More

    ಭ್ರಷ್ಟ ಎಟಿಪಿಒಗೆ 5 ವರ್ಷ ಸಜೆ, 34 ಲಕ್ಷ ರೂ. ದಂಡ!

    ಮಂಗಳೂರು: ಆದಾಯ ಮೀರಿದ ಆಸ್ತಿ ಹೊಂದಿದ್ದ ಆರೋಪದಲ್ಲಿ 2007ರಲ್ಲಿ ಲೋಕಾಯುಕ್ತ ದಾಳಿಗೊಳಗಾದ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ(ಎಟಿಪಿಒ)ಬಿ.ಪಿ.ಶಿವರಾಜುಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಐದು ವರ್ಷ ಸಜೆ ಹಾಗೂ 34 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
    ಸೇವೆಗೆ ಸೇರಿದ ವರ್ಷದಿಂದ ದಾಳಿ ನಡೆದ ದಿನಾಂಕವರೆಗೆ 17 ಲಕ್ಷ ರೂ.ನಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಆರೋಪಿ ಹೊಂದಿದ್ದ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಸೋಮವಾರ ಶಿಕ್ಷೆ ಪ್ರಕಟಿಸಿದ್ದಾರೆ.

    ನ್ಯಾಯಾಧೀಶರಿಂದ 106 ಪುಟಗಳ ಸುದೀರ್ಘ ಆದೇಶ ಹೊರಬಂದಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 13 (1) (ಇ) ರ ಜೊತೆಗೆ 13(2) ರ ಅಡಿ ಅಪರಾಧ ಸಾಬೀತಾಗಿದೆ. ಆರೋಪಿ ಅಸೌಖ್ಯದ ಕಾರಣ ನೀಡಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕೆಂದು ನ್ಯಾಯಾಲಯಕ್ಕೆ ಬೇಡಿಕೆ ಸಲ್ಲಿಸಿದ್ದ. ಆದರೆ ಇದು ಭ್ರಷ್ಟಾಚಾರ ಪ್ರಕರಣವಾದ್ದರಿಂದ ಗರಿಷ್ಠ ಶಿಕ್ಷೆ ವಿಧಿಸುವಂತೆ ಸರ್ಕಾರಿ ಅಭಿಯೋಜಕರು ಕೋರಿದ್ದರು. ಸದ್ಯ ಅಪರಾಧಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್ ಇದ್ದಂತೆ. ಅಪರಾಧಿಗೆ ರಿಯಾಯಿತಿ ಸರಿಯಲ್ಲ ಎಂದು ನ್ಯಾಯಾಧೀಶ ಬಿ.ಬಿ.ಜಕಾತಿಯವರು ತಮ್ಮ ಆದೇಶದಲ್ಲಿ ತಿಳಿಸಿದ್ದು, 14 ವರ್ಷಗಳಿಂದ 17 ಲಕ್ಷ ರೂ. ಅಕ್ರಮ ಆಸ್ತಿಯನ್ನು ಅಪರಾಧಿ ಅನುಭವಿಸಿರುವುದರಿಂದ ಎರಡು ಪಟ್ಟು ದಂಡ ವಿಧಿಸುವುದು ಸೂಕ್ತ ಎಂದು ಆದೇಶಿಸಿದರು.

    ಏನಿದು ಪ್ರಕರಣ?: 2007ರ ಜುಲೈ 25ರಂದು ಪಾಲಿಕೆ ಎಟಿಪಿಒ ಶಿವರಾಜು ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಮೀರಿ ಆಸ್ತಿ ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಇನ್‌ಸ್ಪೆಕ್ಟರ್ ಪ್ರಸನ್ನ ವಿ. ರಾಜು ಮಾಹಿತಿ ಕಲೆ ಹಾಕಿದ್ದರು. ಆಗಿನ ಲೋಕಾಯುಕ್ತ ಉಪಾಧೀಕ್ಷಕರು ಮತ್ತು ಅವರ ತಂಡ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು. ಆದಾಯಕ್ಕಿಂತ 38 ಲಕ್ಷ ರೂ. ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ಆಗ ಡಿವೈಎಸ್‌ಪಿ ಆಗಿದ್ದ ಡಾ.ಪ್ರಭುದೇವ್ ಮಾಣೆ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆಯ ಪರವಾಗಿ 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿ 160 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ಸರ್ಕಾರಿ ವಿಶೇಷ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಅವರ ವಾದ ಪುರಸ್ಕರಿಸಿ, ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts