More

    ಟೊಮ್ಯಾಟೊಗೆ ಮುಳುವಾದ ಆಲಿಕಲ್ಲು ಮಳೆ

    ಟೊಮ್ಯಾಟೊಗೆ ಮುಳುವಾದ ಆಲಿಕಲ್ಲು ಮಳೆ

    ಚಿಕ್ಕಮಗಳೂರು: ಲಕ್ಷಾಂತರ ರೂಪಾಯಿ ವ್ಯಯಿಸಿ ಮೂರು ಕಿಮೀ ದೂರದಿಂದ ಪೈಪ್​ಲೈನ್ ಅಳವಡಿಸಿ ಜಮೀನಿಗೆ ನೀರು ತಂದು ಟೊಮ್ಯಾಟೊ ಬೆಳೆದು ಫಸಲು ಕೈ ಸೇರುವ ಹೊತ್ತಿಗೆ ಬಿದ್ದ ಆಲಿಕಲ್ಲು ಮಳೆಯಿಂದ ಎಲ್ಲವೂ ಕೊಳೆತಿದೆ. ಇದರಿಂದ ರೈತ ಸಾಲದ ಸುಳಿಗೆ ಸಿಲುಕಿದ್ದಾನೆ.

    ಬಯಲು ಸೀಮೆ ಕಳಸಾಪುರ ರೈತ ಪದ್ಮೇಗೌಡ ಕೈಸಾಲ ಮಾಡಿ ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಎರಡು ವರ್ಷದ ಹಿಂದೆ 2 ಲಕ್ಷ ರೂ. ಬಂಡವಾಳ ಹಾಕಿ ಶೆಟ್ಟಿಕೆರೆ ಗುಡ್ಡದಿಂದ ಕಳಸಾಪುರದ ರಸ್ತೆ ಬದಿ ಜಮೀನಿಗೆ 2 ಕಿಮೀ ದೂರದಿಂದ ಪೈಪ್​ಲೈನ್ ಅಳವಡಿಸಿ ಜಮೀನುತನಕ ನೀರು ತಂದಿದ್ದರು. ನಂತರ ಮುಂದಿನ ಒಂದು ಕಿಮೀ ದೂರ ಇರುವ ಮತ್ತೊಂದು ಗದ್ದೆಗೂ ಪೈಪ್​ಲೈನ್ ಹಾಕಿ ನೀರಿನ ವ್ಯವಸ್ಥೆ ಮಾಡಿದ್ದಾರೆ.

    ಬೀನ್ಸ್ ಹಾಕಿ ಉತ್ತಮ ಫಸಲು ಕಂಡರು. ಆದರೆ ಮಾರಾಟ ಮಾಡುವ ಸಂದರ್ಭ ಮಾರುಕಟ್ಟೆಯಲ್ಲಿ 10 ರೂ.ಗೆ ಬೆಲೆ ಕುಸಿದ ಪರಿಣಾಮ ಬಂದಷ್ಟು ಹಣಕ್ಕೆ ತೃಪ್ತಿಪಡಬೇಕಾಯಿತು. ವರ್ಷ ಕಳೆದ ನಂತರ 3.50 ಲಕ್ಷ ರೂ. ಬಂಡವಾಳ ಹಾಕಿ ಶುಂಠಿ ನಾಟಿ ಮಾಡಿದರು. ಎರಡು ತಿಂಗಳ ಸತತ ಪ್ರಯತ್ನ ಮಾಡಿ ಬೆಳೆಗೆ ಬೋರ್ ನೀರನ್ನೇ ಪೂರೈಸಿದರು. ಬರಗಾಲವಾದ್ದರಿಂದ ಭರಣಿ, ಅಶ್ವಿನಿ ಮಳೆ ಬಾರದೆ ಕೃತಿಕ ಮಳೆಗೆ ಶುಂಠಿ ಹುಟ್ಟಿದಾಗ ಪದ್ಮೇಗೌಡರ ಮೊಗದಲ್ಲಿ ಮಂದಹಾಸ ಚಿಗುರೊಡೆಯಿತು. ಆದರೆ ಸಮರ್ಪಕವಾದಷ್ಟು ನೀರು ಪೂರೈಕೆಯಾಗದ ಕಾರಣ ಬಿಸಿಲಿನ ತಾಪ ಹೆಚ್ಚಾಗಿ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದೆ ಕೊನೆಗೆ 2 ಲಕ್ಷ ರೂ. ನಷ್ಟು ಕೈ ಸುಟ್ಟುಕೊಳ್ಳಬೇಕಾಯಿತು.

    ನೀರಿನ ಅಭಾವ, ಮಳೆಯಿಂದ ನಷ್ಟ ಅನುಭವಿಸಿದರೂ ಛಲ ಬಿಡದ ರೈತ ಟೊಮ್ಯಾಟೊ ಬೆಳೆದರು. ಕೆಲ ದಿನಗಳ ಹಿಂದೆ ಬಿದ್ದ ಆಲಿಕಲ್ಲು ಮಳೆಗೆ ಕೆಲ ಹಣ್ಣುಗಳು ಕೊಳೆತಿವೆ. ಇಷ್ಟೇ ಆಗಿದ್ದರೆ ರೈತ ಸುಧಾರಿಸಿಕೊಳ್ಳುತ್ತಿದ್ದರು. ಅದರ ಬೆನ್ನಲ್ಲೇ ಸೋಮವಾರ ಒಂದು ಗಂಟೆ ಸುರಿದ ಬಿರುಗಾಳಿ ಸಹಿತ ಮಳೆಗೆ ಟೊಮ್ಯಾಟೊ ಗಿಡಗಳು ಮುದುಡಿವೆ. ಉಳಿದ ಟೊಮ್ಯಾಟೊ ಕಾಪಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮುಂದಿನ 15 ದಿನ ಆಲಿಕಲ್ಲು ಮಳೆ ಬಾರದಿದ್ದರೆ ಒಂದಿಷ್ಟು ಫಸಲು ಬಂದು ಹಾಕಿದ ಬಂಡವಾಳ ಕೈ ಸೇರುತ್ತದೆ ಎಂಬ ವಿಶ್ವಾಸದಲ್ಲಿ ಅವರಿದ್ದಾರೆ.

    ಬಿರುಗಾಳಿ ಮಳೆಗೆ ಹಾನಿ: ಕಳಸಾಪುರ ಪ್ರದೇಶದಲ್ಲಿ ರೈತರು ಬೆಳೆದ ನೂರಾರು ಎಕರೆ ಟೊಮ್ಯಾಟೊ ಬೆಳೆಗೆ ಆಲಿಕಲ್ಲು ಮಳೆ ಭಾರಿ ಹೊಡೆತ ನೀಡಿದೆ. ಗಾಳಿಹಳ್ಳಿ ಭದ್ರಕಾಳಿ ಬನದ ರಸ್ತೆಯ ಹಣ್ಣಿಂದಡಿಕೆ ಬಳಿ 2 ವಿದ್ಯುತ್ ಕಂಬ, ಶೆಡ್​ಗೆ ಹಾನಿಯಾಗಿದೆ. 2 ತೆಂಗಿನಮರಗಳು ನೆಲಕ್ಕುರುಳಿವೆ. ಹೊಲದಲ್ಲಿ ಹತ್ತಿ ಚಿಗುರೊಡೆಯುವ ಮುನ್ನವೇ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಆಲಿಕಲ್ಲು ಮಳೆ ಬಾರದಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ಬಯಲು ಸೀಮೆ ರೈತರು ಮಳೆಗೆ ಪ್ರಾರ್ಥಿಸಿದ್ದರೂ ಆಲಿಕಲ್ಲು ಮಳೆ ಬಾರದಂತೆ ಬೇಡಿಕೊಳ್ಳುತ್ತಿದ್ದಾರೆ. ಕಳಸಾಪುರ ಸುತ್ತಮುತ್ತ ಸೋಮವಾರ ರಾತ್ರಿ ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿ ಸಂಜೆ ಹೊಲಗದ್ದೆಗಳಿಂದ ಮನೆಗೆ ಹಿಂತಿರುಗುತ್ತಿದ್ದ ರೈತರು ಸಂಪೂರ್ಣ ಒದ್ದೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts