಂದೆಡೆ ಮಂಕಿಯಲ್ಲಿ ಮೇಘಶ್ರೀ ಸೇವಾಸಂಸ್ಥೆ ಪ್ರಾರಂಭಿಸಿ ಅನಾಥ, ಅಂಗವಿಕಲ ಹಾಗೂ ವಯೋವೃದ್ಧ ಸೇವೆಯನ್ನು ಮಾಡುತ್ತಿದ್ದಾರೆ.

    ಅಂಕಿತಾ ಎನ್ನುವ ಅಂಗವಿಕಲ ಅನಾಥ ಮಗುವಿಗೆ ಆಶ್ರಯ ನೀಡಿ ಪೊರೆಯುತ್ತಿದ್ದಾರೆ.
    ಸಾಹಿತ್ಯ, ನಾಟಕ, ವ್ಯಕ್ತಿ ಚರಿತ್ರೆ, ಕಾನೂನು, ಕಥಾಸಂಕಲನ, ಕವನ ಸಂಕಲನ ಇತ್ಯಾದಿ ವಿಷಯಗಳ ಕುರಿತು ಹತ್ತು ಕೃತಿಗಳನ್ನು ರಚಿಸಿದ್ದಾರೆ.

    ಯಕ್ಷಗಾನ ಕಲಾವಿದರಾಗಿ, ನಿರ್ದೇಶಕರಾಗಿ, ಪ್ರಸಂಗಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರ ಕಿರು ಸಂದರ್ಶನ ಇಲ್ಲಿದೆ.

    ಶಿಕ್ಷಣದಿಂದ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯಾಗಬೇಕು

    *ಪ್ರಸ್ತುತ ಜಗತ್ತಿಗೆ ಶಿಕ್ಷಣ ಪದ್ಧತಿ ಹೇಗಿರಬೇಕು ಮತ್ತು ಯಾವ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು..?
    ಉತ್ತರ
    :-

    ಶಿಕ್ಷಣ ಕ್ಷೇತ್ರ ಎಂದರೆ ನಿಂತ ನೀರಾಗಬಾರದು.ಕಾಲಕ್ಕೆ ತಕ್ಕಂತೆ, ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಶಿಕ್ಷಣ ಪದ್ಧತಿ ಬದಲಾಗಬೇಕು.

    ಈಗ ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಹೊಸ ಆಯ್ಕೆಗಳನ್ನು ನೀಡುತ್ತದೆ.

    ಕೌಶಲ್ಯಕ್ಕೆ ಪ್ರಾಧಾನ್ಯತೆ ಇದೆ. ಪ್ರತಿ ವಿದ್ಯಾರ್ಥಿಗೆ ಅವನ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

    ಇದು ಮುಂದೆ ಆತ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಳ್ಳುತ್ತದೆ.
    ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಕೆಯಲ್ಲ. ಪ್ರತಿ ವಿದ್ಯಾರ್ಥಿ ಮಾನಸಿಕವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ದೈಹಿಕವಾಗಿ ವಿಕಸನ ಹೊಂದುವಂತೆ ಮಾಡುವುದು ಶಿಕ್ಷಣವಾಗಿದೆ.

    ಕಲಿಕೆಯಲ್ಲಿ ಯಕ್ಷಗಾನದಂಥ ಕಲೆಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳಿಗೆ ಪಠ್ಯ ಸುಲಭವಾಗಿ, ಸರಳವಾಗಿ ಅರ್ಥವಾಗುತ್ತದೆ. ಇದರಿಂದ ಪಠ್ಯದಲ್ಲಿ ಶಾಸ್ತ್ರೀಯ ಯಕ್ಷಗಾನ ಕಲಿಕೆಯನ್ನೂ ಅಳವಡಿಸಬೇಕು ಎಂಬ ಬೇಡಿಕೆ ನನ್ನದು.

    ನಿಮ್ಮ ಸಾಧನೆಗೆ ಪ್ರೇರಣೆ ಏನು…?

    ಉತ್ತರ:-ನಾನು ಹಿಂದುಳಿದ ವರ್ಗದಲ್ಲಿ ಬೆಳೆದು ಬಂದವ. ನನ್ನ ಬಾಲ್ಯ ಹಾಗೂ ಆಗಿನ ವ್ಯವಸ್ಥೆಗಳು ನಾನೂ ಎಲ್ಲರಂತೆ ಬೆಳೆಯಬೇಕು ಎಂದು ನನ್ನಲ್ಲಿ ಛಲ ಮೂಡಿಸಲು ಕಾರಣವಾಯಿತು.

    ನಾವು ಬದುಕಿದ್ದಾಗ ಏನು ಮಾಡಿದ್ದೇವೆ ಎಂಬುದು ಮುಖ್ಯ ಹಾಗಾಗಿ ಒಳಿತು ಮಾಡು ಮನುಜ ಎಂಬ ಹಾಡಿನಂತೆ ನಾನು ಸಮಾಜದ ಎಲ್ಲರೂ ಸಮಾನವಾಗಿ ಬೆಳೆಸಬೇಕು ಎಂಬ ನಿರ್ಧಾರಕ್ಕೆ ಬಂದು ಅಂಥ ಕಾರ್ಯದಲ್ಲಿ ತೊಡಗಿದ್ದೇನೆ.

    ಪ್ರಶಸ್ತಿ ಬಂದಿದ್ದು ಹೇಗನ್ನಿಸುತ್ತದೆ…?
    ಉತ್ತರ:-
    ಈ ಪ್ರಶಸ್ತಿ ನನಗೆ ಔಪಚಾರಿಕವಾಗಿ ಬಂದಿದ್ದು. ಮಕ್ಕಳು ಹಾಗೂ ಅವರ ಪಾಲಕರು ಕೊಡುವ ಪ್ರೀತಿ ಎಲ್ಲಕ್ಕಿಂತ ದೊಡ್ಡದು. ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬನಿಗೂ ಇಂಥ ಪ್ರಶಸ್ತಿಗಳು ಬರಬೇಕು. ಆತ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ಪ್ರೇರಣೆಯಾಗುತ್ತದೆ.



    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts