More

    ಜು.8ರಂದು ಎಲ್ಲ ಕೋರ್ಟ್‌ಗಳಲ್ಲಿ ಲೋಕ ಅದಾಲತ್: ನ್ಯಾಯಾಧೀಶ ಮಂಜುನಾಥ ನಾಯಕ್

    ಶಿವಮೊಗ್ಗ: ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಅನ್ನು ಜು.8ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ತಿಳಿಸಿದರು.

    ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಕೇಸ್, ಚೆಕ್‌ಬೌನ್ಸ್ ಸೇರಿ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ನ್ಯಾಯಾಲಯದಲ್ಲಿ ದಾಖಲಾಗದಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಜಿಲ್ಲೆಯಲ್ಲಿ ಹಾಲಿ ದಾಖಲಾಗಿರುವ 53,409 ಪ್ರಕರಣಗಳಲ್ಲಿ 12,845 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿದೆ. ಜತೆಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಳೆದ ಬಾರಿ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ದಾಖಲಾಗದಿರುವ(ಪಿಎಲ್‌ಸಿ) 70 ಸಾವಿರ ಕೇಸ್‌ಗಳು ಹಾಗೂ ನ್ಯಾಯಾಲಯದಲ್ಲಿ ನೋಂದಣಿಯಾಗಿದ್ದ 8,172 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು ಎಂದು ಹೇಳಿದರು.
    ವಿಶೇಷವಾಗಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಸಾಲ ವಸೂಲಾತಿ ಪ್ರಕರಣಗಳು, ವಿದ್ಯುತ್ಛಕ್ತಿ, ಜಲಮಂಡಳಿ, ನ್ಯಾಯಾಲಯಕ್ಕೆ ಬರಬಹುದಾದಂತಹ ಇತರ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಉಭಯ ಕಕ್ಷಿದಾರರನ್ನು ಕರೆಸಿ, ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಗೊಳಿಸಲಾಗುವುದು. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಅವರ ಸಮಯ ಉಳಿತಾಯವಾಗಲಿದೆ. ಅಲ್ಲದೇ ಶೀಘ್ರ ನ್ಯಾಯದಾನವಾಗಲಿದೆ ಎಂದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ ಇದ್ದರು.
    ಶೇ.50 ರಿಯಾಯಿತಿ: ರಾಜ್ಯದಲ್ಲಿ ಪೊಲೀಸ್ ಇಲಾಖೆ 2023ರ ಫೆ.11ರೊಳಗೆ ಸಂಚಾರ್ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಲಿದ್ದಾರೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ 1,04,326 ಪ್ರಕರಣಗಳಲ್ಲಿ 3.84 ಕೋಟಿ ರೂ. ಬಾಕಿ ಇರುವ ಕಾರಣ ಸದರಿ ರಿಯಾಯಿತಿಯಲ್ಲಿ ವಾಹನ ಚಾಲಕರು ದಂಡ ಪಾವತಿಸುವಂತೆ ಮಂಜುನಾಥ ನಾಯಕ್ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts