More

    ಅನೈತಿಕ ಚಟುವಟಿಕೆ ತಾಣವಾದ ಯಲಹಂಕ ಸ್ಮಶಾನ

    | ಡಿ.ಎಸ್. ವೆಂಕಟಾಚಲಪತಿ ಯಲಹಂಕ

    ಸಂಜೆ ಪುಂಡಪೋಕರಿಗಳ ಕಾಟ, ರಾತ್ರಿ ಅನೈತಿಕ ಚಟುವಟಿಕೆಗಳ ‘ಆಟ’, ಡಾಂಬರೀಕರಣವಾಗದೆ ಹಳ್ಳ- ಗುಂಡಿಗಳಿಂದ ತುಂಬಿದ ರಸ್ತೆ, ವಿದ್ಯುದ್ದೀಪಗಳಿಲ್ಲ, ಮಳೆ- ಬಿಸಿಲಿಗೆ ಆಸರೆಯಿಲ್ಲ, ಎಲ್ಲೆಂದರಲ್ಲಿ ಬೆಳೆದ ಗಿಡಗಂಟಿಗಳು… ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಯಲಹಂಕ ಸ್ಮಶಾನದ ದುರ್ಗತಿಯಿದು!

    ಸರ್ಕಾರಿ ದಾಖಲೆಗಳ ಪ್ರಕಾರ ನಾಲ್ಕೈದು ಎಕರೆ ಪ್ರದೇಶದಲ್ಲಿರುವ ಯಲಹಂಕ ಸ್ಮಶಾನದ ಅಷ್ಟಿಷ್ಟು ಜಾಗವನ್ನು ಕೆಲವು ಪ್ರಭಾವಿ ಬಿಲ್ಡರ್​ಗಳು ಒತ್ತುವರಿ ಮಾಡಿಕೊಂಡು ವಸತಿ ಸಮುಚ್ಚಯ ನಿರ್ವಿುಸುತ್ತಿರುವುದರಿಂದ ಅಭಿವೃದ್ಧಿಪಡಿಸಲು ಅವಕಾಶವೇ ಇಲ್ಲದಂತಾಗಿದೆ. ಸ್ಮಶಾನ ತಲುಪಲು ಸುಸಜ್ಜಿತ ರಸ್ತೆ ಮಾರ್ಗವಿಲ್ಲ. ಅಸುನೀಗಿದವರ ಅಂತ್ಯಕ್ರಿಯೆಗೆ ಇನ್ನಿಲ್ಲದ ಪಡಿಪಾಟಲು ಪಡುವಂತಾಗಿದೆ.

    ಹೂಳಲು ಜಾಗವೇ ಇಲ್ಲ: ಯಲಹಂಕ ಸ್ಮಶಾನ ಹಿಂದುಗಳಿಗೆ ಮೀಸಲಾಗಿದೆ. ಆದರೆ, ಇಲ್ಲಿ ಬ್ರಾಹ್ಮಣ ಜನಾಂಗದವರ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲ. ‘ದಹನಕ್ರಿಯೆ ಬಾಕ್ಸ್’ ದುಸ್ಥಿತಿಯಲ್ಲಿದೆ. ಇತರ ಜನಾಂಗದವರ ಮೃತದೇಹ ಹೂಳಲು ಜಾಗವೇ ಇಲ್ಲದಂತಾಗಿದೆ. ಸಾರ್ವಜನಿಕರು ಬೆಂಗಳೂರು ನಗರದ ವಿದ್ಯುತ್ ಚಿತಾಗಾರಗಳನ್ನೇ ಅವಲಂಬಿಸಬೇಕಾಗಿದೆ.

    ನಿರ್ವಹಣೆಗೆ ಕಾಯಂ ಸಿಬ್ಬಂದಿ ಇಲ್ಲ: ಯಲಹಂಕ ಸ್ಮಶಾನ ನಿರ್ವಹಣೆಗೆ ಕಾಯಂ ಸಿಬ್ಬಂದಿ ನೇಮಕ ಮಾಡಿಲ್ಲ. ಹಲವು ವರ್ಷಗಳಿಂದಲೂ ಗುಂಡಿ ತೆಗೆಯುವ ಕೆಲಸ ಮಾಡುತ್ತಿದ್ದೇವೆ. ಬಿಬಿಎಂಪಿಯಿಂದ ವ್ಯವಸ್ಥಿತ ವೇತನ ನೀಡುತ್ತಿಲ್ಲ. ದಲಿತರ ಸಂಘಟನೆ ಮತ್ತು ರುದ್ರಭೂಮಿ ನೌಕರರ ಸಂಘದ ವತಿಯಿಂದ ಅಲ್ಪ ಸ್ವಲ್ಪ ಹಣ ಸಹಾಯ ಮಾಡುತ್ತಿದ್ದಾರೆ ಎಂದು ಯಲಹಂಕ ಸ್ಮಶಾನದ ಮೇಲ್ವಿಚಾರಕ ರವಿ ಹೇಳಿದ್ದಾರೆ.

    ನಾನು ನಗರಸಭೆ ಅಧ್ಯಕ್ಷನಾಗಿದ್ದ ಸಮಯದಲ್ಲಿ ಬ್ರಾಹ್ಮಣ ಸಮುದಾಯದವರ ಅಂತ್ಯಸಂಸ್ಕಾರಕ್ಕೋಸ್ಕರ ನಾಲ್ಕು ಸುಸಜ್ಜಿತ ಸೌದೆ ಶವಪೆಟ್ಟಿಗೆಗಳನ್ನು ನಿರ್ವಿುಸಿದ್ದೆ, ಕೊಠಡಿಯನ್ನೂ ನಿರ್ವಿುಸಿಕೊಟ್ಟಿದ್ದೇನೆ. ತದನಂತರ ಸರಿಯಾದ ನಿರ್ವಹಣೆಯಿಲ್ಲದೆ ಎಲ್ಲವೂ ಹಾಳಾಗಿದೆ. ಈಗಲಾದರೂ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು.

    | ವೈ.ಎನ್. ಅಶ್ವತ್ಥ ಪಾಲಿಕೆಯ ಮಾಜಿ ಸದಸ್ಯ

    ಸ್ಮಶಾನದಲ್ಲಿ ಬ್ರಾಹ್ಮಣರ ಸಮುದಾಯಕ್ಕೆ ಸುಸಜ್ಜಿತ ಸೌದೆ ಶವಾಗಾರವಿಲ್ಲದೆ ತೊಂದರೆಯಾಗುತ್ತಿದೆ. ಕೆಂಚೇನಹಳ್ಳಿ ಬಳಿ 19 ಗುಂಟೆ ಜಾಗ ಕೊಡಲು ಆಶ್ವಾಸನೆ ನೀಡಿದ್ದಾರೆ.

    | ಎಲ್ . ಸಂಜೀವರಾಯ ಯಲಹಂಕ ತಾಲೂಕು ಬ್ರಾಹ್ಮಣ ಸಂಘದ ನಿರ್ದೇಶಕ

    ಯಲಹಂಕದ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆಗೆ 15 ವರ್ಷಗಳ ಹಿಂದೆಯೇ 50 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು. 20 ಲಕ್ಷ ರೂ. ವೆಚ್ಚದ ಬರ್ನಿಂಗ್ ಯಂತ್ರಗಳನ್ನು ಖರೀದಿಸಲಾಗಿತ್ತು. ಆದರೆ ಕೆಲವು ಕಾನೂನು ತೊಡಕುಗಳಿಂದ ಕಾರ್ಯ ಸ್ಥಗಿತವಾಯಿತು.

    | ಮು. ಕೃಷ್ಣಮೂರ್ತಿ ನಗರಸಭೆ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts