More

    ಲೋಕಸಭಾ ಚುನಾವಣೆ: ಲಕ್ಷ್ಮಣ್‌ಗೆ ಒಲಿದ ಮೈಸೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್

    ಸದೇಶ್ ಕಾರ್ಮಾಡ್ ಮೈಸೂರು
    ಪ್ರತಿ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೆಸರು ಘೋಷಣೆಯಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯೊಂದಿಗೆ ಕ್ಷೇತ್ರದ ಸ್ಪರ್ಧಾ ಕಣ ಬಹುತೇಕ ಅಂತಿಮಗೊಂಡಿದೆ.

    ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಹಾಲಿ ಸಂಸದ ಪ್ರತಾಪ್ ಅವರನ್ನು ಕೈಬಿಟ್ಟು ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು.

    ಕಾಂಗ್ರೆಸ್ ಟಿಕೆಟ್‌ಗೋಸ್ಕರ ಸಾಕಷ್ಟು ಪೈಪೋಟಿ ಎದುರಾಗಿತ್ತು. ಆದರೆ, ಅಂತಿಮವಾಗಿ ಎಂ.ಲಕ್ಷ್ಮಣ್ ಅವರ ಮೇಲೆ ಪಕ್ಷದ ಹೈಕಮಾಂಡ್ ವಿಶ್ವಾಸ ಇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಶಾಸಕ ಎಸ್.ಟಿ. ಸೋಮಶೇಖರ್, ನಟ ಡಾಲಿ ಧನಂಜಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು. ಆದರೆ, ಈ ಮೂವರು ಕಾಂಗ್ರೆಸ್ ಟಿಕೆಟ್‌ಗೋಸ್ಕರ ಅರ್ಜಿ ಸಲ್ಲಿಸಿರಲಿಲ್ಲ. ಆದರೆ, ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇ ಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಸಾಕಷ್ಟು ಪ್ರಬಲ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿ ಅಂತಿಮವಾಗಿ ಲಕ್ಷ್ಮಣ್ ಹೆಸರನ್ನು ಅಂತಿಮಗೊಳಿಸಿದರು.

    ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ದೇವರಾಜ್ ಅರಸು ಮೊಮ್ಮಗ ಸೂರಜ್ ಹೆಗ್ಡೆ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ವಕೀಲ ಚಂದ್ರಮೌಳಿ ಸೇರಿದಂತೆ ಹಲವರು ಟಿಕೆಟ್‌ಗೊ ೀಸ್ಕರ ಪೈಪೋಟಿ ನಡೆಸಿದ್ದರು.

    ಬಿಜೆಪಿ ಅಭ್ಯರ್ಥಿ ಘೋಷಣೆಗೂ ಮುನ್ನ ಕೆಪಿಸಿಸಿಗೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ 14 ಆಕಾಂಕ್ಷಿಗಳ ಪೈಕಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ವಕೀಲ ಚಂದ್ರಮೌಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಹೆಸರನ್ನು ಅಂತಿಮ ಸುತ್ತಿಗೆ ಪರಿಗಣಿಸಲಾಗಿತ್ತು. ಆದರೆ, ಬಿಜೆಪಿಯು ದಿಢೀರಾಗಿ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಿದ ನಂತರ ರಾಜಕೀಯ ಚಿತ್ರಣ ಬದಲಾಗಿದೆ. ಪ್ರತಾಪ್ ಸಿಂಹ ಅವರನ್ನು ಎದುರಿಸಲು ಕಾಂಗ್ರೆಸ್ ಹಾಗೂ ಎಂ.ಲಕ್ಷ್ಮಣ್ ಸಜ್ಜುಗೊಂಡಿದ್ದರು. ಆದರೆ, ಇದೀಗ ಯದುವೀರ್ ಅವರನ್ನು ಎದುರಿಸಲು ಕಾಂಗ್ರೆಸ್ ತನ್ನ ಚುನಾವಣಾ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

    ಪ್ರತಿ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತದೆ. ಕಳೆದ ಎರಡು ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇದ್ದರೂ ಜೆಡಿಎಸ್ ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಅವರನ್ನು ಬೆಂಬಲಿಸಿದ್ದರು. ಪ್ರತಾಪ್ ಸಿಂಹ ಗೆಲುವಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಬಾರಿ ಯದುವೀರ್ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ (ಎನ್‌ಡಿಎ) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಯದುವೀರ್‌ಗೆ ಎರಡೂ ಪಕ್ಷಗಳ ಬೆಂಬಲ ನೇರವಾಗಿ ದೊರೆಯುತ್ತದೆ. ಅಲ್ಲದೆ, ಮೈಸೂರು ರಾಜಮನೆತನದ ಹಿನ್ನೆಲೆ ಕೂಡ ಅವರಿಗೆ ಇದೆ.

    ಬಿಜೆಪಿ ಅಭ್ಯರ್ಥಿ ಯದುವೀರ್‌ಗೆ ಇಷ್ಟೆಲ್ಲ ಬೆಂಬಲ ಇದ್ದರೂ ಅವರ ಗೆಲುವು ಸುಲಭವೇನು ಅಲ್ಲ. ವಿಧಾನಸಭೆ ಚುನಾವಣೆಯ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಾಗಿದ್ದು, ಈ ಕ್ಷೇತ್ರದ ಗೆಲುವಿಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸುತ್ತಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳು ಇವೆ. ಈ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ 2018ರ ವಿಧಾನಸಭಾ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ. 2018ರಲ್ಲಿ ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 2023ರಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು 5 ಕ್ಷೇತ್ರಗಳಿಗೆ ವಿಸ್ತರಿಸಿಕೊಂ ಡಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯನ್ನು ನಿರೀಕ್ಷಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts