More

    ಲೋಕ ಸಮರ 2024: ಸಕ್ಕರೆ ನಾಡಲ್ಲಿ ನಿಖಿಲ್​ ಸ್ಪರ್ಧೆ ಫಿಕ್ಸಾ? ಅಖಾಡಕ್ಕೆ ರಮ್ಯಾ? ಸುಮಲತಾ ಕಥೆ ಏನು?

    ಮಂಡ್ಯ ಎಂದರೆ ಇಂಡಿಯಾದೆಲ್ಲೆಡೆ ಸದ್ದು ಜೋರಾಗಿರುತ್ತದೆ. ಅದರಲ್ಲಿಯೂ ರಾಜಕೀಯ ವಿಷಯಕ್ಕೆ ಬಂದರೆ ವರ್ಣರಂಜಿತ, ಊಹೆಗೂ ಮೀರಿದ ಫಲಿತಾಂಶಕ್ಕೆ ಹೆಸರುವಾಸಿಯಾಗಿರುವ ಜಿಲ್ಲೆಯಾಗಿದೆ. ಗ್ರಾಮ ಪಂಚಾಯಿತಿ ಹಿಡಿದು ಲೋಕಸಭೆ ಚುನಾವಣೆವರೆಗೂ ಜಿದ್ದಾಜಿದ್ದಿ ಕದನ ನಡೆಯುತ್ತದೆ.ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠೆಯ ಮೇಲಾಟ ಜೋರಾಗಿದೆ. ಅದರಲ್ಲೂ ಘಟಾನುಘಟಿ ರಾಜಕಾರಣಿಗಳಿಗೂ ಸೋಲಿನ ರುಚಿ ತೋರಿಸಿರುವ ಉದಾಹರಣೆ ಸಾಕಷ್ಟಿವೆ. ಈಗಾಗಲೇ 20 ಲೋಕಸಭಾ ಚುನಾವಣೆಗಳನ್ನು ಕಂಡಿರುವ ಜಿಲ್ಲೆಯ ಜನರು ಮತ್ತೊಂದು ಚುನಾವಣೆಯಲ್ಲಿ ರಾಜಕಾರಣಿಗಳ ಹಣೆಬರಹ ಬರೆಯಲು ಸಜ್ಜಾಗುತ್ತಿದ್ದಾರೆ.

    ಮಂಡ್ಯ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
    * ಮಂಡ್ಯ
    * ಮದ್ದೂರು
    * ಕೆ.ಆರ್.ಪೇಟೆ
    * ಶ್ರೀರಂಗಪಟ್ಟಣ
    * ಮಳವಳ್ಳಿ
    * ಮೇಲುಕೋಟೆ
    * ನಾಗಮಂಗಲ
    * ಕೆ.ಆರ್.ನಗರ

    ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು
    * ಮಂಡ್ಯ -ರವಿಕುಮಾರ್ ಗಣಿಗ(ಕಾಂಗ್ರೆಸ್)
    * ನಾಗಮಂಗಲ -ಎನ್.ಚಲುವರಾಯಸ್ವಾಮಿ(ಕಾಂಗ್ರೆಸ್)
    * ಮದ್ದೂರು -ಕೆ.ಎಂ.ಉದಯ್(ಕಾಂಗ್ರೆಸ್)
    * ಮಳವಳ್ಳಿ -ಪಿ.ಎಂ.ನರೇಂದ್ರಸ್ವಾಮಿ(ಕಾಂಗ್ರೆಸ್)
    * ಶ್ರೀರಂಗಪಟ್ಟಣ -ರಮೇಶ ಬಂಡಿಸಿದ್ದೇಗೌಡ(ಕಾಂಗ್ರೆಸ್)
    * ಮೇಲುಕೋಟೆ -ದರ್ಶನ್ ಪುಟ್ಟಣ್ಣಯ್ಯ(ಸರ್ವೋದಯ ಕರ್ನಾಟಕ ಪಕ್ಷ ಮತ್ತು ಕಾಂಗ್ರೆಸ್ ಬೆಂಬಲಿತ)
    * ಕೆ.ಆರ್.ಪೇಟೆ -ಎಚ್.ಟಿ.ಮಂಜು (ಜೆಡಿಎಸ್)
    * ಕೆ.ಆರ್.ನಗರ -ರವಿಶಂಕರ್ (ಕಾಂಗ್ರೆಸ್)

    ಲೋಕಸಭಾ ಕ್ಷೇತ್ರದ ಜಾತಿವಾರು ಲೆಕ್ಕಚಾರ
    * ಪ್ರಾಬಲ್ಯ- ಒಕ್ಕಲಿಗರು
    * ಒಕ್ಕಲಿಗರು-7,89,420
    * ದಲಿತರು – 3,03,601
    * ಲಿಂಗಾಯತರು-1,61,436
    * ಕುರುಬರು- 1,71,854
    * ವಿಶ್ವಕರ್ಮ- 31,550
    * ಮುಸ್ಲಿಮರು- 1,29,154
    * ಕ್ರೈಸ್ತರು- 26,623
    * ಬ್ರಾಹ್ಮಣರು- 24,915
    * ಬೆಸ್ತರು- 56,219
    * ಇತರೆ- 55,012
    * ಒಟ್ಟು- 17,49,388

    ಕಳೆದ 4 ಲೋಕಸಭಾ ಕ್ಷೇತ್ರದ ಲೆಕ್ಕಚಾರ
    2009ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಂಬರೀಷ್, ಜೆಡಿಎಸ್‌ನಿಂದ ಎನ್.ಚಲುವರಾಯಸ್ವಾಮಿ ಮತ್ತು ಬಿಜೆಪಿಯಿಂದ ಎಲ್.ಆರ್.ಶಿವರಾಮೇಗೌಡ ಸ್ಪರ್ಧೆ ಮಾಡಿದ್ದರು. ಅಂತಿಮವಾಗಿ 23,500 ಮತಗಳ ಅಂತರದಿಂದ ಚಲುವರಾಯಸ್ವಾಮಿ ಗೆಲುವು ಸಾಧಿಸಿದ್ದರು. ಚಲುವರಾಯಸ್ವಾಮಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 2013ರ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು, ಕಾಂಗ್ರೆಸ್‌ನಿಂದ ರಮ್ಯಾ ನಡುವೆ ನೇರ ಹಣಾಹಣಿ ನಡೆಯಿತು. ರಮ್ಯಾ 67,611 ಮತಗಳ ಅಂತರ ಗೆದ್ದು ಲೋಕಸಭೆ ಪ್ರವೇಶ ಮಾಡಿದರು. ಗೆದ್ದ ಹಾಗೂ ಸೋತ ಇಬ್ಬರು ಅಭ್ಯರ್ಥಿಗಳಿಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಗಳಿಸಿದ ಮೊದಲ ಚುನಾವಣೆ ಎನ್ನುವ ವಿಶೇಷತೆ ಹೊಂದಿದೆ.

    ಇನ್ನು 2014ರಲ್ಲಿ ಮತ್ತೆ ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು, ಕಾಂಗ್ರೆಸ್‌ನಿಂದ ರಮ್ಯಾ ಅಖಾಡಕ್ಕಿಳಿಯುತ್ತಾರೆ. ಕೇವಲ 5518 ಮತಗಳಿಂದ ಸಿ.ಎಸ್.ಪುಟ್ಟರಾಜು ಗೆಲುವು ಸಾಧಿಸಿದರು. 2019ರ ಚುನಾವಣೆ ದೇಶದ ಗಮನ ಸೆಳೆಯುತ್ತದೆ. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಹಾಗೂ ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಸ್ಫರ್ಧೆ ಮಾಡಿದರು. ತೀವ್ರ ಜಿದ್ದಾಜಿದ್ದಿನ ಚುನಾವಣೆಯಲ್ಲಿ 1,25,876 ಮತಗಳ ಅಂತರದಲ್ಲಿ ಸುಮಲತಾ ಗೆಲುವು ದಾಖಲಿಸಿದರು.

