More

    ಲೋಕಸಭಾ ಉಪಚುನಾವಣೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧ

    ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿ ಕಳೆದ ಚುನಾವಣೆಗಿಂತ 35 ಸಾವಿರ ಮತದಾರರು ಅಧಿಕವಾಗಿದ್ದಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ‘ವಿಜಯವಾಣಿ’ ಜತೆ ಮಾತನಾಡಿ ಅವರು, 2 ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ 17.71 ಲಕ್ಷ ಮತದಾರರಿದ್ದರು, ಈ ಚುನಾವಣೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಯುವ ಮತದಾರರು ಸೇರಿ 18.07 ಲಕ್ಷ ಮತದಾರರು ಹಕ್ಕು ಹೊಂದಿದ್ದಾರೆ ಎಂದರು.

    ಹೆಚ್ಚುವರಿ ಮತಗಟ್ಟೆ ಸ್ಥಾಪನೆ: ಎಲ್ಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ಕಾರ್ಯ ನಿರ್ವಹಿಸಲು ಸುಮಾರು 13 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. 8 ವಿಧಾನಸಭಾ ಕ್ಷೇತ್ರ ಸೇರಿ 2,064 ಪ್ರಮುಖ ಮತಗಟ್ಟೆಗಳಿದ್ದು, ಹೆಚ್ಚುವರಿ 502 ಮತಗಟ್ಟೆ ಸೇರಿ 2,566 ಮತಗಟ್ಟೆ ಸ್ಥಾಪಿಸಲಾಗಿದೆ. ಕೋವಿಡ್ ಸೋಂಕು ಉಲ್ಬಣಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮತ್ತು ಕೋವಿಡ್ ನಿಯಮ ಪಾಲಿಸುವುದಕ್ಕಾಗಿ (ಪ್ರತಿ ಸಾವಿರ ಮತದಾರರಿಗೆ 1 ಮತಗಟ್ಟೆ) ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

    159 ಸೆಕ್ಟರ್ ಆಫೀಸರ್ಸ್, 24 ಫ್ಲೈಯಿಂಗ್ ಸ್ಕ್ವಾಡ್ ತಂಡ, 27 ಸ್ಟಾೃಟಿಕ್ ಸರ್ವೆಲೆನ್ಸ್ ತಂಡ, 24 ವಿಡಿಯೋ ಸರ್ವೆಲೆನ್ಸ್ ತಂಡ, 8 ವಿಡಿಯೋ ವಿಂಗ್ ಟೀಮ್, 8 ಜನರ ಮಾದರಿ ನೀತಿ ಸಂಹಿತೆ ತಂಡ, 8 ಸಹಾಯಕ ಚುನಾವಣೆ ಲೆಕ್ಕ ವೀಕ್ಷಕರು, ಮತದಾನ ದಿನದಂದು ಮೇಲ್ವಿಚಾರಣೆಗಾಗಿ 8 ಜನರನ್ನು ನೇಮಿಸಲಾಗಿದೆ.

    12 ನೋಡಲ್ ಅಧಿಕಾರಿಗಳ ನೇಮಕ: ಬೆಳಗಾವಿ ಉಪಚುನಾವಣೆ ಹಿನ್ನಲೆಯಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರಗಳ ನಿರ್ವಹಣೆ (ಇವಿಎಂ), ಅಬಕಾರಿ, ಮಾದರಿ ನೀತಿ ಸಂಹಿತೆ, ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ವಿಭಾಗ ಸೇರಿದಂತೆ ವಿವಿಧ 12 ವಿಭಾಗಗಳಿಗೆ 12 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 27 ಕಡೆ ದಿನದ 24 ತಾಸು ತಪಾಸಣೆ ಮಾಡುವ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಿರೇಮಠ ತಿಳಿಸಿದರು.

    5 ಸಾವಿರ ಪೊಲೀಸರ ನಿಯೋಜನೆ

    ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಜಿಲ್ಲಾದ್ಯಂತ ಸ್ಥಾಪಿಸಿರುವ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಮಾಡಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. 5 ವಿಧಾನಸಭಾ ಕ್ಷೇತ್ರಗಳು (ಅರಭಾವಿ, ಗೋಕಾಕ, ಬೈಲಹೊಂಗಲ, ರಾಮದುರ್ಗ, ಸವದತ್ತಿ,) ಸೇರಿ 3000 ಪೊಲೀಸ್ ಸಿಬ್ಬಂದಿ ಹಾಗೂ ಬೆಳಗಾವಿ ನಗರ, ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ಮತಕ್ಷೇತ್ರ ಸೇರಿ 2000 ಪೊಲೀಸ್ ಸಿಬ್ಬಂದಿ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts