More

    ಎಲ್​ಪಿಜಿ ಸಬ್ಸಿಡಿಗೆ ಶೀಘ್ರ ಬ್ರೇಕ್?; ಹೊರೆ ಇಳಿಕೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

    ನವದೆಹಲಿ: ಎಲ್​ಪಿಜಿ ಅಡುಗೆ ಅನಿಲ ಕೊಂಚ ದುಬಾರಿಯಾಗುವ ಸಾಧ್ಯತೆಗಳು ಗೋಚರಿಸಿವೆ. ಕೇಂದ್ರ ಸರ್ಕಾರ ಈ ಸಲದ ಮುಂಗಡ ಪತ್ರದಲ್ಲಿ ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿ ನೆರವನ್ನು 12,995 ಕೋಟಿ ರೂಪಾಯಿಗೆ ಇಳಿಸಿದೆ. ಉಜ್ವಲ ಯೋಜನೆಗೆ ಇನ್ನೂ 1 ಕೋಟಿ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲಾಗುವುದು. ಅಲ್ಲದೆ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಏರಿಸಿದರೆ ಸರ್ಕಾರದ ಮೇಲಿನ ಹೊರೆ ಇಳಿಯಲಿದೆ ಎಂಬ ಅಂಶವನ್ನೂ ಉಲ್ಲೇಖಿಸಿತ್ತು. ಇದರೊಂದಿಗೆ, ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿ ಕೊನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

    ದರ ಪರಿಷ್ಕರಣೆ ಹೇಗೆ?: ಎಲ್​ಪಿಜಿ ಸಿಲಿಂಡರ್ ದರದಲ್ಲಿ ಸ್ಥಿರವಾದ ಏರಿಕೆ 2019ರಲ್ಲೂ ಆಗಿತ್ತು. ಕಳೆದ ವರ್ಷವೂ ಆಗಿದೆ. ಈ ವರ್ಷವೂ ಆಗಲಿದೆ. ಆದರೆ ಇದು ಪೆಟ್ರೋಲ್ ದರದಂತೆ ಏರಿಕೆಯಾಗಲ್ಲ. ಎಲ್​ಪಿಜಿ ದರ ಪರಿಷ್ಕರಣೆಯನ್ನು ಚಿಲ್ಲರೆ ಇಂಧನ ವ್ಯಾಪಾರಿಗಳೇ ಮಾಡುತ್ತಾರೆ.

    ಮಾನದಂಡ: ಎಲ್​ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ಸರ್ಕಾರ ನೇರವಾಗಿ ವರ್ಗಾಯಿಸುತ್ತಿದೆ. ಸೀಮೆಎಣ್ಣೆಯನ್ನು ಸರ್ಕಾರ ಸಬ್ಸಿಡಿ ದರದಲ್ಲೇ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸುತ್ತಿದೆ. ಅಂತಾರಾಷ್ಟ್ರೀಯ ಇಂಧನ ದರ ಮತ್ತು ಡಾಲರ್ ಎದುರು ರೂಪಾಯಿ ದರಕ್ಕೆ ಅನುಗುಣವಾಗಿ ಎಲ್​ಪಿಜಿ ಸಿಲಿಂಡರ್ ದರ ನಿಗದಿಯಾಗುತ್ತದೆ.

    ಸಬ್ಸಿಡಿ ಪ್ರಮಾಣ ಇಳಿಕೆ: ಹದಿನೈದನೇ ಹಣಕಾಸು ಆಯೋಗದ ವರದಿ ಪ್ರಕಾರ, ಸಬ್ಸಿಡಿ ಹೊರೆ ಕಡಿಮೆ ಮಾಡುವ ಸಲುವಾಗಿ ತೆಗೆದುಕೊಂಡ ಕ್ರಮಗಳ ಫಲವಾಗಿ ರೆವೆನ್ಯೂ ರಸೀದಿಗಳ ಮೂಲಕ ಪೆಟ್ರೋಲಿಯಂ ಸಬ್ಸಿಡಿ ಪ್ರಮಾಣ ಕಾಲಾನುಕ್ರಮದಲ್ಲಿ ಶೇಕಡ 9.1ರಿಂದ ಶೇಕಡ 1.6ಕ್ಕೆ ಇಳಿಕೆಯಾಗಿದೆ. ಜಿಡಿಪಿ ಪ್ರಮಾಣಕ್ಕೆ ಹೋಲಿಸಿದರೆ ಶೇಕಡ 0.8ರಿಂದ ಶೇಕಡ 0.1ಕ್ಕೆ ತಲುಪಿದೆ. ಇದೇ ವೇಳೆ, ಸೀಮೆಎಣ್ಣೆ ಸಬ್ಸಿಡಿ 2011-12ರಲ್ಲಿ 28,215 ಕೋಟಿ ರೂಪಾಯಿ ಇತ್ತು. 2020-21ರ ಮುಂಗಡ ಪತ್ರದ ಆರ್ಥಿಕ ಅಂದಾಜು ಪ್ರಕಾರ 3,659 ಕೋಟಿ ರೂಪಾಯಿ ಆಗಲಿದೆ.

    ಉಜ್ವಲ ಯೋಜನೆಯ ಸಬ್ಸಿಡಿ ಹೊರೆ?

    ಉಜ್ವಲ ಯೋಜನೆಯಡಿ ಈವರೆಗೆ 8.3 ಕೋಟಿ ಕುಟುಂಬಗಳಿಗೆ ಎಲ್​ಪಿಜಿ ಸಂಪರ್ಕ ಒದಗಿಸಲಾಗಿದೆ. ಇನ್ನೂ ಒಂದು ಕೋಟಿ ಕುಟುಂಬಗಳಿಗೆ ನೀಡುವ ಗುರಿ ಇದೆ. ಈ ಯೋಜನೆ ಕೇಂದ್ರ ಸರ್ಕಾರದ ಮೇಲೆ ಎಲ್​ಪಿಜಿ ಸಬ್ಸಿಡಿಯ ಹೊರೆಯನ್ನು ಹೆಚ್ಚಿಸಲಿದೆ. ಹೀಗಾಗಿ, ಸಬ್ಸಿಡಿ ಸವಲತ್ತನ್ನು ಕೇವಲ ಬಡವರಿಗೆ ನೀಡಲು ಅಥವಾ ಸಬ್ಸಿಡಿ ದರದ ಸಿಲಿಂಡರ್​ಗೆ ಮಿತಿ ಹೇರಲು ಹಣಕಾಸು ಆಯೋಗ ಸೂಚಿಸಿತ್ತು. ಬಡತನ ರೇಖೆಗಿಂತ ಕೆಳಗಿರುವವರಿಗೆ 1,600 ರೂಪಾಯಿಗೆ ಎಲ್​ಪಿಜಿ ಸಂಪರ್ಕ ಒದಗಿಸುವ ಯೋಜನೆಯೇ ಉಜ್ವಲ ಸ್ಕೀಮ್ ಇದನ್ನು ಕೇಂದ್ರ ಸರ್ಕಾರ 2016ರ ಮೇ 1 ರಂದು ಜಾರಿಗೊಳಿಸಿತು.

    ಉಜ್ವಲ ಉದ್ದೇಶ

    • ಮಹಿಳಾ ಸಬಲೀಕರಣ
    • ಆರೋಗ್ಯಯುತ ಅಡುಗೆ ಇಂಧನ ಪೂರೈಕೆ
    • ಪಳೆಯುಳಿಕೆ ಇಂಧನ ಬಳಸುವ ಮೂಲಕ ಲಕ್ಷಾಂತರ ಗ್ರಾಮೀಣರು ಎದುರಿಸುತ್ತಿದ್ದ ಆರೋಗ್ಯ ಸಮಸ್ಯೆ ತಡೆಯುವುದು

    ಅಂಕಿ-ನೋಟ

    • 8,000 ಕೋಟಿ ರೂಪಾಯಿ – 2016-17ನೇ ಸಾಲಿನಿಂದ ಮೂರು ವರ್ಷಕ್ಕೆ ಮೀಸಲಿಟ್ಟ ಅನುದಾನ
    • 1,600 ರೂಪಾಯಿಗೆ ಬಿಪಿಎಲ್ ಕುಟುಂಬಕ್ಕೆ ಎಲ್​ಪಿಜಿ ಸಂಪರ್ಕ
    • 5 ಕೋಟಿ ಕುಟುಂಬಗಳಿಗೆ ಉಜ್ವಲ ಎಲ್​ಪಿಜಿ ಸಂಪರ್ಕದ ಆರಂಭಿಕ ಗುರಿ
    • 10 ಕೋಟಿ ಕುಟುಂಬಗಳಿಗೆ ಉಜ್ವಲ ಎಲ್​ಪಿಜಿ ಸಂಪರ್ಕದ ಗುರಿ (2021-22 ಬಜೆಟ್)
    • 8.3 ಕೋಟಿ ಉಜ್ವಲ ಸಂಪರ್ಕ ಸಿಕ್ಕಿರುವ ಕುಟುಂಬಗಳ ಸಂಖ್ಯೆ (2021 ಜನವರಿ 31ರ ಡೇಟಾ)
    • 1.3 ಕೋಟಿ ಕುಟುಂಬಗಳು ಗಿವ್ ಇಟ್ ಅಪ್ ಅಭಿಯಾನದಲ್ಲಿ ಸಬ್ಸಿಡಿ ತ್ಯಜಿಸಿವೆ
    • 5,000 ಕೋಟಿ ರೂಪಾಯಿ ಸಬ್ಸಿಡಿ
    • ಕೇಂದ್ರಕ್ಕೆ ಉಳಿತಾಯ ಮಾಡಿಕೊಟ್ಟ ಗಿವ್ ಇಟ್ ಅಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts