More

    ಮಿಡತೆ ಹಾವಳಿಯ ಭಯ ಬೇಡ: ರಾಜ್ಯದ ಕೃಷಿಕರಿಗೆ ಸಚಿವ ಪಾಟೀಲ್ ಅಭಯ

    ಬೆಂಗಳೂರು: ಕೃಷಿಕರನ್ನು ಈಗ ಮಿಡತೆಗಳು ಕಂಗೆಡಿಸಿಬಿಟ್ಟಿವೆ. ದೇಶದ ಅನೇಕ ಭಾಗಗಳಲ್ಲಿ ಕಾಣಿಸಿಕೊಂಡಿರುವ ಈ ಮಿಡಿತೆಗಳು ಕರ್ನಾಟಕಕ್ಕೂ ಕಾಲಿಡುವ ಭಯ ಎಲ್ಲರನ್ನೂ ಕಾಡುತ್ತಿದೆ. ಇದೇ ವೇಳೆ, ಕೋಲಾರದಲ್ಲಿಯೂ ಮಿಡತೆ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್​ ಅವರು, ಕೋಲಾರದಲ್ಲಿ ಕಂಡುಬಂದಿರುವುದು ಸಾಮಾನ್ಯ ಎಕ್ಕೆಗಿಡದ ಮಿಡತೆಯಾಗಿದ್ದು, ದಾಳಿ ನಡೆಸಿರುವ ಮಿಡತೆಗೂ ಇದಕ್ಕೂ ಸಂಬಂಧವಿಲ್ಲ. ಕರ್ನಾಟಕಕ್ಕೆ ಈ ಮಿಡತೆ ಹಾವಳಿ ಸಾಧ್ಯತೆ ತೀರಾ ಕಡಿಮೆಯಿದ್ದು, ರೈತರು ಯಾವುದೇ ಕಾರಣಕ್ಕೂ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.

    ಮಧ್ಯಪ್ರದೇಶ, ಮಹಾರಾಷ್ಟ್ರ ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳಲ್ಲಿ ರೈತರನ್ನು ಬಾಧಿಸಿರುವ ಮಿಡತೆ ಹಾವಳಿ ರಾಜ್ಯಕ್ಕೆ ಬಾಧಿಸದಂತೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳ ಕುರಿತು ಬಿ.ಸಿ.ಪಾಟೀಲ್​ ಅವರು ವಿಕಾಸಸೌಧದಲ್ಲಿ ಕೃಷಿ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಕೀಟಶಾಸ್ತ್ರಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ದರ್ಶನ ನೀಡಲು ಪ್ರಾರಂಭಿಸಿದ ಮಲೆ ಮಹದೇಶ್ವರ ಸ್ವಾಮಿ; ಭಕ್ತರು ಸೇವೆಯನ್ನೂ ಸಲ್ಲಿಸಬಹುದು…

    ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ಈ ಮಿಡತೆಗಳು ಗಾಳಿಯನ್ನು ಅವಲಂಬಿಸಿದೆ. ಗಾಳಿಯ ದಿಕ್ಕು ಬದಲಾದಂತೆ ಮಿಡತೆಗಳ ಪ್ರಯಾಣ ಕೂಡ ಬದಲಾಗುತ್ತದೆ. ಆದ್ದರಿಂದ ರಾಜ್ಯಕ್ಕೆ ಇವುಗಳ ಹಾವಳಿ ಕಡಿಮೆ. ಮೇ.26ರಿಂದ ದಕ್ಷಿಣಾಭಿಮುಖವಾಗಿ ಗಾಳಿ ಬೀಸುತ್ತಿದ್ದು, ಮೇ 30ರ ಹೊತ್ತಿಗೆ ಅದರ ದಿಕ್ಕು ಬದಲಾಗುವ ಸಾಧ್ಯತೆಯಿದೆ. ಬೀದರ್ ಗಡಿಯಿಂದ ಮಿಡತೆಗಳು ಸುಮಾರು 450 ಕಿ.ಮೀ.ದೂರದಲ್ಲಿರುವುದರಿಂದ ರಾಜ್ಯ ಮುಟ್ಟುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ ಎಂದರು.

    ಒಂದು ವೇಳೆ ಗಾಳಿಯ ದಿಕ್ಕು ಬದಲಾಗದೇ ರಾಜ್ಯಕ್ಕೆ ಮಿಡತೆಗಳು ಬಂದುಬಿಟ್ಟರೆ ಏನೆಲ್ಲಾ ಮಾಡಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
    ರೈತರು ತಮ್ಮ ಜಮೀನುಗಳಲ್ಲಿ ಮಿಡತೆ ಕಂಡುಬಂದಲ್ಲಿ ಶಬ್ದ ಮಾಡುವ ಮೂಲಕ ದೂರ ಓಡಿಸಬಹುದು. ಬೆಳೆಗಳ ರಕ್ಷಣೆಗೆ ಬೇವು ಆಧಾರಿತ ಕೀಟನಾಶಕಗಳನ್ನು ರೈತರೇ ಸಿಂಪಡಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಈ ಮಿಡತೆಗಳು ಸಾಮಾನ್ಯವಾಗಿ ಸಂಜೆ ವೇಳೆಗೆ ಮರ ಗಿಡಗಳ ಮೇಲೆ ಕೂರುವ ಕಾರಣ, ಆ ಸಮಯದಲ್ಲಿ ಇವುಗಳ ಹತೋಟಿಗಾಗಿ ಕ್ಲೋರೋಫೈರಿಫಾಸ್ ಅಥವಾ ಲಾಮ್ಡಾಸಿಹಲೋತ್ರಿನ್ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ಸಿಂಪಡಣೆ ಮಾಡುವ ಅಗತ್ಯವಿದೆ. ಆದ್ದರಿಂದ ಸಿಂಪಡಣಾ ವ್ಯವಸ್ಥೆಗಾಗಿ ಫೈರ್ ಇಂಜಿನ್ಸ್, ಟ್ರ್ಯಾಕ್ಟರ್ ಚಾಲಿತ ಸ್ಪ್ರೇಯರ್​ಗಳು ಹಾಗೂ ಡ್ರೋನ್​ಗಳನ್ನು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ಮಹಾರಾಷ್ಟ್ರದ ಕೃಷಿ ಆಯುಕ್ತರೊಂದಿಗೆ ಕರ್ನಾಟಕದ ಕೃಷಿ ಆಯುಕ್ತರು ಗಂಟೆಗೊಮ್ಮೆ ಮಿಡತೆಗಳ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ನಿರ್ವಹಣಾ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.

    ಇದನ್ನೂ ಓದಿ: ಕರೊನಾ ಸೋಂಕು: ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಆಸ್ಪತ್ರೆಗೆ

    ಮುಂಜಾಗ್ರತಾ ಕ್ರಮವಾಗಿ ರಾಜ್ಯಮಟ್ಟದಲ್ಲಿ ಕೃಷಿ ಮತ್ತು ತೋಟಗಾರಿಕಾ ನಿರ್ದೇಶಕರು ಹಾಗೂ ಉನ್ನತಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಈ ತಂಡ ಬೀದರ್, ಕೊಪ್ಪಳ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಮಿಡತೆ ನಿಯಂತ್ರಣ ಮುನ್ನೆಚ್ಚರಿಕೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ಸೂಚನೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts