More

    ಪ್ರಿಯತಮೆ ಕಾಲು ಊನವಾದರೂ ಕೈಬಿಡದ ಪ್ರಿಯತಮ

    ಚಿಕ್ಕಮಗಳೂರು: ವರ್ಷಾನುಗಟ್ಟಲೆ ಪ್ರೀತಿಸಿ ಮದುವೆ ಸಂದರ್ಭ ಪ್ರೇಯಸಿಯ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡರೂ ಕೈಬಿಡದ ಪ್ರಿಯತಮ ಆಕೆಯನ್ನೇ ವರಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ.

    ಪಂಗುನಿ ಉತ್ತಿರ ಜಾತ್ರೆ ಅಂಗವಾಗಿ ಭಾನುವಾರ ಕುಮಾರಗಿರಿಯಲ್ಲಿ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಕೂಲಿಕಾರ್ವಿುಕ ಕುಟುಂಬ ಭಕ್ತರಹಳ್ಳಿಯ ನಾರಾಯಣ ಮತ್ತು ಮಂಜುಳಾ ಅವರ ಪುತ್ರಿ ರತ್ನಾ ಹಾಗೂ ರತ್ನಾ ಅವರ ಪುತ್ರ ಮನು ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾದರು.

    ಪ್ರೀತಿಸಿ ಮೂರು ವರ್ಷ ಕಳೆದ ನಂತರ ರತ್ನಾ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡಾಗ ಮನು ಎಷ್ಟೇ ಕಷ್ಟಗಳು ಎದುರಾದರೂ ಕೈ ಬಿಡದೆ ನಿನ್ನನ್ನೇ ವರಿಸುತ್ತೇನೆ ಎಂದು ಧೈರ್ಯ ತುಂಬಿದಾಗ ಪ್ರೀತಿ ಇನ್ನಷ್ಟು ಗಾಢವಾಯಿತು. ಎರಡೂ ಕುಟುಂಬಗಳ ಒಪ್ಪಿಗೆ ದೊರೆತು ಇದೇ ಸಂದರ್ಭಕ್ಕೆ ಸರಳ ಸಾಮೂಹಿಕ ವಿವಾಹ ವೇದಿಕೆಯಾಗಿ ಸಾವಿರಾರು ಜನ ಸಾಕ್ಷಿಯಾದರು. ಪ್ರೀತಿಗೆ ಸಾವಿಲ್ಲ ಎಂಬುದಕ್ಕೆ ಈ ಜೋಡಿ ನಿದರ್ಶನವಾಯಿತು.

    ಪ್ರೀತಿಸಿದವಳಿಗಾಗಿ ಕೆಲಸ ಬಿಟ್ಟ: ತಂದೆ 9 ವರ್ಷದ ಹಿಂದೆ ನಿಧನರಾಗಿದ್ದು, ತಾಯಿ ರತ್ನಾ ಅವರೊಂದಿಗಿದ್ದ ಮನು, ನಗರದ ಹಾರ್ಡ್​ವೇರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಪ್ರೀತಿಸಿದವಳ ಕಾಲುಗಳು ಊನಗೊಂಡಾಗ ಆಕೆಲಸ ಬಿಟ್ಟು, ತನ್ನ ಗ್ರಾಮದ ಬಳಿಯ ತೋಟವೊಂದರಲ್ಲಿ ಕೆಲಸ ಆರಂಭಿಸಿ ಅವಳ ಕ್ಷೇಮಕ್ಕಾಗಿ ಮುಂದಾದ. ಮದುವೆಗೆ ಯುವಕನ ತಾಯಿ ಸಹ ಅಪಸ್ವರ ಎತ್ತದೆ ಮಗಳಂತೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಅಭಯ ನೀಡಿದ್ದಾರೆ.

    ರಿಪೋರ್ಟ್ ನಾರ್ಮಲ್: ಯುವತಿ ಮಲ್ಲೇನಹಳ್ಳಿ ಕಾಲೇಜಿನಲ್ಲಿ ಓದುತ್ತಿದ್ದಾಗ ಮನೆಯಲ್ಲಿ ಏಕಾಏಕಿ ಕುಸಿದಿದ್ದಾಳೆ. ಆಗ ಪಾಲಕರು ಕೇರಳ, ಚಿಕ್ಕಮಗಳೂರು, ಶಿವಮೊಗ್ಗ ಆಸ್ಪತ್ರೆ, ನಾಟಿ ವೈದ್ಯರು, ದೇವರ ಮೊರೆಯೂ ಸೇರಿ ಎರಡು ವರ್ಷಗಳಿಂದ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿದರೂ ಫಲಕಾರಿಯಾಗಿಲ್ಲ. ಕೆಲವು ವೈದ್ಯರು ಮೂಳೆರೋಗ ಎಂಬ ಮಾಹಿತಿ ನೀಡಿದ್ದಾರೆ. ಎರಡೂ ಕಾಲುಗಳ ಒಂದು ಬೆರಳು ಸಹ ಅಲುಗಾಡದ ಪರಿಸ್ಥಿತಿಯಿದೆ. ಆದರೆ ಎಲ್ಲ ವರದಿಗಳಲ್ಲೂ ಕಾಲಿನಲ್ಲಿ ನ್ಯೂನತೆ ಇಲ್ಲ ಎಂಬ ಅಂಶ ದೃಢವಾಗಿದೆ ಎಂದು ಪಾಲಕರು ಹೇಳುತ್ತಾರೆ.

    ವೈದ್ಯರಿಗೆ ಸವಾಲ್: ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲೂ ರತ್ನಾಳ ಕೇಸ್ ವೈದ್ಯಲೋಕಕ್ಕೆ ಒಂದು ಸವಾಲಾಗಿದೆ. ಕಾಲುಗಳನ್ನು ಸರಿಪಡಿಸಲು ಸಾಕಷ್ಟು ಸಾಲ ಮಾಡಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ. ಆರ್ಥಿಕವಾಗಿ ಹಿಂದುಳಿದಿರುವುದರಿಂದ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಈ ಯುವತಿ ನಡೆದಾಡುವಂತಾಗಿ ಸಂಸಾರ ಸುಖವಾಗಿದ್ದರೆ ಸಾಕು ಎಂಬುದು ವಿವಾಹದಲ್ಲಿ ಪಾಲ್ಗೊಂಡಿದ್ದವರ ಹಾರೈಕೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts