More

    ಕರುನಾಡ ಕಾಡ ನೋಡು; ಕಾಡು ಸಮೃದ್ಧವಾಗಿದ್ದರಷ್ಟೇ ನಾವು ನೀವು!

    ಶೂನ್ಯ ಇಂಗಾಲ ಸಾಧನೆಗೆ ಇನ್ನಿಲ್ಲದ ಗುರಿಯನ್ನು ಹಾಕಿಕೊಂಡು ಶ್ರಮಿಸುತ್ತಿರುವ ನಾವು, ಕಾಡಿನ ರಕ್ಷಣೆ ವಿಚಾರದಲ್ಲಿ ತೆಗೆದುಕೊಂಡ ಕ್ರಮಗಳು ಸಾಲವು ಎಂಬುದು ನಿಚ್ಚಳವಾಗುತ್ತಲೇ ಬಂದಿದೆ. ಆದರೆ, ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ವನ್ಯ ಸಂಪತ್ತು ಹಾಗೂ ವನ್ಯಜೀವಿಗಳ ವಿಚಾರದಲ್ಲಿ ಕೊಂಚ ಆಶಾದಾಯಕ ಬೆಳವಣಿಗೆಗಳು ಇಲ್ಲದಿಲ್ಲ. ವಿಶ್ವ ಅರಣ್ಯ ದಿನದಂದು ಈ ಕುರಿತ ಮೆಲುಕು ಇಲ್ಲಿದೆ.

    ರಾಮ ಕಿಶನ್ ಕೆ.ವಿ ಬೆಂಗಳೂರು
    ಅರಣ್ಯ ವೈವಿಧ್ಯಮಯವಾದ ಪರಿಸರ ವ್ಯವಸ್ಥೆಯಾಗಿದ್ದು, ಇದಕ್ಕೆ ಪರ್ಯಾಯವಿಲ್ಲ. ಹೀಗಿರುವಾಗ ಅರಣ್ಯ ರಕ್ಷಣೆ ಪ್ರತಿಯೊಬ್ಬರ ಮೂಲಭೂತ ಕರ್ತವ್ಯ. ಕಾಡು ಉಳಿದರಷ್ಟೇ ನಾವು, ನೀವು ಮತ್ತು ಮುಂದಿನ ತಲೆಮಾರು!ಅರಣ್ಯ ಸಂಪನ್ಮೂಲದ ಮಹತ್ವ ಹಾಗೂ ಅದರ ವಿನಾಶದಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 21ರಂದು ‘ವಿಶ್ವ ಅರಣ್ಯ ದಿನ’ ಆಚರಿಸಲಾಗುತ್ತದೆ. 1971ರ ನವೆಂಬರ್​ನಲ್ಲಿ ನಡೆದ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ಮೊದಲ ಬಾರಿಗೆ ‘ವಿಶ್ವ ಅರಣ್ಯ ದಿನ’ ಆಚರಿಸುವ ನಿರ್ಣಯ ಅಂಗೀಕರಿಸಲಾಯಿತು. ಬಳಿಕ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ವಿಸõತ ಚರ್ಚೆ ನಡೆದು, ಮುಂದಿನ ಪೀಳಿಗೆಗೂ ಅರಣ್ಯ ಸಂರಕ್ಷಿಸಲು ಅಂತಾರಾಷ್ಟ್ರೀಯ ಅರಣ್ಯ ದಿನ ಆಚರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಇದರ ಭಾಗವಾಗಿ 2012ರಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

    ಕರ್ನಾಟಕದಲ್ಲಿ ನಿತ್ಯ ಹರಿದ್ವರ್ಣ, ಅರೆ ನಿತ್ಯ ಹರಿದ್ವರ್ಣ, ತೇವಭರಿತ ಎಲೆ ಉದುರುವ, ಒಣ ಎಲೆ ಉದುರುವ ಹಾಗೂ ಮುಳ್ಳಿನ ಕಾಡುಗಳಂತಹ ಉಷ್ಣವಲಯದ ಅರಣ್ಯ ಪ್ರದೇಶಗಳನ್ನು ಕಾಣಬಹುದು. ಇದಲ್ಲದೆ ಹುಲ್ಲುಗಾವಲಿನಿಂದ ಆವೃತ್ತವಾದ ಶೋಲಾ ಅರಣ್ಯ, ಕಾಂಡ್ಲಾ ವನ, ಮಿರಿಸ್ಟಿಕಾ ಜೌಗು ಅರಣ್ಯ, ಕಮರಾ ಅರಣ್ಯ ಪ್ರದೇಶಗಳಿವೆ. ಜತೆಗೆ ಕೊಡಗು ಜಿಲ್ಲೆಯ ದೇವರಕಾಡುಗಳು, ಮೈಸೂರು ಮತ್ತು ಕೊಡಗು ಜಿಲ್ಲೆಯ ಹಡ್ಲು, ಸೊರಬ, ಸಾಗರ ಮತ್ತು ಬನವಾಸಿ ತಾಲೂಕುಗಳಲ್ಲಿ ಕಾನ್ಸ್ ಕಾಡುಗಳು ಆವೃತವಾಗಿವೆ.ರಾಜ್ಯದ ಅರಣ್ಯ ಸಂಪತ್ತು ವನ್ಯಜೀವಿಗಳ ಆಶ್ರಯ ತಾಣವಾಗಿದ್ದು, ದೇಶದ ಶೇಕಡ 25ರಷ್ಟು ವನ್ಯಜೀವಿ ಹಾಗೂ ಶೇ.18 ಹುಲಿ ಸಂತತಿಯನ್ನು ಹೊಂದಿದೆ. 5 ರಾಷ್ಟ್ರೀಯ ಉದ್ಯಾನ, 30 ವನ್ಯಜೀವಿ ಅಭಯಾರಣ್ಯ, 16 ಸಂರಕ್ಷಿತ ಮೀಸಲು ಪ್ರದೇಶ ಸೇರಿದಂತೆ ಕರ್ನಾಟಕದ ಶೇ.25ರಷ್ಟು ಅರಣ್ಯ ಪ್ರದೇಶ ವನ್ಯಜೀವಿ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗೆ ಬಳಕೆಯಾಗುತ್ತಿದೆ. ಕರ್ನಾಟಕ ವೈವಿಧ್ಯಮಯ ಅರಣ್ಯ ಸಸ್ಯವರ್ಗವನ್ನು ಹೊಂದಿದೆ. ಅದರಲ್ಲೂ ಪಶ್ಚಿಮ ಘಟ್ಟದ ಶ್ರೀಮಂತಿಕೆ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದ ಜೀವನಾಡಿಯಾಗಿರುವ ಬಹುತೇಕ ನದಿಗಳು ಇಲ್ಲಿಯೇ ಉಗಮವಾಗುತ್ತವೆ.

    Forest Day

    ಅರಣ್ಯದ ಮೇಲೆ ಹೆಚ್ಚಿದ ಒತ್ತಡ: ಕಾಡು ಶ್ರೀಮಂತ ಸಂಪತ್ತಾಗಿದ್ದು, ಪ್ರಾಕೃತಿಕವಾಗಿ ಬೆಳೆದು ರೂಪುಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಉದ್ದೇಶಗಳಿಂದ ಅರಣ್ಯದ ಮೇಲೆ ಮನುಷ್ಯರ ದಬ್ಬಾಳಿಕೆ ನಿರಂತರವಾಗಿದೆ. ಅಭಿವೃದ್ಧಿ ಕಾರ್ಯ, ರೆಸಾರ್ಟ್ ನಿರ್ವಣ, ಕೈಗಾರಿಕೆ ಸ್ಥಾಪನೆ ಸೇರಿದಂತೆ ವಿವಿಧ ಚಟುವಟಿಕೆಗಳು ಅರಣ್ಯ ಸಂಪತ್ತನ್ನು ನಾಶ ಮಾಡುತ್ತಿವೆ. ಭೂಕುಸಿತ, ಕಾಳ್ಗಿಚ್ಚು, ಗಣಿಗಾರಿಕೆಯೂ ಅರಣ್ಯ ನಾಶಕ್ಕೆ ಕಾರಣವಾಗಿದೆ.

    ಈ ಬಾರಿಯ ಧ್ಯೇಯವಾಕ್ಯ: ವಿಶ್ವ ಅರಣ್ಯ ದಿನದ ಈ ಬಾರಿಯ ಧ್ಯೇಯವಾಕ್ಯ ‘ಅರಣ್ಯ ಮತ್ತು ನಾವೀನ್ಯತೆ: ಉತ್ತಮ ವಿಶ್ವಕ್ಕಾಗಿ ಹೊಸ ಪರಿಹಾರಗಳು’ (Foresrts Innovation New: Solutions For A Better World).

    ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಜಾಗತಿಕ ಸಮಸ್ಯೆಗಳಿಗೆ ಮಾಲಿನ್ಯ ಮತ್ತು ಅರಣ್ಯ ನಾಶ ಕಾರಣವಾಗಿವೆ. ಪ್ರಕೃತಿ, ಪರಿಸರ, ವನ, ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಪರಿಸರ, ಅರಣ್ಯ ಪ್ರದೇಶ, ಸಸ್ಯ ಸಂಕುಲ, ಪ್ರಾಣಿ-ಪಕ್ಷಿ ಸಂಕುಲ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ಸಮರ್ಥವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಾವೀನ್ಯಪೂರ್ಣ ವಿಧಾನಗಳ ಅಳವಡಿಕೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ.

    | ಈಶ್ವರ ಖಂಡ್ರೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts