More

    ನಗು ಅರಳಿಸಿದ ಚೆಂಡು ಹೂವು

    ನಗು ಅರಳಿಸಿದ ಚೆಂಡು ಹೂವು

    ಚಿಕ್ಕಮಗಳೂರು: ಸಹಸ್ರಾರು ರೂಪಾಯಿ ಬಂಡವಾಳ ಹಾಕಿ ಬೆಳೆದ ಬದನೆ ಬೆಲೆಕುಸಿತದಿಂದ ಕೈ ಕೊಟ್ಟರೂ, ಬಂಡವಾಳವನ್ನೇ ಹಾಕದೆ ಬೆಳೆಸಿದ ಚೆಂಡು ಹೂವು ಕೈ ಹಿಡಿದು ರೈತನ ಮೊಗದಲ್ಲಿ ನಗು ಅರಳಿಸಿದೆ. ಹೀಗೆ ಲಾಭ-ನಷ್ಟ ಅನುಭವಿಸಿರುವುದು ತಾಲೂಕಿನ ಕಳಸಾಪುರ ಸಮೀಪದ ಪಾವಗೊಂಡನಹಳ್ಳಿ ರೈತ.

    ಒಂದು ಎಕರೆ ಹೊಲದಲ್ಲಿ ಚೆಂಡು ಹೂವು ಅರಳಿರುವುದನ್ನು ಕಂಡ ಕೆಲವು ಹೂವಿನ ವ್ಯಾಪಾರಿಗಳು ಬಂದು ದುಪ್ಪಟ್ಟು ಬೆಲೆಗೆ ಕೇಳಿದರು. ಮಾತು ತಪ್ಪಬಾರದೆಂಬ ಉದ್ದೇಶದಿಂದ ಒಪ್ಪಂದ ಮಾಡಿಕೊಂಡವರಿಗೇ ನೀಡುವಂತಹ ಪ್ರಾಮಾಣಿಕತೆ ಮೆರೆದಿರುವುದು ರೈತ ನಿಂಗೇಗೌಡ.

    ಔಷಧ ಮತ್ತು ಪೈಂಟ್ ತಯಾರಿಕೆಗೆ ಉಪಯೋಗಿಸಲು ಬಳಸುವ ಚೆಂಡು ಹೂವನ್ನು ಬೆಳೆಯಲು ಹಿಂದೆ ತಮಿಳುನಾಡು ಮೂಲದವರು ರೈತರಿಗೆ ಬೀಜ, ಔಷಧ ಪೂರೈಕೆ ಮಾಡುತ್ತಿದ್ದರು. ಈಗ ಹಾಸನದಲ್ಲಿ ಔಷಧ ತಯಾರಿಕೆಗೆ ಹೂವು ಬಳಸುತ್ತಾರೆ ಎಂಬ ಮಾಹಿತಿ ಇದೆ. ಸ್ಥಳೀಯ ಪರಿಚಿತರು ಹೂವಿನ ಬೀಜ, ಔಷಧ ನೀಡಿ ರೈತನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ರೈತ ಬೀಜವನ್ನು ಮಡಿಮಾಡಿ 20 ದಿನಗಳು ಸಸಿ ಬೆಳೆಸಿ ನಂತರ ಹೊಲದಲ್ಲಿ ನೆಟ್ಟು ನಿತ್ಯ ನೀರುಣಿಸಿ ಪೋಷಣೆ ಮಾಡಿದ ಫಲವಾಗಿ 3 ತಿಂಗಳ ನಂತರ ಹೂವು ಅರಳಿ ಕೊಯ್ಲಿಗೆ ಸಿದ್ಧವಾಗಿದೆ.

    ಜೋಳ, ಟೊಮ್ಯಾಟೊ, ಹಿರೇಕಾಯಿಗಳನ್ನು ಬೆಳೆದರೆ ಹಗಲಿನಲ್ಲಿ ನೀರು, ಔಷಧ, ಗೊಬ್ಬರ ಹಾಕುವ ಜತೆಗೆ ರಾತ್ರಿ ನಿದ್ದೆಗೆಟ್ಟು ಹೊಲ ಕಾಯಬೇಕಾಗುತ್ತದೆ. ಚೆಂಡು ಹೂವು ಬೆಳೆದಿರುವುದರಿಂದ ಅಷ್ಟಾಗಿ ದನಗಳು ಮೇಯುವುದಿಲ್ಲ ಹಾಗೂ ಕಾಡುಪ್ರಾಣಿಗಳ ಹಾವಳಿಯೂ ತಪ್ಪುತ್ತದೆ ಎಂಬುದು ರೈತನ ಮಗ ರವಿ ಅವರ ಮಾತು.

    ಕಳೆದ ವರ್ಷ 5 ಸಾವಿರ ರೂ. ಬಂಡವಾಳ ಹಾಕಿ ಒಂದು ಎಕರೆ ಪ್ರದೇಶದಲ್ಲಿ ಜೋಳ ಬೆಳೆದು 20 ಕ್ವಿಂಟಾಲ್ ಫಸಲು ಬಂದಿತ್ತು. ಒಂದು ಕ್ವಿಂಟಾಲ್​ಗೆ 1 ಸಾವಿರ ರೂ. ನಂತೆ 20 ಸಾವಿರ ರೂ. ಕೈಗೆ ಸಿಕ್ಕಿ, 15 ಸಾವಿರ ರೂ. ಲಾಭ ಗಳಿಸಿದ್ದ ರೈತ ಕುಟುಂಬ ಪ್ರಥಮ ಬಾರಿಗೆ ಚೆಂಡು ಹೂವು ಬೆಳೆದಿದ್ದಾರೆ. ಬೆಳೆಸಲು ತಗಲುವ ಸಂಪೂರ್ಣ ವೆಚ್ಚವನ್ನು ಗುತ್ತಿಗೆ ವ್ಯಾಪಾರಿಗಳೇ ನೀಡುತ್ತಾರೆ. ನೀರು ಹಾಯಿಸಿ ಪೋಷಿಸುವುದೊಂದೇ ರೈತನ ಕಾಯಕ. ಫಸಲಿಗೆ 1 ಕೆಜಿಗೆ 7 ರಿಂದ 8 ರೂ. ನೀಡುತ್ತಾರೆ. ನಾಲ್ಕು ಟನ್​ಗೂ ಹೆಚ್ಚು ಇಳುವರಿ ಬಂದು 40 ಸಾವಿರ ರೂ. ಕೈಗೆ ಸಿಗಲಿದೆ. ಹಾಗಾಗಿ ಬಂಡವಾಳವಿಲ್ಲದೆ ಗುತ್ತಿಗೆಯೊಂದಿಗೆ ಬೆಳೆ ಬೆಳೆದರೆ ಲಾಭವಿರುತ್ತದೆ. ನಷ್ಟದ ಮಾತೇ ಇಲ್ಲ ಎಂಬು ಕೃಷಿಕ ನಿಂಗೇಗೌಡ ಅವರ ಅಭಿಪ್ರಾಯ.

    ಸಹಕಾರಿಯಾಯ್ತು ಬೋರ್​ವೆಲ್: ಚೆಂಡು ಹೂವು ಬೆಳೆಯಲು ಬಹಳ ನೀರಿನ ಅವಶ್ಯವಿದ್ದು ವಾರಕ್ಕೊಮ್ಮೆಯಾದರೂ ನೀರು ಹಾಯಿಸಲೇಬೇಕು. ಬಯಲುಭಾಗವಾದ್ದರಿಂದ ಸಮಯಕ್ಕೆ ಸರಿಯಾಗಿ ಮಳೆ ಬೀಳುತ್ತದೆ ಎಂಬ ವಿಶ್ವಾಸ ಇಲ್ಲ. ಆದ್ದರಿಂದ ಬೆಳೆ ಬೆಳೆಯಲು ನೀರಿಗೆ ಹಾಹಾಕಾರ ಎದುರಿಸುತ್ತಿದ್ದ ರೈತ ನಿಂಗೇಗೌಡ, ಕರೊನಾ ಲಾಕ್​ಡೌನ್ ಸಂದರ್ಭ ಏಪ್ರಿಲ್​ನಲ್ಲಿ ಬೋರ್​ವೆಲ್ ಕೊರೆಸಿದರು. ಇವರ ಅದೃಷ್ಟವಶಾತ್ 500 ಅಡಿಗೇ ನಾಲ್ಕು ಇಂಚು ನೀರು ಸಿಕ್ಕಿದ್ದು ಚೆಂಡುಹೂವು ನಗೆ ಬೀರಲು ಸಹಕಾರಿಯಾಯಿತು.

    ಒಂದು ರೂ.ಗೂ ಕೇಳೋರಿಲ್ಲ ಬದನೆ: ಬಯಲುಸೀಮೆ ಪ್ರದೇಶಲ್ಲಿ ಕರೊನಾ ಆರಂಭದ ದಿನಗಳಲ್ಲಿ ಸಾವಿರಾರು ರೂ. ಬಂಡವಾಳ ಹಾಕಿ ಇರುವ ಮೂರು ಎಕರೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ಬದನೆ, ಉಳಿದ ಅರ್ಧ ಎಕರೆಯಲ್ಲಿ ಹೀರೆಕಾಯಿ, ಹೆಬ್ಬಾಳ ಅವರೆ, ಸಿಹಿಕುಂಬಳ, ಎತ್ತಿಗೆ ಮೇವು ಸೇರಿ ಮಿಶ್ರ ಬೆಳೆ ಬೆಳೆಯಲಾಗಿದೆ. ಒಂದು ಎಕರೆಯಲ್ಲಿ ಹಾಕಿರುವ ಹೂವಿಗೆ ಬಂಡವಾಳವೂ ಇಲ್ಲ ಜೊತೆಗೆ ಕೆಲಸ ಕಮ್ಮಿ.

    ಬದನೆಗೆ ವಾರಕ್ಕೊಮ್ಮೆ ಗೊಬ್ಬರ, ಔಷಧ ನೀರು ಹಾಕಿ ಹಗಲು-ರಾತ್ರಿ ಕಷ್ಟಪಟ್ಟು ಹೊಲದ ತುಂಬ ಬೆಳೆದು ನಿಂತ ಫಸಲನ್ನು ಒಂದು ರೂಪಾಯಿಗೂ ಕೇಳೋರು ಇಲ್ಲದಂತಾಗಿದೆ. ಕಳಸಾಪುರದ ಶನಿವಾರ ಸಂತೆಯಲ್ಲಿ ಮಾರಾಟ ಮಾಡಿದಾಗ 50 ಕೆಜಿ ಬದನೆ ಚೀಲಕ್ಕೆ ಸಿಕ್ಕಿದ್ದು ನೂರು ರೂಪಾಯಿ. ಅದನ್ನು ಕಟಾವು ಮಾಡಲು ಕಾರ್ವಿುಕರಿಗೆ ಸಂಬಳ ನೀಡಿದ್ದು 200 ರೂ. ಹಾಗಾಗಿ 10 ಸಾವಿರ ರೂ. ಬಂಡವಾಳ ಹಾಕಿದ ಬದನೆಯಲ್ಲಿ ನಷ್ಟವಾಯಿತು. ಆದರೆ ಚೆಂಡು ಹೂ ಕೈ ಹಿಡಿದಿದ್ದರಿಂದ ಸುಧಾರಣೆಯಾಗಿದೆ. ಬದನೆಕಾಯಿ ಹೊಲದಲ್ಲೇ ಬಿಟ್ಟು ಬೇಸಾಯ ಮಾಡಲು ತೀರ್ವನಿಸಿದ್ದೇನೆ ಎಂದು ನಿಂಗೇಗೌಡ ಬೇಸರದಿಂದ ಹೇಳಿದರು.

    ಹೂವಿಗೆ ಬೇಡಿಕೆ ಹೆಚ್ಚಿದ್ದರಿಂದ ವ್ಯಾಪಾರಿಯೋರ್ವರು ಕೆಜಿಗೆ 20 ರಿಂದ 25 ರೂ.ಗೆ ಕೇಳಿದ್ದರು. ಆದರೆ ಓರ್ವ ಊರುಮನೆ ವ್ಯಕ್ತಿ ನಂಬಿಕೆಯಿಂದ ಬೀಜ, ಔಷಧ ಕೊಟ್ಟು ಬೆಳೆಸಿದ ಹೂವನ್ನು ಹಣದ ದುರಾಸೆಗೆ ಅನ್ಯರಿಗೆ ಕೊಟ್ಟರೆ ವಿಶ್ವಾಸ ಕಳೆದುಕೊಂಡಂತಾಗುತ್ತದೆ. ಹಾಗಾಗಿ 7 ರಿಂದ 8 ರೂ. ಕೊಟ್ಟರೂ 40 ಸಾವಿರ ರೂ. ಲಾಭ ಸಿಗುತ್ತದೆ, ಅದೇ ತೃಪ್ತಿ ಎನ್ನುತ್ತಾರೆ ಚೆಂಡು ಹೂವು ಬೆಳೆದ ರೈತ ನಿಂಗೇಗೌಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts