More

    ಪ್ರೇಮ ವಿವಾಹವಾಗಿದ್ದ ಮಗಳು 5 ವರ್ಷದ ಹಿಂದೆಯೇ ನಾಪತ್ತೆ! ಗಂಡನ ಮನೆಯಲ್ಲಿದೆ ನಿಗೂಢ ರಹಸ್ಯ?

    ಮಂಡ್ಯ: ಐದು ವರ್ಷದ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಯುವತಿ ನಿಗೂಢವಾಗಿ ಕಣ್ಮರೆಯಾಗಿದ್ದು, ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತವಾಗಿದೆ.

    ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ದಲಿತ ಸಮುದಾಯದ ಮಹದೇವಮ್ಮರ ಮಗಳು ಮೇಘಶ್ರೀ ನಾಪತ್ತೆಯಾಗಿದ್ದು, ಈ ಸಂಬಂಧ ಅ.17ರಂದು ಆಕೆಯ ಪಾಲಕರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. 2015ರಲ್ಲಿ ತಿರುಮಲಾಪುರ ಸಮೀಪದಲ್ಲಿ ಪತ್ತೆಯಾಗಿದ್ದ ಅಪರಿಚಿತ ಯುವತಿ ಮೃತದೇಹಕ್ಕೂ ಮೇಘಶ್ರೀ ನಾಪತ್ತೆ ಪ್ರಕರಣಕ್ಕೂ ಸಂಬಂಧ ಇದೆಯಾ? ಎಂಬ ಪ್ರಶ್ನೆ ಮೂಡಿದೆ.

    ದೂರಿನಲ್ಲಿ ಏನಿದೆ?: ಬೆಂಗಳೂರಿನ ಎಂಇಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೇಘಶ್ರೀಗೆ ಮೂವರು ಯುವತಿಯರ ಪರಿಚಯವಾಗಿತ್ತು. ಬಳಿಕ ಇವರ ಸಂಬಂಧಿ ಪಾಂಡವಪುರ ತಾಲೂಕಿನ ಯುವಕನ ಟಿ.ಕೆ.ಸ್ವಾಮಿಯ ಪರಿಚಯ ಮೇಘಶ್ರೀಗೆ ಆಗಿದ್ದು, ಇದು ಪ್ರೇಮಕ್ಕೆ ತಿರುಗಿತ್ತು.

    2015ರಲ್ಲಿ ಇವರಿಬ್ಬರೂ ಮದುವೆಯಾಗಿದ್ದರು. ಆದರೆ ಒಂದು ವರ್ಷದ ಬಳಿಕ ಮೇಘಶ್ರೀ ಈ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ. ‘ನಾನು ಊರಿಗೆ ಬಂದಾಗ ಗಂಡ ಮತ್ತು ಅವರ ತಂದೆ ಕುಮಾರ್​ ಜಾತಿ ನಿಂದನೆ ಮಾಡುತ್ತಾರೆ. ಕಿರುಕುಳ ನೀಡುತ್ತಿದ್ದು, ನನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ತಾಯಿ ಬಳಿ ಹೇಳಿಕೊಂಡಿದ್ದಳು. ಇದಾದ ಬಳಿಕ ನಾಲ್ಕೈದು ವರ್ಷದಿಂದ ಯಾವುದೇ ಫೋನ್​ ಕರೆಯಾಗಲಿ, ಸಂಪರ್ಕವೇ ಇರಲಿಲ್ಲ. ಮಗಳಿಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅ.10ರಂದು ಮನೆಯ ಬೀರುವನ್ನು ಸ್ವಚ್ಛಗೊಳಿಸುತ್ತಿದ್ದಾಗ ಟಿ.ಕೆ.ಸ್ವಾಮಿಯ ಚುನಾವಣಾ ಗುರುತಿನ ಚೀಟಿ ಸಿಕ್ಕಿತು. ಇದರ ಆಧಾರದ ಮೇಲೆ ಸ್ವಾಮಿ ಅವರ ಗ್ರಾಮಕ್ಕೆ ತೆರಳಿ ವಿಚಾರಿಸಿದೆವು. ಆಗ ನಮ್ಮ ಮಗಳನ್ನು ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ ಎಂದು ಕೆಲ ಗ್ರಾಮಸ್ಥರು ತಿಳಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

    ಮಗಳು ಕೊಲೆಯಾಗಿದ್ದಾಳೆ ಎಂದು ತಿಳಿದ ಕೂಡಲೇ ಪಾಂಡವಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದೆವು. ಅ.15ರಂದು ಪೊಲೀಸರ ಜತೆ ಹೀಗಿ ಈ ಬಗ್ಗೆ ಸ್ವಾಮಿ ಕುಟುಂಬಸ್ಥರು ವಿಚಾರಿಸಿದೆವು. ಸ್ವಾಮಿ ಅವರ ತಂದೆ ಕುಮಾರ್​, ‘ನಿಮ್ಮ ಮಗಳು ತುಂಬಾ ದಿನಗಳ ಹಿಂದೆಯೇ ಹೊರಟು ಹೋದಳು’ ಎಂದರು. ಆದ್ದರಿಂದ ಸ್ವಾಮಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕು’ ಎಂದು ಮೇಘಶ್ರೀ ತಾಯಿ ಮಹದೇವಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.

    ಮೇಘಶ್ರೀ ಕಾಣೆಯಾಗಿರುವ ಬಗ್ಗೆ ತಾಯಿ ಮಹದೇವಮ್ಮ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. 2015ರಲ್ಲಿ ತಿರುಮಲಾಪುರ ಸಮೀಪದಲ್ಲೇ ಅಪರಿಚಿತ ಯುವತಿ ಮೃತದೇಹ ಪತ್ತೆಯಾಗಿತ್ತು. ಆದರೆ ಮೃತೆಯ ವಾರಸುದಾರರು ಯಾರೂ ಇಲ್ಲದ ಕಾರಣ 2017ರಲ್ಲಿ ಈ ಪ್ರಕರಣವನ್ನು ಕೈಬಿಡಲಾಗಿತ್ತು. ಮಹದೇವಮ್ಮ ದೂರು ನೀಡಿರುವ ಹಿನ್ನೆಲೆಯಲ್ಲಿ ಅಪರಿಚಿತ ಮೃತದೇಹಕ್ಕೂ ಈ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದ್ದಾರೆ.

    ಯುವತಿಯ ನಾಪತ್ತೆ ಪ್ರಕರಣ ಸಂಬಂಧ ಆಕೆಯ ಗಂಡ ಟಿ.ಕೆ.ಸ್ವಾಮಿಯನ್ನು ಶ್ರೀರಂಗಪಟ್ಟಣದ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

    ಮಗಳನ್ನೇ ಮರ್ಯಾದಾ ಹತ್ಯೆ ಮಾಡಿದ ಅಪ್ಪ-ಮಕ್ಕಳು! ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts