More

    ಅಸುರಕ್ಷಿತ ಪಿಪಿಇ ಕಿಟ್, ಪ್ರಜ್ಞೆ ಕಳೆದುಕೊಳ್ಳುತ್ತಿರುವ ವೈದ್ಯಕೀಯ ಸಿಬ್ಬಂದಿ

    – ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ಪಿಪಿಇ ಕಿಟ್ ಧರಿಸಿದ ನಾಲ್ವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಮತ್ತಿಬ್ಬರು ಬಸವಳಿದು ಕುಸಿದು ಬಿದ್ದಿದ್ದಾರೆ…

    ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಕಳಪೆ, ಅಸುರಕ್ಷಿತ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವ ಕರೊನಾ ಸೇನಾನಿಗಳು ಅನುಭವಿಸುತ್ತಿರುವ ಶೋಚನೀಯ ಸ್ಥಿತಿಯಿದು. ಗುಣಮಟ್ಟದ, ಹವಾಮಾನಕ್ಕೆ ಹೊಂದಿಕೊಳ್ಳುವ ಕಿಟ್ ಕೊಡಿ ಎಂದು ಕೇಳಿ ಸಾಕಾಯಿತು. ಜೀವ ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇವತ್ತಲ್ಲ ನಾಳೆ ಸರಿಯಾಗುತ್ತದೆ ಎಂದು ಇದುವರೆಗೆ ಸುಧಾರಿಸಿಕೊಂಡು ಬಂದೆವು. ಸಮರ್ಪಕ ಕಿಟ್ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಚಿಕಿತ್ಸೆ ನಿಲ್ಲಿಸುತ್ತೇವೆ ಎಂದು ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ.

    ಕರಾವಳಿಯಲ್ಲಿ ಹೆಚ್ಚು ಉಷ್ಣಾಂಶವಿದ್ದು, ಬೆವರು ಸಾಕಷ್ಟು ಪ್ರಮಾಣದಲ್ಲಿ ದೇಹದಿಂದ ಹೊರ ಬರುತ್ತದೆ. ಪ್ರಸ್ತುತ ಬಳಸುವ ಪಿಪಿಇ ಕಿಟ್ ಬೆವರು ಹೀರಿಕೊಂಡು ಒದ್ದೆಯಾಗಿ ಮುದ್ದೆಯಾಗುತ್ತದೆ. ಪಿಪಿಇ ಕಿಟ್ ಎಲ್ಲರಿಗೂ ಒಂದೇ ಆದರೂ ಬಣ್ಣ, ಗುಣಮಟ್ಟದಲ್ಲಿ ವ್ಯತ್ಯಾಸವಿದೆ. ಬಿಳಿ ಪಿಪಿಇ ಕಿಟ್ ಉಷ್ಣವಾಹಕದಂತಿದ್ದು, ಅತೀ ಹೆಚ್ಚು ಉಷ್ಣಾಂಶದಿಂದ ದೇಹ ಸುಸ್ತಾಗುತ್ತದೆ. ಪಿಪಿಇ ಕಿಟ್ ಧರಿಸಿದವರು ಮೂರ್ಛೆ ಹೋಗುತ್ತಾರೆ. ನೀಲಿ ಕಿಟ್ ಆದರೆ ಎಲ್ಲ ಹವಾಮಾನಕ್ಕೆ ಹೊಂದಾಣಿಕೆಯಾಗುತ್ತದೆ. ಜಿಲ್ಲಾಡಳಿತ ಗುಣಮಟ್ಟದ ನೀಲಿ ಪಿಪಿಇ ಕಿಟ್ ಒದಗಿಸಬೇಕು ಎಂದು ಕರೊನಾ ಯೋಧರು ಒತ್ತಾಯಿಸಿದ್ದಾರೆ.

    ಚರ್ಚೆಯೇ ಆಗಿಲ್ಲ: ಜಿಲ್ಲೆಗೆ ಪ್ರತಿದಿನ 400 ಪಿಪಿಇ ಕಿಟ್ ಬೇಕಾಗುತ್ತದೆ. ರಾಜ್ಯದಲ್ಲಿ ಎಲ್ಲ ಕಡೆ ಒಂದೇ ರೀತಿಯ ವಾತಾವರಣ ಇರುವುದಿಲ್ಲ. ಕರಾವಳಿಯಲ್ಲಿ ಹೆಚ್ಚು ಉಷ್ಣಾಂಶದೊಂದಿಗೆ ಬೆವರಿನ ಪ್ರಮಾಣ ಜಾಸ್ತಿಯಿದ್ದು, ಇದಕ್ಕೆ ಹೊಂದಾಣಿಕೆಯಾಗುವ ಪಿಪಿಇ ಕಿಟ್ ಒದಗಿಸಬೇಕು ಎನ್ನುವುದು ಉಡುಪಿ ಕರೊನಾ ಚಿಕಿತ್ಸೆ ನೇತೃತ್ವ ವಹಿಸಿದ್ದ ವೈದ್ಯರು, ಇತರ ಸಿಬ್ಬಂದಿ ಬೇಡಿಕೆ. ಜಿಲ್ಲಾಡಳಿತ ಕರೊನಾ ಬಗ್ಗೆ ಹತ್ತಾರು ಸಭೆ ನಡೆಸಿದರೂ ವೈದ್ಯರ ಬೇಡಿಕೆ ಬಗ್ಗೆ ಚರ್ಚಿಸಿಲ್ಲ. ಪಿಪಿಇ ಕಿಟ್ ಸಮರ್ಪಕವಾಗಿಲ್ಲ ಎಂದು ಸರ್ಕಾರಕ್ಕೆ ಹೇಳುವ ಕೆಲಸ ಕೂಡ ಮಾಡಿಲ್ಲ ಎನ್ನುವುದು ವೈದ್ಯಕೀಯ ಸಿಬ್ಬಂದಿಯ ಅಸಮಾಧಾನ.

    ಮೈಸೂರಿನ ವಾತಾವರಣ ಉಡುಪಿಯಲ್ಲಿ ಇರುವುದಿಲ್ಲ. ಆಯಾ ಪ್ರದೇಶದ ಹವಾಮಾನಕ್ಕೆ ಅನುಕೂಲವಾದ ಪಿಪಿಇ ಕಿಟ್ ಒದಗಿಸಲು ಬೇಡಿಕೆ ಇಟ್ಟಿದ್ದೇವೆ. ಫಿಟ್ ಕ್ವಾಲಿಟಿ ಮತ್ತು ಉಷ್ಣಾಂಶ ವ್ಯತ್ಯಾಸವಿದ್ದರೂ ಒಂದೇ ರೀತಿಯ ಪಿಪಿಇ ಕಿಟ್ ಕೊಟ್ಟು, ‘ಅವರಿಗೆ ಆಗುವಾಗ ನಿಮಗ್ಯಾಕೆ ಆಗಲ್ಲ’ ಅಂತ ಪ್ರಶ್ನಿಸಿದರೆ ಹೇಗೆ? ಸಮಸ್ಯೆ ಬಗ್ಗೆ ತಜ್ಞರ ಸಮಿತಿಯಲ್ಲಿ ಚರ್ಚೆ ಕೂಡ ನಡೆದಿಲ್ಲ.
    – ಡಾ.ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿ

    ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಇಲ್ಲಿ ವೈದ್ಯಕೀಯ ಸಿಬ್ಬಂದಿ ಗುಣಮಟ್ಟವಿಲ್ಲದ ಪಿಪಿಇ ಕಿಟ್ ಬಳಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜೀವದ ಹಂಗು ತೊರೆದು ಚಿಕಿತ್ಸೆ ನೀಡುತ್ತಿರುವವರಿಗೆ ಜಿಲ್ಲಾಡಳಿತ ಗುಣಮಟ್ಟದ, ಹವಾಮಾನಕ್ಕೆ ಪೂರಕ ಕಿಟ್ ಒದಗಿಸಬೇಕು. ನಿರ್ಲಕ್ಷಿಸಿದರೆ ಕಳಪೆ ಕಿಟ್ ವಿರುದ್ಧ ಕಾಂಗ್ರೆಸ್ ಜಿಲ್ಲಾದ್ಯಂತ ಹೋರಾಟ ಮಾಡಲಿದೆ.
    – ಗೋಪಾಲ ಪೂಜಾರಿ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts