ಲಿಂಗದಹಳ್ಳಿ: ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಜಲ ಜೀವನ್ ಮಿಷನ್‌ನಡಿ ಮನೆ ಮನೆಗೂ ನೀರು ಪೂರೈಸಲು ಪೈಪ್ ಅಳವಡಿಕೆ ಕಾಮಗಾರಿ ಒಂದೆಡೆ ಭರದಿಂದ ಸಾಗುತ್ತಿದ್ದರೆ, ಮತ್ತೊಂದೆಡೆ ಗುತ್ತಿಗೆದಾರರು ತಮಗಿಷ್ಟ ಬಂದಂತೆ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಜೆಸಿಬಿಗಳ ಮೂಲಕ ಅಗೆಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಪೈಪ್‌ಲೈನ್ ಅಳವಡಿಸುವ ಸಲುವಾಗಿ ರಸ್ತೆಗಳ ಎರಡು ಬದಿಗಳಲ್ಲಿಯೂ ಜೆಸಿಬಿಗಳ ಗುಂಡಿ ತೊಡಲಾಗುತ್ತಿದೆ. ಗುತ್ತಿಗೆದಾರರು ಯಾವುದೇ ನಿಯಮಗಳನ್ನು ಸೂಕ್ತವಾಗಿ ಪಾಲಿಸುತ್ತಿಲ್ಲ. ಹೊಸದಾಗಿ ನಿರ್ಮಿಸಿರುವ ರಸ್ತೆಗಳನ್ನು ಹಾಳುಗೆಡುವುತ್ತಿದ್ದಾರೆ. ಇದರಿಂದ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಸ್ವಲ್ಪ ಎಚ್ಚರ ತಪ್ಪಿದ್ದರೂ ಆಯತಪ್ಪಿ ನೆಲಕ್ಕುರುಳವಂತಾಗಿದೆ. ಇನ್ನಾದರೂ ಸಂಬಂಧ ಪಟ್ಟ ಗ್ರಾಪಂನವರು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ರಸ್ತೆಗಳನ್ನು ಯಥಾಸ್ಥಿತಿಗೆ ತರುವಂತೆ ಗುತ್ತಿಗೆದಾರರ ಮೇಲೆ ಒತ್ತಡ ಹಾಕಬೇಕೆಂದು ಹೋಬಳಿಯ ಕಲ್ಲತ್ತಿಪುರ ಸೇರಿದಂತೆ ಅನೇಕ ಗ್ರಾಮಗಳ ನಿವಾಸಿಗಳು ಆಗ್ರಹಿಸಿದ್ದಾರೆ.
ಮನೆ ಮನೆಗೆ ನೀರು ಕೊಡುತ್ತೇವೆಂದು ಹಳೆಯ ರಸ್ತೆಗಳ ಜತೆಗೆ ಕೋಟ್ಯಂತರ ರೂ. ವೆಚ್ಚ ಮಾಡಿ ಹೊಸದಾಗಿ ನಿರ್ಮಾಣ ಮಾಡಿರುವ ರಸ್ತೆಗಳನ್ನು ಕಿತ್ತು ಹಾಕುತ್ತಿರುವ ಗುತ್ತಿಗೆದಾರರೇ, ಕಿತ್ತ ರಸ್ತೆಗಳನ್ನು ದುರಸ್ತಿ ಪಡಿಸುವಂತೆ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಕಲ್ಲತ್ತಿಪುರದ ಅಬುಬಕರ್ ಆಗ್ರಹಿಸಿದ್ದಾರೆ.