    ಪಕ್ಷೇತರ ಸಂಸದೆ ಅತಂತ್ರ ಸ್ಥಿತಿ!
    2019ರ ಮಂಡ್ಯ ಲೋಕಸಭಾ ಚುನಾವಣೆ ರಾಜ್ಯ ಮಾತ್ರವಲ್ಲದೆ ದೇಶವನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು. ಕಾರಣ, ಪಕ್ಷೇತರ ಅಭ್ಯರ್ಥಿ ಹಾಗೂ ಜೆಡಿಎಸ್‌ನ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ನಡುವಿನ ಸ್ಪರ್ಧೆ. ನಟ, ಮಾಜಿ ಸಚಿವ ದಿವಂಗತ ಅಂಬರೀಷ್ ನಿಧನದ ಬಳಿಕ ಎದುರಾದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಎನ್ನುವಂತೆ ಅವರ ಪತ್ನಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸಿದರು. ಪ್ರಾರಂಭದಲ್ಲಿ ಅಷ್ಟೊಂದು ಮಹತ್ವ ಪಡೆದುಕೊಳ್ಳದಿದ್ದರೂ ಜೆಡಿಎಸ್‌ನವರ ಅನಗತ್ಯ ಮಾತು, ಅನುಕಂಪದ ಅಲೆಯಿಂದ ಚುನಾವಣೆ ನಿರೀಕ್ಷೆಗೂ ಮೀರಿದ ಕಾವು ಪಡೆದುಕೊಂಡಿತ್ತು. ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರದ ಸಿಎಂ ಆಗಿ ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಕ್ಷೇತ್ರದಲ್ಲಿ ಮೂವರು ಸಚಿವರು, ಐವರು ಶಾಸಕರು, ಮೂವರು ಎಂಎಲ್‌ಸಿಗಳು ಜೆಡಿಎಸ್‌ನವರಿದ್ದರು. ಇದಲ್ಲದೆ ಘಟಾನುಘಟಿ ನಾಯಕರು ನಿಖಿಲ್ ಪರ ಪ್ರಚಾರ ನಡೆಸಿದರು. ದಳಪತಿಗಳ ಅನಗತ್ಯ ಟೀಕೆಗಳು ಪಕ್ಷೇತರ ಅಭ್ಯರ್ಥಿಗೆ ವರದಾನವಾಗಿದ್ದವು. ಕಾಂಗ್ರೆಸ್‌ನ ಪರೋಕ್ಷ ಬೆಂಬಲ, ಬಿಜೆಪಿಯ ನೇರ ಸಹಕಾರದಿಂದ ಪಕ್ಷೇತರ ಅಭ್ಯರ್ಥಿ 1,25,876 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದರು.

    ಜಿಲ್ಲೆಗೆ ಅಪರೂಪದ ಅತಿಥಿಯಾಗಿರುವ ಸಂಸದೆ, ಕೆಲ ತಿಂಗಳ ಹಿಂದೆಯಷ್ಟೇ ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದರು. ಅದರಂತೆ ಈ ಬಾರಿ ಪಕ್ಷದಿಂದ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದರು. ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿರುವುದರಿಂದ ಸಂಸದೆ ಸ್ಪರ್ಧೆಗೆ ಅಡ್ಡಿಯಾಗಿದೆ. ಮಂಡ್ಯ ಜಿಲ್ಲೆಯನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದು ಬಹುತೇಕ ಖಚಿತವಾಗಿರುವುದರಿಂದ ಸಂಸದೆ ಅತಂತ್ರರಾಗಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಬಾಗಿಲು ತಟ್ಟುವ ಪ್ರಯತ್ನವೂ ನಡೆಯುತ್ತಿದೆ ಎನ್ನುವ ಮಾತುಗಳಿದೆ. ಒಂದು ವೇಳೆ ಅವಕಾಶ ಸಿಗದಿದ್ದರೆ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿವೆ.

    ಮಂಡ್ಯದಲ್ಲಿ ಅಸ್ಥಿತ್ವ ಉಳಿಸಿಕೊಳ್ಳಲು ಜೆಡಿಎಸ್ ಪರದಾಟ!
    2018ರ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್, ನಂತರದ ದಿನಗಳಲ್ಲಿ ಅಸ್ಥಿತ್ವವನ್ನು ಕಳೆದುಕೊಳ್ಳಲಾರಂಭಿಸಿತು. ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡಿದರೂ, ಏಳು ಜನರ ನಡುವೆ ಹೊಂದಾಣಿಕೆ ಸಮಸ್ಯೆ ಎದುರಾಯಿತು. ಪರಿಣಾಮ ಲೋಕಸಭೆ, ಎಂಎಲ್‌ಸಿ ಚುನಾವಣೆಯಲ್ಲಿ ಸೋಲು ಕಾಣುವಂತಾಯಿತು. ಇದಾದ ಕೆಲ ತಿಂಗಳಲ್ಲಿ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಜೆಡಿಎಸ್ ಬಿಟ್ಟು ಕಮಲ ಪಾಳಯ ಸೇರಿಕೊಂಡರು. ಈ ಸಮಯದಲ್ಲಿ ಎದುರಾದ ಉಪಚುನಾವಣೆಯಲ್ಲಿಯೂ ದಳಕ್ಕೆ ಪೆಟ್ಟು ಬಿದ್ದಿತು. ಬಳಿಕ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿತು. ಈ ನಡುವೆ ಮೈತ್ರಿ ಸರ್ಕಾರವೂ ಪತನಗೊಂಡಿತು.

    ನಾಯಕತ್ವ ಕೊರತೆ, ಒಳಜಗಳ, ಮುಸುಕಿನ ಗುದ್ದಾಟದಿಂದ ನಲುಗಿದ ಜೆಡಿಎಸ್ ನಾಯಕರು, ಮತ್ತೆ ಎಚ್ಚೆತ್ತುಕೊಳ್ಳುವ ಆಸಕ್ತಿ ತೋರಲಿಲ್ಲ. ಪರಿಣಾಮ 2023ರ ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರವನ್ನು ಕಳೆದುಕೊಂಡು ಕೆ.ಆರ್.ಪೇಟೆಯಲ್ಲಿ ಮಾತ್ರ ಗೆಲುವು ಕಂಡಿತು. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ದಳಕ್ಕೆ ಅನಿವಾರ್ಯವಾಗಿದೆ. ಈಗಾಗಲೇ ಮೈತ್ರಿಯಲ್ಲಿ ಆಗಿರುವ ಮಾತುಕತೆಯಂತೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಖಚಿತವಾಗಿರುವುದರಿಂದ ದಳಪತಿಗಳು ನಿರಂತರ ಸಭೆ ಮಾಡುತ್ತಿದ್ದಾರೆ. ಆದಾಗ್ಯೂ ಅಭ್ಯರ್ಥಿ ಯಾರೆನ್ನುವ ಗುಟ್ಟು ಬಿಟ್ಟುಕೊಡುತ್ತಿಲ್ಲ.

    ಇಂದಿಗೂ ಪಕ್ಷದೊಳಗೆ ಅಸಮಾಧಾನ, ಅತೃಪ್ತಿಯ ಮಾತುಗಳಿವೆ. ಆದರೂ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಹೆಸರು ಸ್ಪರ್ಧಾಕಾಂಕ್ಷಿಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಈ ನಡುವೆ ಮಾಜಿ ಶಾಸಕರೆಲ್ಲರೂ ಸಭೆ ಮಾಡಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಖಾಡ ಪ್ರವೇಶ ಮಾಡುವರು ಯಾರು ಅನ್ನೋದು ಯಕ್ಷ ಪ್ರಶ್ನೇಯಾಗಿದೆ.

    ಗೆಲುವಿನ ಉಮ್ಮಸ್ಸಿನಲ್ಲಿ ಕೈ ಪಾಳಯ
    2018ರ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಫಿನಿಕ್ಸ್ ಪಕ್ಷಿಯಂತೆ ಎಂದು ಬಂದ ಕಾಂಗ್ರೆಸ್ ಪಕ್ಷ 2023ರ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದೆ. ಜೆಡಿಎಸ್ ಅಸ್ಥಿತ್ವಕ್ಕೆ ಧಕ್ಕೆ ತರಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಯೂ ಎಚ್ಚರಿಕೆಯಿಂದ ನಡೆಯುತ್ತಿದೆ. ಜೆಡಿಎಸ್‌ನಿಂದ ಯಾರು ಕಣಕ್ಕಿಳಿಯುತ್ತಾರೆನ್ನುವುದನ್ನು ಖಚಿತಪಡಿಸಿಕೊಂಡು ಮುಂದಿನ ನಡೆ ಅನುಸರಿಸಲು ಸಜ್ಜಾಗುತ್ತಿದ್ದಾರೆ. ಪಕ್ಷದಿಂದ ಕಣಕ್ಕಿಳಿಯಲು ಆಕಾಂಕ್ಷಿತರ ದಂಡೇ ಇದ್ದರೂ, ಗೆಲುವಿನ ಅಭ್ಯರ್ಥಿಗಾಗಿ ಹುಡುಕಾಟ ಜೋರಾಗಿದೆ.

    ಮತ್ತೆ ಲೋಕ ಕಣಕ್ಕೆ ಇಳಿಯುತ್ತಾರಾ ರಮ್ಯಾ!?
    ನಟಿ, ಮಾಜಿ ಸಂಸದೆ ರಮ್ಯಾ ಹೆಸರು ಕೂಡ ಮುಂಚೂಣೆಯಲ್ಲಿದೆ. ಆದರೆ, ರಮ್ಯಾ ಸ್ಫರ್ಧೆ ಇನ್ಣೂ ಖಚಿತವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವಂತೆ ಆಹ್ವಾನ ಬಂದರೂ ಕೂಡ ಅದನ್ನು ತಿರಸ್ಕರಿಸಿ ಕೆಲವು ಕ್ಷೇತ್ರಗಳಲ್ಲಿ ಭರ್ಜರಿ ಚುನಾವಣಾ ಪ್ರಚಾರ ಮಾಡಿದರು. ಒಂದು ವೇಳೆ ಮೈತ್ರಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯರ ಸ್ಫರ್ಧೆ ಖಚಿತವಾದ್ರೆ, ಕಾಂಗ್ರೆಸ್ ಪಕ್ಷದಿಂದ ರಮ್ಯಾ ಸ್ಫರ್ಧೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

    ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ವಿವರ
    Table

    ಮೈತ್ರಿ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳು
    * ಸಿ.ಎಸ್.ಪುಟ್ಟರಾಜು
    * ಎಚ್.ಡಿ.ಕುಮಾರಸ್ವಾಮಿ
    * ನಿಖಿಲ್ ಕುಮಾರಸ್ವಾಮಿ

    ಕಾಂಗ್ರೆಸ್​ ವಲಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳು
    * ರಮ್ಯಾ
    * ಉದ್ಯಮಿ ಚಂದ್ರಶೇಖರ್
    * ಮಧು ಮಾದೇಗೌಡ

    ಕ್ಷೇತ್ರದಲ್ಲಿ ಜೆಡಿಎಸ್ ಪ್ಲಸ್
    * ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರ ಬೇಸರ
    * ಸತತ ಚುನಾವಣೆಯಲ್ಲಿ ಸೋಲು ಕಂಡಿರುವುದರಿಂದ ಅನುಕಂಪ
    * ಬಿಜೆಪಿ ಮತಗಳ ಬೆಂಬಲ

    ಕ್ಷೇತ್ರದಲ್ಲಿ ಜೆಡಿಎಸ್ ಮೈನಸ್
    * ನಾಯಕರ ಹೊಂದಾಣಿಕೆ ಸಮಸ್ಯೆ, ಶೀತಲ ಸಮರ
    * ಮೈತ್ರಿಯ ನಡುವೆಯೂ ಬಿಜೆಪಿ ಒಳೇಟಿನ ಭೀತಿ
    * ಸತತ ಐದು ಚುನಾವಣೆಯಲ್ಲಿ ಎದುರಾಗಿರುವ ಸೋಲು
    * ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಸಮುದಾಯದ ಬೆಂಬಲ ಸಿಗುವುದು ಅನುಮಾನ

    ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ಲಸ್
    * ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು
    * ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಶಾಸಕರು ಇರುವುದು
    * ಜಿಲ್ಲೆಯಲ್ಲಿ ನಡೆದ ಸತತ ಚುನಾವಣೆಗಳ ಗೆಲುವು ಸಾಧಿಸಿರುವುದು

    ಕ್ಷೇತ್ರದಲ್ಲಿ ಕಾಂಗ್ರೆಸ್ ಮೈನಸ್
    * ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ, ನರೇಂದ್ರ ಮೋದಿ ಅವರ ವರ್ಚಸ್ಸು
    * ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪದಿರುವುದು
    * ಶ್ರೀರಾಮಮಂದಿರ ಕುರಿತು ಅನಗತ್ಯ ಹೇಳಿಕೆ
    * ಸರ್ಕಾರದಲ್ಲಿ ಒಕ್ಕಲಿಗರ ಕಡೆಗಣನೆ

    ಒಟ್ಟಿನಲ್ಲಿ ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದ್ದು, ಕಳೆದ ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ತಿರುವು ಪಡೆದುಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿವೆ.

    ಲೋಕಸಭಾ ಚುನಾವಣೆ 2024: ಬೊಮ್ಮಾಯಿ ಸ್ಪರ್ಧೆ ಫಿಕ್ಸಾ? ಯಾರಿಗೆ ‘ಕೈ’ ಟಿಕೆಟ್​? ಯಾರೆಲ್ಲ ಆಕಾಂಕ್ಷಿಗಳಿದ್ದಾರೆ?

    ಲೋಕಸಭಾ ಸಮರ 2024: ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ BJP, ಹೊಸ ಪ್ರಯೋಗಕ್ಕೆ ಮುಂದಾಗುತ್ತಾ ಕಮಲ ಪಡೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts